Sunday, 17 February 2019

ಮಾ ಉತ್ಸವದಲ್ಲಿ ಮತ್ತೊಮ್ಮೆ ಯುವಕರಾದ ಹಿರಿಯರು!


ವಿದ್ಯಾರ್ಥಿ ಜೀವನವೆಂದರೆ ಅದೆಷ್ಟೋ ಭಾವನೆಗಳ, ಸಿಹಿ ಕಹಿ ಅನುಭಗಳ ಕಂತೆ. ಅದರಲ್ಲೂ ಸ್ನಾತಕೋತ್ತರ ಶಿಕ್ಷಣವೆಂದರೆ ಸ್ವಲ್ಪ ಪ್ರೌಢಿಮೆ ತುಂಬಿದ ಅನುಭವಗಳು ನಮ್ಮ ಜೋಳಿಗೆಯಲ್ಲಿರುತ್ತವೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಯೊಂದು ತಂಡಗಳಿಗೆ ಅವರದ್ದೇ ಆದ ಗುಂಪುಗಳನ್ನು ಮಾಡಿಕೊಂಡಿದ್ದಾರೆ. ಪ್ರತಿದಿನ ಬೆಳಿಗ್ಗೆಯಾದರೆ ಗುಡ್‌ಮಾರ್ನಿಂಗ್‌, ರಾತ್ರಿಯಾದರೆ ಗುಡ್‌ನೈಟ್‌, ಜತೆಗೆ ಅಲ್ಲೊಂದು ಇಲ್ಲೊಂದು ಹರಿದು ಬರುವ ಫಾರ್ವರ್ಡೆಡ್‌ ಸಂದೇಶಗಳು ಮತ್ತೆ ಫಾರ್‌ವರ್ಡ್‌ ಆಗುತ್ತಾ ಇರುತ್ತವೆ. ಇದನ್ನು ಹೊರತಾಗಿ ಗತಿಸಿದ ವಿದ್ಯಾರ್ಥಿ ಜೀವನವನ್ನು ನೆನಪಿಸಕೊಳ್ಳುವ ಗೋಜಿಗೆ ಯಾರೂ ಹೋಗುವುದಿಲ್ಲ. ಅದಕ್ಕೆ ಸಮಯವೂ ಸಿಗುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ಭಾವನೆಗಳನ್ನು ಬಲಿಷ್ಠವಾಗಿ ಬೆಸೆಯಲು ಸಾಮಾಜಿಕ ಜಾಲತಾಣಗಳಿಂದ ಸಾಧ್ಯವೂ ಇಲ್ಲ.


ಮಂಗಳೂರು ವಿ.ವಿ.ಸ್ನಾತಕೋತ್ತರ ವಿದ್ಯಾರ್ಥಿಗಳ ಹಳೆ ವಿದ್ಯಾರ್ಥಿಗಳ ಸಂಘ (ಮಂಗಳಾ ಆಲ್ಯೂಮ್ನಿ ಅಸೋಸಿಯೇಶನ್ -MAA) ಫೆ.17, 2019 ಭಾನುವಾರ ಮಂಗಳಗಂಗೋತ್ರಿಯ ಮಂಗಳಾ ಆಡಿಟೋರಿಯಂ ಅಂಗಣದಲ್ಲಿ ಆಯೋಜಿಸಿದ್ದ ಮಾ ಉತ್ಸವ 2019 ಹಲವು ಆಹ್ಲಾದಕರ ಕ್ಷಣಗಳಿಗೆ ಸಾಕ್ಷಿಯಾಯಿತು. ಸುಮಾರು 550ಕ್ಕೂ ಮಿಕ್ಕದ ಹಳೆ ವಿದ್ಯಾರ್ಥಿಗಳು ನಾನಾ ಕಡೆಗಳಿಂದ ಬಿಡುವು ಮಾಡಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಅಂದ ಹೆಚ್ಚಿಸಿದರು.

ಆ ದಿನಗಳಲ್ಲಿ ಹೃದಯಕ್ಕೆ ತಟ್ಟಿದ ನೆನಪುಗಳನ್ನು ಅದೇ ಗೆಳೆಯರೊಂದಿಗೆ ಮತ್ತೊಮ್ಮೆ ನೆನಪಿಸಿಕೊಂಡು ಸಂಬಂಧಗಳನ್ನು ಹಸಿರಾಗಿಸಲು ಈ ನಮ್ಮ ಮಾ ಸಂಗಮ, ಮಾ ಉತ್ಸವವೇ ಬೇಕು. ಎರಡು ವರ್ಷದ ಹಿಂದೆ ಮೊದಲ ಬಾರಿಗೆ ಮಂಗಳೂರು ವಿಶ್ವವಿದ್ಯಾಲಯದ ಹಳೆ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸುವ, ಅವರ ನೆನಪುಗಳಿಗೆ ಕೊಂಡಿಯಾಗುವ ಕೆಲಸ ಮಾ ಸಂಗಮ ಮಾಡಿತ್ತು. ಅಂತಹದೇ ಒಂದು ಕಾರ್ಯಕ್ರಮ ಮಾ ಉತ್ಸವವಾಗಿದ್ದರೂ ಅದಕ್ಕಿಂತ ಇದು ಕೊಂಚ ಭಿನ್ನ ಬಿಡಿ. ಅದು ಎರಡೂ ಕಾರ್ಯಕ್ರಮಗಳಿಗೆ ಬಂದವರಿಗೆ ಮಾತ್ರ ತಿಳಿಯಬಹುದು. ಎರಡೂ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಆನಂದಿಸಿ, ಅನುಭವಿಸಿರುವ ಕಾರಣ ನನಗೆ ಗೊತ್ತಿದೆ.

ಮುಂದಿನ ಆಲ್ಯೂಮ್ನಿ ಸಮಾವೇಶದ ವರೆಗೆ ಬೇಜಾರಾದಾಗೆಲ್ಲ ನೆನಪಿಸಿಕೊಂಡು, ನಗಲು, ಅಳಲು, ಕೋಪಿಸಿಕೊಳ್ಳಲು, ನಾಚಿಕೊಳ್ಳಲು ಈ ಮಾ ಉತ್ಸವ ನೆನಪುಗಳನ್ನು ನೀಡಿರುವುದಂತೂ ನಿಜ. ಮಂಗಳ ಗಂಗೋತ್ರಿ ಅರ್ಧ ಶತಕ ಪೂರೈಸಿದ ಖುಷಿಯಲ್ಲಿದೆ. ಆ ನೆಪದಲ್ಲೇ ಅಮ್ಮ ತನ್ನ ಮಕ್ಕಳನ್ನೆಲ್ಲ ಮಡಿಲಿಗೆ ಆಲಂಗಿಸಿದಂತಿದೆ ಈ ಮಾ ಉತ್ಸವ. ಕಳೆದ ಐವತ್ತು ವರ್ಷಗಳಲ್ಲಿ 26 ವಿಭಾಗಗಳಿಂದ ಸಹಸ್ರಾರು ವಿದ್ಯಾರ್ಥಿಗಳು ಪದವಿ ಪಡೆದು ಹೊರ ಹೋಗಿದ್ದಾರೆ. ಪದವಿ ಪಡೆದವರಲ್ಲಿ ಹಲವರು ವಿದೇಶಕ್ಕೆ, ಮತ್ತೆ ಕೆಲವರು ಹೊರ ರಾಜ್ಯಕ್ಕೆ, ಇನ್ನು ಕೆಲವರು ಇನ್ನು ಕೆಲವರು ಇದೇ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಇನ್ನು ಕೆಲವರು ಪಕ್ಕದ ಊರಲ್ಲೇ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಪಕ್ಕದ ಊರಲ್ಲೇ ಇದ್ದರೂ ಹೆಚ್ಚಿನವರಿಗೆ ಮಂಗಳಾ ಕ್ಯಾಂಪಸ್‌ಗೆ ಭೇಟಿಯಾಗಲು ಸಾಧ್ಯವಾಗದೇ ಇರುವವರಿದ್ದಾರೆ. ಅಂತವರನ್ನೆಲ್ಲ ಒಂದು ಕಡೆ ಸೇರಿಸುವ ಮೂಲಕ ಮಾ ಉತ್ಸವ ಹಲವರ ಭಾವನೆಗಳಿಗೆ ಸೇತುವೆ.

ಕ್ಯಾಂಪಸ್‌ನಲ್ಲಿ ಬಂದವರ ನೆನಪುಗಳನ್ನು ಕೆದಕಿದರೆ ಮಾತ್ರ ಸಾಲದು, ಆ ನೆನಪುಗಳನ್ನು ಮತ್ತೆ ಸೃಷ್ಟಿಸುವ ಅವಕಾಶಗಳನ್ನೂ ಕೊಡುವ ನಿಟ್ಟಿನಲ್ಲಿ ಈ ಬಾರಿ ವಿಶೇಷವಾಗಿ ಅಂದು ಫೇಮಸ್‌ ಆಗಿದ್ದ ಕ್ರಿಕೆಟ್‌ ಮತ್ತು ಲಗೋರಿ ಆಟಗಳನ್ನೇ ಆಯೋಜಿಸಲಾಗಿತ್ತು. ಆಟವೆಂದರೆ ಯಾವು ಜೀವಕ್ಕೆ ಆಸೆ ಇಲ್ಲ ಹೇಳಿ. ಕೂದಲು ಬಿಳಿಯಾಗಿದ್ದರೂ ಒಮ್ಮೆ ಬ್ಯಾಟ್‌ ಹಿಡಿದು ಸಿಕ್ಸ್‌ ಬಾರಿಸುವ ಆಸೆ ಇರುತ್ತದೆ. ಆ ಆಸೆಗಳಿಗೆ ಇಂದು ಮಂಗಳಾ ಸಭಾಂಗಣದ ಮೈದಾನ ಸಾಕ್ಷಿಯಾಗಿತ್ತು. ತಂಡಗಳ ನಡುವೆ ಪೈಪೋಟಿ, ಒಂದು ಸೋಲು, ಇನ್ನೊಂದು ಗೆಲುವು, ಆ ಸೋಲಿನೆಡೆಯಲ್ಲೂ ಸಂತೋಷದ ಕಿರುನಗೆ. ಆಟದಲ್ಲಿ ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಎಂಬ ಯಾರೋ ಹೇಳಿದ ಮಾತನ್ನು ನೆನಪಿಸಿಕೊಂಡು ನಮಗೆ ನಾವೇ ಸಮಾಧಾನ ಹೇಳಿಕೊಂಡೂ ಆಯ್ತು. ಬೆಳಿಗ್ಗೆಯಿಂದ ಬೆಂಡಾದ ದೇಹಗಳಿಗೆ ಮಧ್ಯಾಹ್ನ ಭರ್ಜರಿ ಭೋಜನ. ಸಂಜೆ ಎನರ್ಜಿ ಡ್ರಿಂಕ್‌ ಚಹಾ, ಕಾಫಿ, ತಿಂಡಿಯ ಸವಿ. ಇದೆಲ್ಲಕ್ಕಿಂತಲೂ ದೇಹದ ನೋವನ್ನೆಲ್ಲ ಮರೆಸುವ ನಮ್ಮ ಸಹಪಾಠಿಗಳನ್ನು ನೋಡಿದ ಖುಷಿ.
ಅಂದು ಮಂಗಳ ಗಂಗೋತ್ರಿ ಪ್ರಾರಂಭವಾದಾಗ ಇದು ಒಂದೂ ಗಿಡಗಳಿಲ್ಲದ ಬರೀ ಮುಳಿಹುಲ್ಲು ತುಂಬಿದ್ದ ಗುಡ್ಡವಾಗಿತ್ತು. ಕಾಲಕ್ರಮೇಣ ಕಟ್ಟಡಗಳು, ಗಿಡಮರಗಳು, ಮತ್ತೆ ಹೊಸ ಕಟ್ಟಡಗಳಾಗಿ ಕ್ಯಾಂಪಸ್‌ ಸಂಪೂರ್ಣ ಬದಲಾಗಿದೆ. ಇದು ತಾನೇ ಕಲಿತ ಮಂಗಳಾ ಕ್ಯಾಂಪಸ್‌ ಎಂಬುದೂ ಸಂಶಯ ಮೂಡುತ್ತಿದೆ ಎಂದವರು ನಮ್ಮ ವಿಶ್ವವಿದ್ಯಾಲಯದ ಮೊದಲ ಕನ್ನಡ ಬ್ಯಾಚ್‌ನ ವಿದ್ಯಾರ್ಥಿ ಪ್ರೊ. ಬಿ.ಎ. ವಿವೇಕ್‌ ರೈ. ಅವರೂ ಆಶ್ಚರ್ಯ ಪಡುವಂತೆ ನಮ್ಮ ಕ್ಯಾಂಪಸ್‌ ಬದಲಾಗಿದೆ. ದಶಕಗಳು ಉರುಳಿವೆ. ಹೊಸ ಹೊಸ ಬ್ಯಾಚ್‌ಗಳು ಹೊರಳುತ್ತಿವೆ. ಆದರೆ ಬದಲಾಗದೇ ಹಾಗೇ ಉಳಿದಿರುವುದು ಹೃದಯ ತಟ್ಟಿದ ನೆನಪುಗಳು ಮಾತ್ರ.

ಅನುಭವಗಳು ಸವಿಯಲ್ಲವಂತೆ, ಆದರೆ ಅದರ ನೆನಪುಗಳು ಮಾತ್ರ ಸದಾ ಸವಿಯಾಗಿಯೇ ಇರುತ್ತವೆ. ಕಾಲೇಜು ಜೀವನದಲ್ಲಿ ಅನುಭವಿಸಿದ ಕಹಿ ಅನುಭವಗಳೂ ಕೂಡ ಇಂದು ನೆನಪಿಸಿಕೊಳ್ಳುವಾಗ ಏನೋ ಒಂಥರಾ ಖೂಷಿಯಾಗುವುದಿದೆ. ಗೆಳೆಯನೊಂದಿಗೆ ಜಗಳವಾಡಿ ದೂರವಾದ ಘಟನೆ, ಪ್ರೀತಿಗೆ ಒಲಿಯದ ಹುಡುಗಿ, ಪದವಿ ಮುಗಿಸಿ ಕಾಲೇಜು ಬಿಟ್ಟು ಹೋಗಬೇಕಾದ ಸಂದರ್ಭದಲ್ಲಿ ಕಣ್ಣೀರ ಧಾರೆ ಹರಸಿದ್ದರೂ ಅವುಗಳನ್ನು ಇಂದು ನೆನಪಿಸಿಕೊಂಡಾಗ ನಮ್ಮ ಅಂದಿನ ಅವಸ್ಥೆಗೆ ಒಮ್ಮೆ ನಗು ಮೂಡುತ್ತದೆ.

ಕಾಲೇಜಿನಲ್ಲಿದ್ದಾಗ ಪ್ರೇಯಸಿಗಾಗಿ ಅಂದು ಬಾಯಿಪಾಠ ಮಾಡಿದ ಹಿಂದಿ ಗೀತೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಹಾಡಿ ಕುಣಿದದ್ದು ಬಿಟ್ಟರೆ ಮತ್ತೆಂದೂ ವೇದಿಕೆ ಏರದವರು, ಯಾವಾಗಲೂ ಬಾತ್‌ರೂಮ್‌ಲ್ಲಿ ಹಾಡುತ್ತಿದ್ದ ಎಲೆಮರೆಯ ಸಿಂಗರ್‌ಗಳು, ಮಾತಿನಮಳ್ಳಿಗಳು ಇಂದು ನಮ್ಮ ಸಾಂಸ್ಕೃತಿಕ ವೇದಿಕೆಯ ಮೂಲಕ ಹೊರ ಬಂದಿದ್ದರು. ಅಂದು ಕಾಲೇಜಿಗೆ ಬರಲು ಈ ದಾರಿಯಲ್ಲಿ ಬಸ್ಸುಗಳಿರಲಿಲ್ಲ. ತೊಕ್ಕೊಟ್ಟಿನಿಂದ ಇಲ್ಲಿಯವರೆಗೆ ನಡೆದುಕೊಂಡೇ ಬರುತ್ತಿದ್ದೆವು. ಅಂದು ತರಗತಿಯಲ್ಲಿ ಕುಳಿತು ಶಿಕ್ಷಕರಿಗೆ ಚೇಷ್ಟೆಗಳನ್ನು ಮಾಡುತ್ತಿದ್ದ ನಾವು ಇಂದು ಅದೇ ಶಿಕ್ಷಕರ ಸ್ಥಾನದಲ್ಲಿ ನಿಂತು ಮಕ್ಕಳ ಚೇಷ್ಟೆಗೆ ಮೂಕಪ್ರೇಕ್ಷರಾಗುತ್ತಿದ್ದೇವೆ. ನಾನು ಬೇರೆ ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಿಕೊಳ್ಳುವ ಬದಲು ಮಂಗಳೂರು ವಿವಿಯನ್ನು ಆಯ್ಕೆ ಮಾಡಿಕೊಂಡದ್ದಕ್ಕೆ ಹೆಮ್ಮೆಯೆನಿಸುತ್ತದೆ. ಮೊದಲ ಬ್ಯಾಚ್‌ನ ವಿದ್ಯಾರ್ಥಿ ಎಂದು ಹೇಳಿಕೊಳ್ಳುವುದರಲ್ಲೇ ಒಂದು ಗೌರವವಿದೆ ಎಂದೆಲ್ಲಾ ಇದುವರೆಗೆ ಬಚ್ಚಿಟ್ಟಿದ್ದ ನೆನಪುಗಳ ಸುರಿಮಳೆ ಸುರಿಸಿದರವು ಹಲವರು.

ಸೆಲ್ಫಿಗಳು ಹೊಸ ಜಾಯಮಾನದ ಟ್ರೆಂಡ್‌ ಆಗಿದ್ದರೂ ತನ್ನ ಸಹಪಾಠಿಗಳನ್ನೆಲ್ಲ ಒಟ್ಟಿಗೆ ಕಂಡಾಗ ಈ ಕ್ಷಣವನ್ನು ಜೀವಂತವಾಗಿರಿಸಲು ಹಿರಿಯರು ಆರಿಸಕೊಂಡದ್ದೂ ಸೆಲ್ಫಿ ಮೋಡ್‌. ಆದರೆ ಆ ಸೆಲ್ಫಿಗಿಂತಲೂ ಅವರಲ್ಲಿ ಜೀವಂತವಾಗಿರುವ ಅದೆಷ್ಟೋ ಫಳ ಫಳ ಹೊಳೆಯೋ ನೆನಪುಗಳು ನಮ್ಮಂತಹ ಕಿರಿಯ ಹಳೆ ವಿದ್ಯಾರ್ಥಿಗಳನ್ನು ಆಕರ್ಷಿಸಿದ್ದಂತು ಸತ್ಯ. ಹಿರಿಯ ಜೀವಗಳಿಂದ ಹೊಸ ತಲೆಮಾರಿಗೆ ನಮ್ಮ ವಿಶ್ವವಿದ್ಯಾಲಯ ಹುಟ್ಟಿ ಬೆಳೆದುಬಂದ ಕಥನದ ದರ್ಶನ.
----------------------------


-ಬರಹ: ಮೇಘಲಕ್ಷ್ಮೀ ಮರುವಾಳ (2017ರ ಬ್ಯಾಚಿನ ಎಂಸಿಜೆ), ಪ್ರಜಾವಾಣಿ, ಮಂಗಳೂರು.

ನಿರ್ವಹಣೆ: ಕೆಎಂ ತಲೆಂಗಳ.
-ಮಾಧ್ಯಮ ಸಹಯೋಗ, ಪ್ರಚಾರ:
ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್)












‘ನೆಟ್‌ವರ್ಕಿಂಗ್‌ ಡಿಜಿಟಲ್‌ಗಿಂತ ನೈಜ ರೂಪದಲ್ಲಿರಲಿ’
ಮಂಗಳಗಂಗೋತ್ರಿಯಲ್ಲಿ ಮಾ ಉತ್ಸವ ಉದ್ಘಾಟಿಸಿದ ಪ್ರೊ. ವಿವೇಕ್‌ ರೈ

-------------

ಮಂಗಳೂರು: ಹಳೆ ವಿದ್ಯಾರ್ಥಿಗಳ ಸ್ನೇಹ ಸಂಬಂಧಗಳು ಡಿಜಿಟಲ್‌ ರೂಪದಲ್ಲಿ ಮಾತ್ರ ಗಟ್ಟಿಯಾಗುತ್ತಿದೆ. ಅದರೊಂದಿಗೆ ನೈಜ ರೂಪದಲ್ಲೂ ಇರಲಿ ಎಂದು ಮಂಗಳೂರು ವಿಶ್ವವಿದ್ಯಾಲಯದ ಮೊದಲ ಬ್ಯಾಚ್‌ನ ವಿದ್ಯಾರ್ಥಿ ಹಾಗೂ ನಿವೃತ್ತ ಕುಲಪತಿ ಪ್ರೊ. ಬಿ.ಎ. ವಿವೇಕ್‌ ರೈ ಹೇಳಿದರು.

ಮಂಗಳಾ ಅಲ್ಯೂಮ್ನಿ ಅಸೋಸಿಯೇಶನ್‌ (ಮಾ) ವತಿಯಿಂದ ಭಾನುವಾರ ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಆಡಿಯೋರಿಯಂ ಅಂಗಳದಲ್ಲಿ ನಡೆದ ‘ಮಾ ಉತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.

‘ಮಂಗಳೂರು ವಿಶ್ವವಿದ್ಯಾಲಯದಲ್ಲಿ ಓದಿ ಇಂದು ಉದ್ಯೋಗ ನಿಮಿತ್ತ ಬೇರೆ ಬೇರೆ ಊರುಗಳಲ್ಲಿದ್ದರೂ ಗೆಳೆಯರೊಂದಿಗೆ, ಕಾಲೇಜಿನೊಂದಿಗೆ ಸಂಪರ್ಕವನ್ನು ಹೊಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರದ್ದೇ ಆದ ತಂಡಗಳಿವೆ. ಕಷ್ಟ ಸುಖಗಳ ವಿನಿಮಯವಾಗುತ್ತದೆ. ಆದರೆ ಅದು ಡಿಜಿಟಲ್‌ ರೂಪಕ್ಕೆ ಸೀಮಿತವಾಗದೇ, ಮುಖತಃ ಭೇಟಿಯಾಗಿ ಭಾವನಾತ್ಮಕ ಸಂಬಂಧಗಳನ್ನು ಗಟ್ಟಿಗೊಳಿಸುವ ರೂಪದಲ್ಲಿರಬೇಕು. ವೆಬ್‌ಸೈಟ್‌ನಲ್ಲಿ ಹಳೆ ವಿದ್ಯಾರ್ಥಿಗಳ ವಿಳಾಸಗಳನ್ನು ನಮೂದಿಸುವುದು ಮಾತ್ರವಲ್ಲ, ಅವರಿಗಾಗಿ ಒಂದೊಂದು ಪೋರ್ಟಲ್‌ಗಳನ್ನೂ ನೀಡಿ. ಅವರಲ್ಲಿ ಕ್ಯಾಂಪಸ್‌ನಲ್ಲಿ ಕಳೆದ ದಿನಗಳ ನೆನಪುಗಳಿವೆ, ಅನುಭಗಳಿವೆ ಅವುಗಳನ್ನೂ ಹಂಚಿಕೊಳ್ಳಲು ವೇದಿಕೆಯಾಗುತ್ತದೆ’ ಎಂದು ತಿಳಿಸಿದರು.

‘ನಾವು ವಿಶ್ವವಿದ್ಯಾಲಯಕ್ಕೆ ಪುರಾತನರಲ್ಲಿ ಪುರಾತನರು. ವಿದ್ಯಾಲಯದಲ್ಲಿ ಮೊದಲ ಬ್ಯಾಚ್‌ನ ವಿದ್ಯಾರ್ಥಿಯಾಗಿ, ಉಪನ್ಯಾಸಕನಾಗಿ ವಿಶ್ವವಿದ್ಯಾಲಯದೊಂದಿಗೆ 36 ವರ್ಷಗಳ ನಂಟಿದೆ. ಇದು ನನ್ನದೇ ಕಾಲೇಜು, ನಾನು ಇಲ್ಲಿ ಅತಿಥಿಯೆಂದರೆ ಮುಜುಗರವಾಗುತ್ತದೆ. ಇಲ್ಲಿರುವವರೆಲ್ಲ ನನ್ನ ಕುಟುಂಬ. ಹಂಪಿ ವಿಶ್ವವಿದ್ಯಾಲಯದಲ್ಲಿ ಕುಲಪತಿಯಾಗುವ ಅರ್ಹತೆ ನೀಡಿದ್ದು ಈ ನನ್ನ ಮಂಗಳಗಂಗೋತ್ರಿ. ನಾಯಕತ್ವ ಗಳಿಸಿಕೊಳ್ಳುವುದನ್ನು ಗಂಗೋತ್ರಿ ಕಲಿಸಿಕೊಟ್ಟಿತ್ತು. ಬಾನಲ್ಲಿ ಹಾರುತ್ತಿರುವ ನನ್ನಂತಹ ಹಲವಾರು ಬಲೂನುಗಳಿಗೆ ಹಾರುವ ಶಕ್ತಿಯನ್ನು ತುಂಬಿದ್ದು ಈ ವಿಶ್ವವಿದ್ಯಾಲಯ. ನಾವು ಬಂದಾಗ ಗಿಡಮರಗಳಿಲ್ಲದ ಬರೀ ಮುಳಿಹುಲ್ಲಿನ ಗುಡ್ಡವಾಗಿತ್ತು. ಇಂದು ನೋಡಿದರೆ ನಾನಂದು ಕಲಿತ ಮಂಗಳಗಂಗೋತ್ರಿ ಇದುವೇನಾ ಎಂಬ ಸಂಶಯ ಮೂಡುತ್ತಿದೆ. ಬದಲಾವಣೆ ಹಾಸುಹೊಕ್ಕಾಗಿ ನಿಂತಿದೆ’ ಎಂದು ತಮ್ಮ ಹಳೇ ನೆನಪುಗಳನ್ನು ಹಂಚಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಮಾ ಸಂಘಟನೆಯ ಗೌರವಾಧ್ಯಕ್ಷ ಅನಂತಕೃಷ್ಣ ಮಾತನಾಡಿ, ‘ವಿಶ್ವವಿದ್ಯಾಲಯದ ಮೊದಲ ಬ್ಯಾಚ್‌ ಎಂದು ಹೇಳಿಕೊಳ್ಳುವುದೇ ಹೆಮ್ಮೆ ಎನಿಸುತ್ತದೆ. ಮಂಗಳೂರು ವಿಶ್ವವಿದ್ಯಾಲಯದ ಸ್ಥಾಪನೆಗೆ ನಾರಾಯಣ ಅಡಿಗ, ಎಸ್‌.ವಿ.ಪಿ. ಹಲವಾರು ಗಣ್ಯರ ಅವಿರತ ಶ್ರಮ ಕಾರಣವಾಗಿದೆ. ಅಂತಹ ಬಹುದೊಡ್ಡ ಕನಸಿನೊಂದಿಗೆ, ಹಲವರ ಬೆವರಹನಿಯಿಂದ ಹುಟ್ಟಿ ಬೆಳೆದ ಮಂಗಳಗಂಗೋತ್ರಿಯಲ್ಲಿ ಕಲಿತು ಗಳಿಸಿದ ಅನುಭವಗಳೇ ದೊಡ್ಡದು. ಹಲವಾರು ತಂಡಗಳು ಬಂದು ಹೋಗುತ್ತಿವೆ. ತಂಡಗಳೊಳಗಿನ ಬಂಧುತ್ವ ಹೆಚ್ಚಿದೆ. ಆ ಬಂಧುತ್ವ ಇನ್ನಷ್ಟು ಗಟ್ಟಿಯಾಗಲಿ. ಅದುವೇ ನಮಗೆ ದಾರಿದೀಪ’ ಎಂದು ಹೇಳಿದರು.

ಮಂಗಳೂರು ವಿ.ವಿ.ಪ್ರಭಾರ ಕುಲಪತಿ ಪ್ರೊ.ಈಶ್ವರ ಪಿ., ಕುಲಸಚಿವ ಪ್ರೊ.ಎಂ.ಎಂ.ಖಾನ್ ಇದ್ದರು.

ಮಾ ಕಾರ್ಯಕ್ರಮ ಸಂಯೋಜಕ ಪ್ರೊ.ಪಿ.ಎಲ್.ಧರ್ಮ ಪ್ರಾಸ್ತಾವಿಕ ಮಾತನಾಡಿದರು. ಮಾ ಅಧ್ಯಕ್ಷ ದಿನೇಶ್ ಕುಮಾರ್ ಆಳ್ವ ಕ್ರಿಕೆಟ್ ಮ್ಯಾಚ್ ಉದ್ಘಾಟಿಸಿ, ಸ್ವಾಗತಿಸಿದರು. ಮಾ ಕಾರ್ಯದರ್ಶಿ ಗಣೇಶ್ ಸಂಜೀವ್ ವಂದಿಸಿದರು. ಡಾ.ದೇವಿಪ್ರಭಾ ನಿರೂಪಿಸಿದರು.


ಮಾ ಉತ್ಸವ ಪ್ರಯುಕ್ತ ಆಯೋಜಿಸಿದ್ದ ಕ್ರಿಕೆಟ್ ಪಂದ್ಯದಲ್ಲಿ ಅರ್ಥಶಾಸ್ತ್ರ ವಿಭಾಗ ಪ್ರಥಮ, ಇಂಡಸ್ಟ್ರಿಯಲ್ ಕೆಮಿಸ್ಟ್ರಿ ವಿಭಾಗ ದ್ವಿತೀಯ, ಲಗೋರಿ ಪಂದ್ಯದಲ್ಲಿ ಸ್ಟಾಟಿಸ್ಟಿಕ್ಸ್ ವಿಭಾಗ ಪ್ರಥಮ ಹಾಗೂ ಬಯೋ ಸೈನ್ಸ್ ವಿಭಾಗ ದ್ವಿತೀಯ ಸ್ಥಾನ ಪಡೆಯಿತು. ಪ್ರಧಾನ ವೇದಿಕೆಯಲ್ಲಿ ಹಳೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಅಚ್ಚುಕಟ್ಟಾದ ಉಪಹಾರ, ಭೋಜನದ ವ್ಯವಸ್ಥೆ ಇತ್ತು.