Tuesday, 21 November 2017

ಮಾಮ್-ಸಂದೇಶ ಸಂವಾದ ಗೋಷ್ಠಿ (21.11.2017) ವರದಿ ಮತ್ತು ಚಿತ್ರಗ್ಯಾಲರಿ


ಮಂಗಳೂರು: ಮುದ್ರಣ ಮಾಧ್ಯಮಕ್ಕೆ ಸ್ವಯಂ ನಿಯಂತ್ರಣದ ವ್ಯವಸ್ಥೆ ಇದೆ. ಒಟ್ಟು ಮಾಧ್ಯಮ ವ್ಯವಸ್ಥೆ ತನ್ನ ಜವಾಬ್ದಾರಿಯನ್ನು ಅರಿತುಕೊಂಡು ಸ್ವಯಂ ನಿಯಂತ್ರಣದ ಕುರಿತು ಆಲೋಚಿಸುವುದು ಅಗತ್ಯ ಎಂದು ಮಾಧ್ಯಮದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರು ನಗರದ ನಂತೂರು ಸಂದೇಶ ಪ್ರತಿಷ್ಠಾನದಲ್ಲಿ ನವೆಂಬರ್ 21ರಂದು ಮಂಗಳವಾರ ನಡೆದ ‘ಮಾಧ್ಯಮಗಳಿಗೆ ಬೇಕೇ ಲಗಾಮು’ ಎಂಬ ವಿಷಯದ ಕುರಿತ ಸಂವಾದ ಗೋಷ್ಠಿಯಲ್ಲಿ ವಿಷಯ ತಜ್ಞರು ಈ ವಿಚಾರ ಮಂಡಿಸಿದರು.
ಮಂಗಳೂರು ವಿಶ್ವವಿದ್ಯಾಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಹಳೆ ವಿದ್ಯಾರ್ಥಿ ಸಂಘ (ಮಾಮ್) ಮಂಗಳೂರು ಹಾಗೂ ಸಂದೇಶ ಪ್ರತಿಷ್ಠಾನ ಈ ಸಂವಾದ ಗೋಷ್ಠಿಯನ್ನು ಆಯೋಜಿಸಿತ್ತು.

ಪತ್ರಕರ್ತರು ಮಾಧ್ಯಮ ಸಂಸ್ಥೆಗಳ ಮಾಲೀಕರ ಆಶಯಕ್ಕೆ ಅನುಗುಣವಾಗಿ ಸ್ವಯಂ ನಿಯಂತ್ರಣ ಹೊಂದಿದ್ದಾರೆ. ಎಲ್ಲ ಪತ್ರಕರ್ತರು ಸ್ವಯಂ ನಿಯಂತ್ರಣ ಹೊಂದಿದಾಗ ಮಾಧ್ಯಮಗಳಿಗೆ ಲಗಾಮು ಹಾಕುವ ಪ್ರಶ್ನೆ ಉದ್ಭವಿಸುವುದಿಲ್ಲ. ಮಾಧ್ಯಮಗಳ ಮಾಲೀಕರ ಆಶಯಕ್ಕೆ ಅನುಗುಣವಾಗಿ ಪತ್ರಕರ್ತ ಕಾರ್ಯನಿರ್ವಹಣೆ ಮಾಡುವ ಕಾರಣ ಮಾಲೀಕರೂ ಸ್ವಯಂ ನಿಯಂತ್ರಣ ಹೊಂದುವ ಬಗ್ಗೆ ಚರ್ಚೆ ನಡೆಯಬೇಕಿದೆ ಎಂಬ ಅಭಿಪ್ರಾಯ ಸಂವಾದದಲ್ಲಿ ವ್ಯಕ್ತಗೊಂಡಿತು.
ಮಂಗಳೂರು ವಿವಿ ಎಂಸಿಜೆ ವಿಭಾಗ ಪ್ರಾಧ್ಯಾಪಕ ಪ್ರೊ.ಡಾ. ಜಿ.ಪಿ.ಶಿವರಾಮ್ ಸಂವಾದ ಉದ್ಘಾಟಿಸಿ, ಮಾಧ್ಯಮಗಳು ಜನರನ್ನು ಮುನ್ನಡೆಸುವ ಜವಾಬ್ದಾರಿ ಹೊಂದಿದೆ. ತಮ್ಮ ಹೊಣೆಗಾರಿಕೆ ಅರಿತುಕೊಂಡು ಕೆಲಸ ಮಾಡಬೇಕಿದೆ. ಪ್ರಸ್ತುತ ದಿನಗಳಲ್ಲಿ ತನಿಖಾ ವರದಿಗಳು ಮಾಯವಾಗಿದ್ದು, ಪತ್ರಕರ್ತರು ಸ್ವಂತಿಕೆಯತ್ತ ಆಲೋಚಿಸಬೇಕಿದೆ. ಸುದ್ದಿ ಬಿತ್ತರ ವಿಷಯದಲ್ಲಿ ನಮಗೆ ನಾವೇ ನಿಯಂತ್ರಣ ಹೇರಿಕೊಳ್ಳಬೇಕು ಎಂದರು.
ಸಂದೇಶ ಪ್ರತಿಷ್ಠಾನದ ನಿರ್ದೇಶಕ ಫಾ.ವಿಕ್ಟರ್ ವಿಜಯ್ ಲೋಬೊ ಮಾತನಾಡಿ, ಸಂವಿಧಾನದ ನಾಲ್ಕನೇ ಅಂಗವಾಗಿರುವ ಮಾಧ್ಯಮವು ಉಳಿದ ಮೂರು ಅಂಗಗಳ ಕೆಲಸ ನಿರ್ವಹಿಸಲು ಹೋದರೆ ಜನರನ್ನು ತಪ್ಪು ದಾರಿಗೆಳೆದಂತಾಗುತ್ತದೆ. ಮಾಧ್ಯಮಗಳು ನ್ಯಾಯಾಧೀಶರಂತೆ ವರ್ತಿಸಬಾರದು ಎಂದರು.
ತಂತ್ರಜ್ಞಾನ ಬೆಳವಣಿಗೆಯಿಂದ ಹಿಂದಿನ ಕಾಲಕ್ಕೆ ಹೋಲಿಸಿದರೆ ಮಾಧ್ಯಮಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗಿದೆ. ತಂತ್ರಜ್ಞಾನಗಳು ವ್ಯವಸ್ಥೆಯನ್ನು ಅಲ್ಲೋಲ, ಕಲ್ಲೋಲ ಮಾಡುತ್ತಿವೆಯೇ ಎಂಬ ಆತಂಕಗಳಿವೆ. ಹೀಗಾಗಿ ನಾವು ಕೊಡುವ ಸುದ್ದಿಗಳು ಸಮಾಜಕ್ಕೆ ಧಕ್ಕೆ ತರುತ್ತಿದೆಯೇ, ಸುದ್ದಿಯ ಪರಿಣಾಮ ಏನು ಎಂದು ಸ್ವವಿಮರ್ಶೆ ಮಾಡಿಕೊಂಡು ಮುಂದುವರಿಯಬೇಕಿದೆ ಎಂದು ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಹೇಳಿದರು.
ಮಾಧ್ಯಮ ಚಿಂತಕ ರಿಚರ್ಡ್ ಡಿಸೋಜ ಮಾತನಾಡಿ, ಮಾಧ್ಯಮಗಳು ಸರ್ಕಾರ ಹಾಗೂ ಜನರ ನಡುವಿನ ಸೇತುವೆಯಾಗಿರುವುದರಿಂದ ಇದರ ಜವಾಬ್ದಾರಿಗಳು ಸಾಕಷ್ಟಿವೆ. ಮಾಧ್ಯಮಕ್ಕೆ ಇತರರು ನಿಯಂತ್ರಣ ಹೇರುವುದಕ್ಕಿಂತಲೂ ಸ್ವಯಂ ನಿಯಂತ್ರಣಕ್ಕೆ ಆದ್ಯತೆ ನೀಡಬೇಕಿದೆ ಎಂದರು.
ವಕೀಲ ಸಂತೋಷ್ ಪೀಟರ್ ಡಿಸೋಜ ಮಾತನಾಡಿ, ಮಾಧ್ಯಮಗಳು ಕಾನೂನಿನ ಚೌಕಟ್ಟು ತಿಳಿದುಕೊಂಡು ಮುಂದುವರಿಯುವುದು ಅತ್ಯಗತ್ಯ. ಹೀಗಾಗಿ ಯಾವುದೇ ಸುದ್ದಿ ಬರೆಯುವಾಗಲೂ ಕಾನೂನನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕಿದೆ ಎಂದರು.
ಪರಿಸರ ಹೋರಾಟಗಾರ ದಿನೇಶ ಹೊಳ್ಳ, ನಮ್ಮನ್ನಾಳುವ ಆಡಳಿತ ವ್ಯವಸ್ಥೆಗಳೇ ಹದಗೆಡುತ್ತಿರುವಾಗ ನಾವು ಮಾಧ್ಯಮದ ಮೇಲೆ ಆರೋಪ ಹೊರಿಸುವುದು ಅಪ್ರಸ್ತುತ. ವ್ಯವಸ್ಥೆಯ ಹಿಂದಿರುವ ಮಾಫಿಯಾವನ್ನು ನಿಯಂತ್ರಣ ಮಾಡುವಲ್ಲಿ ಮಾಧ್ಯಮದ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಪಶ್ಚಿಮ ಘಟ್ಟ ನಾಶ, ನೇತ್ರಾವತಿ ನದಿ ತಿರುವು ಯೋಜನೆ ಬಗ್ಗೆ ಮಾಧ್ಯಮಗಳು ಸರ್ಕಾರ, ಜನರನ್ನು ಎಚ್ಚರಿಸಿವೆ. ಆದರೆ, ಜಿಲ್ಲೆಯ ಜನತೆ ಈ ಎಚ್ಚರಿಕೆಗೆ ಕಿವಿಗೊಡದ ಕಾರಣ ಮುಂದಕ್ಕೆ ಪರಿಣಾಮ ಎದುರಿಸಬೇಕಿದೆ. ಪರಿಸರ, ಅರಣ್ಯ ನಾಶದ ಬಗ್ಗೆ ಪ್ರಶ್ನಿಸಲು ಹೊರಟಾಗ ಸರಕಾರದ ಇಲಾಖೆಗಳೇ ನಿಮಗ್ಯಾಕೆ ಈ ಉಸಾಬರಿ ಎನ್ನುತ್ತಿವೆ. ಇಂತಹ ಸ್ಥಿತಿ ಇರುವಾಗ ಮಾಧ್ಯಮಗಳಾದರೂ ಏನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.
ಮಾಮ್ ಅಧ್ಯಕ್ಷ ಬಾಲಕೃಷ್ಣ ಹೊಳ್ಳ ಸಮಾರೋಪ ಭಾಷಣ ಮಾಡಿದರು. ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ನಡೆಯಿತು. ಮಾಮ್ ಉಪಾಧ್ಯಕ್ಷ ಡಾ. ರೊನಾಲ್ಡ್ ಅನಿಲ್ ಫರ್ನಾಂಡಿಸ್, ಗೌರವಾಧ್ಯಕ್ಷ ವೇಣು ಶರ್ಮ ಸಂವಾದ ನಿರ್ವಹಿಸಿದರು. ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರನ್ನು ಈ ಸಂದರ್ಭ ಗೌರವಿಸಲಾಯಿತು.
ಕಾರ್ಯದರ್ಶಿ ವೇಣುವಿನೋದ್ ಕೆ.ಎಸ್.ಸ್ವಾಗತಿಸಿದರು. ಸ್ಮಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಸಹೋದರ ವಿಕ್ಟರ್ ಕ್ರಾಸ್ತಾ ವಂದಿಸಿದರು.


--------



ವರದಿ: ಹರೀಶ ಕುಲ್ಕುಂದ, 
ಆಹ್ವಾನಪತ್ರಿಕೆ, ಬ್ಯಾನರ್ ವಿನ್ಯಾಸ: ವೇಣುವಿನೋದ್ ಕೆ.ಎಸ್., 
ನಿರ್ವಹಣೆ: ಸ್ಮಿತಾ, ಡಾ.ರೊನಾಲ್ಡ್, ವೇಣು ಶರ್ಮ, ಫಾ.ವಿಕ್ಟರ್ ಹಾಗೂ ಸಂದೇಶ ಪ್ರತಿಷ್ಠಾನ. 
ಸಂಯೋಜನೆ: ಸುರೇಶ್ ಡಿ.ಪಳ್ಳಿ, ಬಾಲಕೃಷ್ಣ ಹೊಳ್ಳ
ಸಂವಹನ, ಬ್ಲಾಗ್ ಅಪ್ಡೇಟ್:  ಕೆಎಂ
ಫೋಟೊಗಳು: ಕೃಷ್ಣಕಿಶೋರ್ ವೈ.