Monday, 11 November 2024

MAAM ವಾಟ್ಸಪ್‌ ಬಳಗಕ್ಕೆ 10 ವರ್ಷ ಪೂರ್ಣ!

ಆತ್ಮೀಯರೇ

ಮಂಗಳಗಂಗೋತ್ರಿ ಕ್ಯಾಂಪಸ್ಸಿನ ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಕಲಿತ ಹಳೆ ವಿದ್ಯಾರ್ಥಿಗಳಾದ ನಾವೆಲ್ಲರ ಒಟ್ಟಿಗೆ ಇರಲು ಕಾರಣವಾದ ಈ ವಾಟ್ಸಪ್‌ ಗ್ರೂಪು ಶುರುವಾಗಿ ಇಂದಿಗೆ 10 ವರ್ಷಗಳು ಪೂರ್ತಿಯಾಗಿವೆ. 2014 ನ.12ರಂದು ನಾವು ಹಳೆ ವಿದ್ಯಾರ್ಥಿಗಳ ಸಂಘಟನೆ ಮತ್ತು ತ್ವರಿತ ಸಂವಹನ ಉದ್ದೇಶದಿಂದ ಈ ವಾಟ್ಸಪ್‌ ಗ್ರೂಪು ಶುರು ಮಾಡಿದ್ದೆವು. ಗ್ರೂಪು ಇಂದು ದಶಮಾನದ ಸಂಭ್ರಮದಲ್ಲಿದೆ ಎಂದು ಘೋಷಿಸಲು ಖುಷಿಯಾಗುತ್ತಿದೆ.
2014ರಲ್ಲಿ ಎಂಸಿಜೆ ವಿಭಾಗಕ್ಕೆ (ಈಗ ಇದರ ಹೆಸರು ಜೆಎಂಸಿ) 25 ವರ್ಷ ಪೂರ್ತಿಯಾಯಿತು. ಆ ಸಂಭ್ರಮವನ್ನು ಆಚರಿಸಲು ಆಗ ನಾವು ಎಂಸಿಜೆ ಎರಡನೇ ಬ್ಯಾಚಿನ ವಿದ್ಯಾರ್ಥಿಗಳಾದ ಫ್ಲೋರಿನ್ ರೋಚ್‌, ದಿ.ಸುರೇಂದ್ರ ಶೆಟ್ಟಿ ಇವರೊಂದಿಗೆ ಹಳೆ ವಿದ್ಯಾರ್ಥಿಗಳಾದ ಶರತ್ ಹೆಗ್ಡೆ, ರೊನಾಲ್ಡ್ ಅನಿಲ್ ಫರ್ನಾಂಡಿಸ್, ಯೋಗೀಶ್ ಹೊಳ್ಳ, ಹರೀಶ್ ಮೋಟುಕಾನ, ಸುಶಿಲೇಂದ್ರ, ವೇಣುವಿನೋದ್‌, ವೇಣು ಶರ್ಮ, ವಸಂತ ಕೊಣಾಜೆ, ಸ್ಮಿತಾ ಶೆಣೈ, ಕೃಷ್ಣ ಕಿಶೋರ್‌ ಮತ್ತಿತರು ಸೇರಿ ಒಂದು ಅನೌಪಚಾರಿಕ ಸಮಿತಿ ರಚಿಸಿ ಅದೇ ವರ್ಷ ಎಂಸಿಜೆ 25 ಹೆಸರಿನ ಹಳೆ ವಿದ್ಯಾರ್ಥಿಗಳ ಸ್ನೇಹಮಿಲನ (ರಿಯೂನಿಯನ್) ಸಂಘಟಿಸಿದ್ದೆವು. ಆಗ ದಿ.ಸುರೇಂದ್ರ ಶೆಟ್ಟಿ ಅವರು ಈ ಸಂಘಟನೆಯ ಅಧ್ಯಕ್ಷರಾಗಿದ್ದರು. ಎಂಸಿಜೆ 25 ಸಮಾರಂಭದ ದಿನ ಈಗ ಅಸ್ತಿತ್ವದಲ್ಲಿರುವ ಮೀಡಿಯಾ ಅಲ್ಯುಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ ಅಥವಾ MAAM ಪುನರ್ ರಚನೆಯಾಯಿತು.
ಯಾಕೆ ‘ಪುನರ್ ರಚನೆ’ ಆಯಿತು ಎಂದರೆ ಇದೇ ಹೆಸರಿನ ಸಂಘಟನೆ ಬೆಂಗಳೂರಿನಲ್ಲಿ 1990ರ ದಶಕಾಂತ್ಯದಲ್ಲಿ ಒಮ್ಮೆ ಸ್ಥಾಪನೆಯಾಗಿ ಹಲವು ಚಟುವಟಿಕೆಗಳನ್ನು ನಡೆಸಿದ್ದು, ಈಗಿನ ಮಾಮ್ ಅಧ್ಯಕ್ಷ ನವೀನ್ ಅಮ್ಮೇಂಬಳ, ಉಪೇಂದ್ರ ಶೆಟ್ಟಿ, ಅರವಿಂದ ಶೆಟ್ಟಿ, ವೇಣು ಶರ್ಮ ಸಹಿತ ಹಲವರು ಆ ಸಂಘಟನೆಯಲ್ಲಿ ಆಗ ಸಕ್ರಿಯರಾಗಿದ್ದರು. ಬಳಿಕ ಕಾರಣಾಂತರಗಳಿಂದ ಈ ಸಂಘಟನೆ ಚಟುವಟಿಕೆ ನಿಂತು ಹೋಯಿತು.
ಇದಾದ ನಂತರ 2014ರಲ್ಲಿ ಎಂಸಿಜೆ ವಿಭಾಗದ ಬೆಳ್ಳಿ ಹಬ್ಬ ಆಚರಣೆ ಸಂದರ್ಭ ಮತ್ತೆ ಸ್ಥಾಪಿಸಿದ ಹಳೆ ವಿದ್ಯಾರ್ಥಿಗಳ ಸಂಘಕ್ಕೆ MAAM ಎಂಬ ಅದೇ ಹೆಸರು ಇರಿಸಿದ್ದು, ನಂತರ ನಾವು ವಿವಿಧ ಅಧ್ಯಕ್ಷರ ಅವಧಿಯಲ್ಲಿ ಈ ಹತ್ತು ವರ್ಷಗಳ ಅ‍ವಧಿಯಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಈಗ ಇತಿಹಾಸ.
ನಮ್ಮ ಪ್ರತಿ ಚಟುವಟಿಕೆಯ ವಿವರ ನಮ್ಮ ಬ್ಲಾಗ್‌ನಲ್ಲಿ ಲಭ್ಯವಿದೆ. ಅದರ ಕೊಂಡಿಯನ್ನು ಈ ಬರಹದ ಕೊನೆಯಲ್ಲಿ ಹಂಚಿಕೊಂಡಿದ್ದೇನೆ. ನಮ್ಮ ಮಾಮ್ ಬಳಗ ನೋಂದಣಿಯಾಗಿದೆ. ಅಧಿಕೃತ ಬ್ಯಾಂಕ್‌ ಖಾತೆ ಇದೆ. ಮಾಮ್ ಇನ್ ಸ್ಪೈರ್ ಅವಾರ್ಡ್ ಹೆಸರಿನಲ್ಲಿ ಪ್ರತಿ ವರ್ಷ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡುತ್ತಾ ಬಂದಿರುವುದು ನಮ್ಮ ಸಂಘಟನೆಯ ಹೆಗ್ಗಳಿಕೆಯೇ ಸರಿ.
ನಮ್ಮ ಈ ಗ್ರೂಪಿನಲ್ಲಿ ಮೊದಲನೇ ಬ್ಯಾಚಿನಿಂದ ತೊಡಗಿ ಇತ್ತೀಚಿನ ಬ್ಯಾಚುಗಳ ವರೆಗೂ (ಕಳೆದ ಐದಾರು ವರ್ಷಗಳಿಂದ ಅಪ್ಡೇಟ್ ಆಗಿಲ್ಲ) ಕಲಿತ ಸುಮಾರು 182 ಹಳೆ ವಿದ್ಯಾರ್ಥಿಗಳಿದ್ದಾರೆ. ಅಂದಾಜು 400ಕ್ಕೂ ಅಧಿಕ ಹಳೆ ವಿದ್ಯಾರ್ಥಿಗಳು ನಮ್ಮ ವಿಭಾಗದಲ್ಲಿ ಕಲಿತಿದ್ದರೂ ಅವರೆಲ್ಲರನ್ನೂ ಇಲ್ಲಿ ಸೇರಿಸಲು ಸಾಧ್ಯವಾಗಿಲ್ಲ. ಇನ್ನು ಕೆಲವರು ಗ್ರೂಪಿಗೆ ಸೇರಿದ್ದರೂ ವಿವಿಧ ಸಂದರ್ಭಗಳಲ್ಲಿ ತ್ಯಜಿಸಿ ಹೋದದ್ದೂ ಇದೆ.
ಏನೇ ಇರಲಿ. ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ, ಮಾಧ್ಯಮಕ್ಕೆ ಹೊರತಾಗಿ ಖಾಸಗಿ ಸಂಸ್ಥೆಗಳಲ್ಲಿ, ಸ್ವ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ನಾವು 182 ಮಂದಿಯೂ ಎಂಸಿಜೆ ಹಳೆ ವಿದ್ಯಾರ್ಥಿಗಳೆಂಬ ಸಾಮಾನ್ಯ ಆಸಕ್ತಿಯಿಂದ ಈ ತನಕ ಜೊತೆಗಿದ್ದೆವು. ಮುಂದೆಯೂ ನಮ್ಮ ಚಟುವಟಿಕೆಗಳಿಗೆ ಈ ಗ್ರೂಪು ಅತ್ಯುತ್ತಮ ವೇದಿಕೆ ಆಗಿರಲಿ ಎಂಬ ಸದಾಶಯ ನಮ್ಮದು. ಮುಂದೆಯೂ ನಿಮ್ಮ ಸಹಕಾರ ಇರಲಿ. ಈ ತನಕ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು.
ಗ್ರೂಪಿನ ಬಗ್ಗೆ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಲು ಅವಕಾಶ ಇದೆ.

-ಕೃಷ್ಣಮೋಹನ, ಸ್ಥಾಪಕ ಅಡ್ಮಿನ್, ಮಾಮ್ ವಾಟ್ಸಪ್ ಬಳಗ.



Thursday, 12 September 2024

ಸೈಬರ್ ಜಾಗೃತಿ ಕಾರ್ಯಾಗಾರ ಮಾಧ್ಯಮ ವರದಿಗಳು (12.08.2024)






MAAM ಸಹಯೋಗ: ಬೆಂಗಳೂರಿನಲ್ಲಿ ಸೈಬರ್‌ ಜಾಗೃತಿ ಕಾರ್ಯಕ್ರಮ (12.09.2024)




ಹ್ಯಾಕರ್‌ಗಳು ವೃತ್ತಿಪರರು, ಸಂಘಟಿತರು-ಸೈಬರ್ ಜಾಗೃತಿ ಕಾರ್ಯಕ್ರಮದಲ್ಲಿ ಕಳವಳ

.......

ಬೆಂಗಳೂರು: ಹ್ಯಾಕರ್‌ಗಳು ಇತ್ತೀಚೆಗೆ ವೃತ್ತಿಪರರು ಮತ್ತು ಸಂಘಟಿತರಾಗಿದ್ದಾರೆ ಎಂದು ಡೇಟಾ ಸೆಕ್ಯೂರಿಟಿ ಕೌನ್ಸಿಲ್ ಆಫ್ ಇಂಡಿಯಾದ ಹಿರಿಯ ನಿರ್ದೇಶಕ ಕೆ. ವೆಂಕಟೇಶ್ ಮೂರ್ತಿ ಹೇಳಿದರು.

ಬೆಂಗಳೂರು ಆಕಾಶವಾಣಿ ವತಿಯಿಂದ, ಮೀಡಿಯಾ ಅಲೂಮ್ನಿ ಅಸೋಸಿಯೇಷನ್ ಆಫ್ ಮಂಗಳಗಂಗೋತ್ರಿ (ಮಾಮ್), ಶಾರದಾ ವಿಕಾಸ ಟ್ರಸ್ಟ್ ಸಹಯೋಗದಲ್ಲಿ ಬಸವನಪುರದ ರಾಕ್ವುಡ್ ಗ್ರೀನ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಗುರುವಾರ ನಡೆದ ಸೈಬರ್ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಹ್ಯಾಕರ್ ಅಥವಾ ಹ್ಯಾಕಿಂಗ್ ಅನ್ನುವುದನ್ನು ನಕಾರಾತ್ಮಕ ಅರ್ಥದಲ್ಲಿ ಬಳಸಬೇಕಾಗಿಲ್ಲ. ಆದರೆ ಅನಧಿಕೃತವಾಗಿ ಡಿಜಿಟಲ್ ಮಾಹಿತಿಯನ್ನು ಕದಿಯುವುದು, ದುರ್ಬಳಕೆ ಮಾಡುವ ಪ್ರಕರಣಗಳು ವಿಪರೀತವಾಗಿ ಹೆಚ್ಚಿರುವುದರಿಂದ ಹ್ಯಾಕಿಂಗ್‌ನ್ನು ನಕಾರಾತ್ಮಕವಾಗಿ ಅರ್ಥೈಸಲಾಗುತ್ತಿದೆ. ಹ್ಯಾಕರ್‌ಗಳಿಗೆ ತಾಳ್ಮೆ ಬೇಕು. ಅದಕ್ಕೆಂದೇ ಅಂತರ್ಜಾಲದ ಕಪ್ಪು ಜಗತ್ತಿನಲ್ಲಿ ‘ತಾಳ್ಮೆ’ ‘ಧ್ಯಾನ’ದ ಕೋರ್ಸ್‌ಗಳನ್ನೂ ಕಲಿಸಲಾಗುತ್ತಿದೆ. ಕೆಲವು ಡಿಜಿಟಲ್ ಅರ್ಥ ವ್ಯವಸ್ಥೆಗಳ (ಕ್ರಿಪ್ಟೋಕರೆನ್ಸಿ) ಮೇಲೆ ನಿಯಂತ್ರಣ ಸಾಧಿಸುವುದೇ ಕಷ್ಟವಾಗಿದೆ. ನಮ್ಮ ಮಾಹಿತಿಯನ್ನು ಕದ್ದು, ಪೊಲೀಸರಿಗೆ ತಾವೇ ದೂರು ನೀಡುವ ಖದೀಮರೂ (ರಾನ್ಸಮ್ ಗ್ಯಾಂಗ್) ಇದ್ದಾರೆ. ಹಾಗಾಗಿ ಈ ಎಲ್ಲ ವ್ಯವಸ್ಥೆಗಳಿಂದ ಪಾರಾಗಲು ನಮ್ಮ ಡಿಜಿಟಲ್ ಖಾಸಗಿತನವನ್ನು ರಕ್ಷಿಸಿಕೊಳ್ಳಬೇಕು. ಆನ್ಲೈನ್ ಅಪರಿಚಿತರಿಂದ ದೂರವಿರುವುದು ಕ್ಷೇಮ’ ಎಂದರು.

ಬೆಂಗಳೂರು ಉತ್ತರ ಸೆನ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶಿವರತ್ನಾ ಎಸ್. ಮಾತನಾಡಿ, ‘ ಸೈಬರ್- ಆರ್ಥಿಕ ಮತ್ತು ಮಾದಕವಸ್ತು ಅಪರಾಧ ಠಾಣೆಗೆ ತಿಂಗಳಿಗೆ ಸರಾಸರಿ 3 ಸಾವಿರ ದೂರುಗಳು ಬರುತ್ತಿವೆ. ಸೈಬರ್ ಅಪರಾಧದಿಂದ ಆರ್ಥಿಕ ನಷ್ಟವೊಂದೇ ಅಲ್ಲ, ಸಾಮಾಜಿಕ ಜಾಲತಾಣಗಳ ಮೂಲಕ ವಿವಿಧ ಆಮಿಷ ನೀಡುವುದು, ನಗ್ನತೆ ಪ್ರಸಾರ ಮಾಡುವುದು ನಡೆಯುತ್ತಿದೆ. ಇದರಿಂದಾಗಿ ಹದಿಹರೆಯದವರು ಮತ್ತು ಮಕ್ಕಳು ಮಾನಸಿಕ ಕ್ಷೋಭೆಗೆ ಒಳಗಾಗಿದ್ದಾರೆ. ಹಾಗಾಗಿ ಸೈಬರ್ ಜಾಗೃತಿ ಎಲ್ಲ ವಯೋಮಾನದವರಿಗೂ ಅಗತ್ಯ ’ ಎಂದರು.

ಆನ್ಲೈನ್ ಮೂಲಕ ಆರ್ಥಿಕ ಮತ್ತು ಆರ್ಥಿಕೇತರ ಅಪರಾಧಗಳು ನಡೆಯುತ್ತವೆ. ನಿಮಗೆ ಗೊತ್ತಿರುವವರ ಹೆಸರಿನಲ್ಲಿ ಯಾವುದೋ ಲಿಂಕ್ ಕಳುಹಿಸಿ ಅದನ್ನು ಕ್ಲಿಕ್ ಮಾಡಿದಾಗ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ನಡೆಯುವ ಎಲ್ಲ ಚಟುವಟಿಕೆಗಳನ್ನು ಬೇರೆಯವರು ವೀಕ್ಷಿಸುವ, ಅದನ್ನು ಬಳಸಿ ಮಾಹಿತಿ ದುರುಪಯೋಗ ಮಾಡುವ ಸಾಧ್ಯತೆಗಳು ಹೆಚ್ಚು ಇವೆ. ಹಾಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಆಹ್ವಾನ ಸ್ವೀಕರಿಸುವಾಗ ಹತ್ತಾರು ಬಾರಿ ಪರಿಶೀಲಿಸಬೇಕು. ಮೊಬೈಲ್‌ಗಳಲ್ಲಿ ನಮ್ಮ ಖಾತೆಯ ಸುರಕ್ಷತೆಯನ್ನು ಆಗಾಗ ಖಾತ್ರಿಪಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಆ್ಯಂಝೆನ್ ಟೆಕ್ನಾಲಜೀಸ್‌ನ ಆಡಳಿತ ನಿರ್ದೇಶಕ ತರುಣ್ ಕೃಷ್ಣಮೂರ್ತಿ ಮಾತನಾಡಿ, ‘ಅಂತರ್ಜಾಲದ ಮೂಲಕ ಒಂದು ನಗರ ಅಥವಾ ವಿಶ್ವವೇ ಸಂಕುಚಿತವಾಗಿಬಿಟ್ಟಿದೆ. ಈ ಹೊತ್ತಿನಲ್ಲಿ ಭದ್ರತೆಯ ಕಾಳಜಿಗಳೂ ಹೆಚ್ಚಿವೆ. ಆದ್ದರಿಂದ ನಮ್ಮ ಉಪಕರಣಗಳ ಸುರಕ್ಷತೆಗೆ ಸಂಬಂಧಿಸಿದಂತೆ ಜಾಗರೂಕರಾಗಿರಬೇಕು. ಪಾಸ್ವರ್ಡ್, ಕೋಡ್, ಒಟಿಪಿ ಇತ್ಯಾದಿಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಒಂದು ಡಿಜಿಟಲ್ ಉಪಕರಣ ಬಳಸುವಾಗ ನಿಮ್ಮ ಖಾತೆ (ಇಮೇಲ್/ ವಾಟ್ಸ್ ಆ್ಯಪ್ ಅಥವಾ ಸಾಫ್ಟ್ವೇರ್) ಇನ್ನೊಂದು ಉಪಕರಣದಲ್ಲಿ ಮುಕ್ತವಾಗಿ ಚಾಲನೆಯಲ್ಲಿ ಇರಬಾರದು. ವಿದ್ಯಾರ್ಥಿ ಬದುಕಿನಲ್ಲಿಯೂ ನಮ್ಮ ವೈಯಕ್ತಿಕ ಮಾಹಿತಿಯನ್ನು ಅನಧಿಕೃತ ವ್ಯಕ್ತಿಗಳಿಗೆ ನೀಡಬಾರದು’ ಎಂದರು.

ಶಾರದಾ ವಿಕಾಸ ಟ್ರಸ್ಟ್ ಅಧ್ಯಕ್ಷ, ಆಡಳಿತ ನಿರ್ದೇಶಕ ಡಿ.ವಿ. ವೆಂಕಟಾಚಲಪತಿ ಅಧ್ಯಕ್ಷತೆ ವಹಿಸಿದ್ದರು. ಮಾಮ್ ಅಧ್ಯಕ್ಷ ನವೀನ್ ಅಮ್ಮೆಂಬಳ ಸ್ವಾಗತಿಸಿದರು. ಜೊಹಾನಾ ಕಾರ್ಯಕ್ರಮ ನಿರೂಪಿಸಿದರು. ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕಿ ಫ್ಲೋರಿನ್ ರೋಜ್ ವಂದಿಸಿದರು.


Thursday, 29 February 2024

2015 ಏ.26ರಂದು ನಡೆದಿದ್ದ ಮನೋಭಿನಂದನಾ ನೆನಪುಗಳು....

 










9 ವರ್ಷಗಳ ಹಿಂದೆ ಮನೋಹರ್ ಪ್ರಸಾದ್ ಗೌರವಿಸುವ ಮನೋಭಿನಂದನಾ ಸಮಾರಂಭ ನಡೆಸಿ, ಅಭಿನಂದನಾ ಗ್ರಂಥ ಸಮರ್ಪಿಸಿದ್ದ ಮಂಗಳೂರು ವಿ.ವಿ. ಪತ್ರಿಕೋದ್ಯಮ ಸ್ನಾತಕೋತ್ತರ ಹಳೆ ವಿದ್ಯಾರ್ಥಿಗಳ ಸಂಘ.... ಒಂದು ನೆನಪು.

 

ಸುಮಾರು 9 ವರ್ಷಗಳ ಹಿಂದೆ, 2015 ಏಪ್ರಿಲ್ 26ರಂದು ಮಂಗಳೂರಿನ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅವರನ್ನು ಮಂಗಳೂರು ವಿ.ವಿ. ಪತ್ರಿಕೋದ್ಯಮ ಸ್ನಾತಕೋತ್ತರ ಹಳೆ ವಿದ್ಯಾರ್ಥಿಗಳ ಸಂಘ (ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ MAAM) ವತಿಯಿಂದ ಅಭಿನಂದನಾ ಗ್ರಂಥ ಸಮರ್ಪಣೆ ಸಹಿತ ಸನ್ಮಾನಿಸಲಾಯಿತು. ಮನೋಭಿನಂದನ ಹೆಸರಿನ ಈ ಅದ್ಭುತ ಕಾರ್ಯಕ್ರಮದಲ್ಲಿ ಮಂಗಳೂರಿನ ಪತ್ರಕರ್ತರು, ಗಣ್ಯರು, ಮನೋಹರ ಪ್ರಸಾದ್ ಅವರ ಹಿತೈಷಿಗಳು, ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡರು. ದಿ.ಸುರೇಂದ್ರ ಶೆಟ್ಟಿ ಸಂಪಾದಕತ್ವದಲ್ಲಿ ಮಾಮ್ ಪ್ರಕಟಿಸಿದ ಮನೋಭಿನಂದನಾ ಹೆಸರಿನ ಅಭಿನಂದನಾ ಗ್ರಂಥವನ್ನು ಆ ದಿನ ಬಿಡುಗಡೆ ಮಾಡಲಾಯಿತು. 214 ಪುಟಗಳ ಈ ಪುಸ್ತಕದಲ್ಲಿ ಮನೋಹರ ಪ್ರಸಾದ್ ಅವರ ಬಹುಮುಖ ಪ್ರತಿಭೆಯ ಕುರಿತು ಅನೇಕ ಸಚಿತ್ರ ಲೇಖನಗಳು ಪ್ರಕಟವಾಗಿವೆ. ಈ ಸಮಾರಂಭದಲ್ಲಿ ಅವರಿಗೆ ಅಭಿಂದನಾಪೂರ್ವಕವಾಗಿ ನೀಡಲಾದ 1,00,001 ರು. ಚೆಕ್ ನ್ನು ಅವರು ಮಾಮ್ ಸಂಘಟನೆಗೇ ಮರಳಿಸಿ ಅದನ್ನು ಜನೋಪಯೋಗಿ ಕಾರ್ಯಕ್ಕೆ ವಿನಿಯೋಗಿಸುವಂತೆ ವಿನಂತಿಸಿದರು. ಅದೇ ಪ್ರಕಾರ ಈ ನಿಧಿಯನ್ನು ಬಳಸಿ ಮಾಮ್ ಸಂಘಟನೆ ನಿರಂತರವಾಗಿ ಪ್ರತಿಭಾನ್ವಿತ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಬಹುಮುಖ ಪ್ರತಿಭೆಯನ್ನು ಗುರುತಿಸಿ ಪ್ರತಿ ವರ್ಷ ಮಾಮ್ ಇನ್ ಸ್ಪೈರ್ ಅವಾರ್ಡ್ ರೂಪದಲ್ಲಿ ನೀಡುತ್ತಾ ಬಂದಿದೆ. ಅಗಲಿದ ಮನೋಹರ ಪ್ರಸಾದ್ ಅವರಿಗೆ ಸದ್ಗತಿ ಪ್ರಾಪ್ತಿಯಾಗಲಿ ಎಂದು ಮಾಮ್ ಅಧ್ಯಕ್ಷ ನವೀನ್ ಅಮ್ಮೆಂಬಳ ಹಾಗೂ ಗೌರವಾಧ್ಯಕ್ಷ ವೇಣು ಶರ್ಮ ಪ್ರಕಟಣೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

 ಇಲ್ಲಿದೆ ಅಂದಿನ ಕಾರ್ಯರ್ರಮದ ವರದಿ....

ಯಶಸ್ವಿಯಾಯ್ತು ಮನೋಭಿನಂದನ...

·                     ಮ್ಯಾಮ್ ಸದಸ್ಯರಿಗೆಲ್ಲ ಭಾನುವಾರ, ಏಪ್ರಿಲ್ 26 ಒಂದು ಪುಳಕಿತ ದಿನ. ಬೆಳಗ್ಗಿನಿಂದ ಆತಂಕ. ಬಹುನಿರೀಕ್ಷೆಯ ಮನೋಭಿನಂದನ. ಕಾರ್ಯಕ್ರಮ ಏನಾಗುತ್ತದೋ, ಹೇಗಾಗುತ್ತದೋ ಎಂದು.

·                     ಆದರೆ, ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅವರಿಗೆ ಸನ್ಮಾನ ಅಭಿನಂದನೆ, ಮನೋಭಿನಂದನ ಅಭಿನಂದನಾ ಗ್ರಂಥ ಬಿಡುಗಡೆ ಹಾಗೂ ಪ್ರದೇಶಾಭಿವೃದ್ಧಿಯಲ್ಲಿ ಮಂಗಳೂರು ವಿ.ವಿ. ಕೊಡುಗೆ ವಿಚಾರಸಂಕಿರಣ ಇವಿಷ್ಟು ಅಪರಾಹ್ನ 2.10 ಗಂಟೆಗೆ ಯಶಸ್ವಿಯಾಗಿ ಸಂಪನ್ನಗೊಂಡಾಗ, ನಮ್ಮ ಯತ್ನ ಸಾರ್ಥಕ ಎನಿಸಿತು.

·                     ---------------------

·                     ಹೌದು, ಮಂಗಳೂರು ವಿ.ವಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗಕ್ಕೆ 25 ವರ್ಷ ತುಂಬಿದ ಹಿನ್ನೆಲೆಯಲ್ಲಿ 2014 ಡಿಸೆಂಬರ್ 20ರಂದು ಮಂಗಳೂರು ವಿ.ವಿ. ಆವರಣದಲ್ಲಿ ಒಟ್ಟು ಸೇರಿದ ಎಂಸಿಜೆ ಹಳೆ ವಿದ್ಯಾರ್ಥಿಗಳು ಸೇರಿ ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ರಚಿಸಿದೆವು. ವೇಣು ಶರ್ಮ ಅಧ್ಯಕ್ಷರಾಗಿ ಆಯ್ಕೆಯಾದರು. ಬಳಿಕ ಒಂದು ಕಾರ್ಯಕಾರಿ ಸಮಿತಿ ರಚಿಸಿ ಮೊದಲ ಸಾರ್ವಜನಿಕ ಕಾರ್ಯಕ್ರಮ ಮನೋಭಿನಂದನ ವನ್ನು ನಡೆಸಲು ಸಿದ್ಧತೆ ನಡೆಸಿದ ಫಲವೇ ಏ.26ರಂದು ಮಂಗಳೂರು ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಬೆಳಗ್ಗೆ 10ರಿಂದ ಅಪರಾಹ್ನ 2 ಗಂಟೆ ತನಕ ಸತತ ನಾಲ್ಕು ಗಂಟೆ ಕಾಲ ನಡೆದ ಕಾರ್ಯಕ್ರಮ ಮನೋಭಿನಂದನ.

·                     ಮಂಗಳೂರು ವಿ.ವಿ. ಈ ಪ್ರದೇಶದ ಅಭಿವೃದ್ಧಿ ನೀಡಿದ ಕೊಡುಗೆ ಕುರಿತು ವಿಚಾರಸಂಕಿರಣ ನಡೆಸಲು ನಿರ್ಧರಿಸಲಾಗಿತ್ತು. ಈ ಸಂದರ್ಭ, ಮೂರು ದಶಕಗಳಿಂದ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ ಉದಯವಾಣಿ ಮಂಗಳೂರು ಸುದ್ದಿ ಬ್ಯೂರೋ ಮುಖ್ಯಸ್ಥ ಮನೋಹರ ಪ್ರಸಾದ್ ಅವರನ್ನು ಅಭಿನಂದಿಸಲು ತೀರ್ಮಾನಿಸಲಾಗಿತ್ತು.

-----------------

·                     ಅಂದುಕೊಂಡಂತೆ ಬೆಳಗ್ಗೆ 10 ಗಂಟೆಗೆ ಸರಿಯಾಗಿ ಕಾರ್ಯಕ್ರಮ ಆರಂಭವಾಯಿತು. ಮಂಗಳೂರಿನ ನಮ್ಮ ಕುಡ್ಲ ಚಾನೆಲ್ ವತಿಯಿಂದ ನೇರ ಪ್ರಸಾರ ವ್ಯವಸ್ಥೆಯಿತ್ತು. ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಸಚಿವ ಯು.ಟಿ.ಖಾದರ್ ನಿಗದಿತ ಸಮಯ 9.50ಕ್ಕೆ ಆಗಮಿಸುವ ಮೂಲಕ ಉತ್ಸಾಹ ಹೆಚ್ಚಿಸಿದರು. ಎಂಸಿಜೆ ವಿಭಾಗ ಮುಖ್ಯಸ್ಥ ಡಾ.ಜಿ.ಪಿ.ಶಿವರಾಂ ಅವರು 9.15ಕ್ಕೆ ಆಗಮಿಸಿ ಪಾಲ್ಗೊಂಡರು. ಮನೋಹರ ಪ್ರಸಾದ್ ಸ್ನೇಹಿತ, ಉದ್ಯಮಿ ಸುಧಾಕರ ಪೇಜಾವರ ಅವರು ವಿದೇಶದಿಂದ ಈ ಕಾಯಕ್ರಮಕ್ಕೆಂದು ಬಂದಿದ್ದು, ಎಲ್ಲರಿಗಿಂತ ಪ್ರಥಮರಾಗಿ ಮುಂಜಾನೆ 9 ಗಂಟೆಗೂ ಮೊದಲೇ ಸಭಾಂಗಣಕ್ಕೆ ಕುಟುಂಬ ಸಮೇತ ಆಗಮಿಸಿ ಕಡೆ ತನಕ ಕುಳಿತು ಪಾಲ್ಗೊಂಡರು.

·                     9.30ರ ತನಕವೂ ಬಹುತೇಕ ಖಾಲಿಯಿದ್ದು ಸಭಾಂಗಣ ನಂತರ ಗಣ್ಯರು, ಅತಿಗಣ್ಯರು, ಪತ್ರಕರ್ತರು, ಸಾರ್ವಜನಿಕರ ಪ್ರವೇಶಕ್ಕೆ ಸಾಕ್ಷಿಯಾಯಿತು. ಉದ್ಘಾಟನೆ ವೇಳೆಗೆ ಹವಾನಿಯಂತ್ರಿತ ಸಭಾಂಗಣ ಬಹುತೇಕ ಭರ್ತಿಯಾಗಿತ್ತು. ಅಂದಾಜು 600ಕ್ಕೂ ಹೆಚ್ಚು ಮಂದಿ ಒಂದು ಹಂತದಲ್ಲಿ ಸಭಾಂಗಣದಲ್ಲಿ ಸೇರಿದ್ದರು. ಸುಮಾರು 300ಕ್ಕೂ ಅಧಿಕ ಮಂದಿ ಅಪರಾಹ್ನ ಭೋಜನ ಸ್ವೀಕರಿಸಿದರು.

·                     ಹಿರಿಯದ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಪ್ರೊ.ವಿವೇಕ ರೈ, ಸಚಿವರಾದ ರಮಾನಾಥ ರೈ, ಅಭಯಚಂದ್ರ ಜೈನ್, ಮಂಗಳೂರು ವಿ.ವಿ.ಕುಲಪತಿ ಪ್ರೊ.ಕೆ.ಬೈರಪ್ಪ, ರಿಜಿಸ್ಟ್ರಾರ್ ಪ್ರೊ.ಯಡಪಡಿತ್ತಾಯ ಸಹಿತ ನೂರಾರು ಗಣ್ಯರು ನಮ್ಮ ಕಾರ್ಯಕ್ರಮಕ್ಕೆ ಸಾಕ್ಷಿಗಳಾಗಿದ್ದು ಸಂತಸದ ಸಂಗತಿ.

·                     ----------------------------

·                     ನಿಗದಿತ ವೇಳಾಪಟ್ಟಿಗಿಂತ ತುಸು ವಿಳಂಬವಾದರೂ ನಿರೂಪಕರು ಹಾಗೂ ಮಾಮ್ ಕಾರ್ಯಕಾರಿ ಸಮಿತಿ ಸದಸ್ಯರು ಪ್ರಯತ್ನದಂತೆ ಬಹುತೇಕ ಕಡೆ ತನಕ ಕಾರ್ಯಕ್ರಮವನ್ನು ಶೆಡ್ಯೂಲ್ ಪ್ರಕಾರವೇ ಕೊಂಡು ಹೋಗಿದ್ದು ಮಾತ್ರವಲ್ಲ, ವಿಚಾರಸಂಕಿರಣ ಮುಗಿದ ಅಪರಾಹ್ನ 2.10 ನಿಮಿಷವರೆಗೂ ಉತ್ತಮ ಸಂಖ್ಯೆಯ ಪ್ರೇಕ್ಷಕರು ಪಾಲ್ಗೊಂಡಿದ್ದು ನಮ್ಮ ಉತ್ಸಾಹ ಹೆಚ್ಚಿಸಿತು.


---------------

·                     ರಾಜೇಂದ್ರ ಕೇದಿಗೆ ರಚಿಸಿದ ಅತ್ಯುತ್ತಮ ಚಿತ್ರಕಲಾಕೃತಿ, ಅದರೊಳಗೆ ಮನೋಹರ ಪ್ರಸಾದ್ ಅವರನ್ನು ಅಭಿನಂದಿಸುವ ಕಾವ್ಯ ಮಾದರಿ ಸಾಲುಗಳು, ಫಲಪುಷ್ಪ, ಶಾಲು, ಹಾಗೂ ರು.1 ಲಕ್ಷದ 1 ಚೆಕ್ ನೀಡಿ ಮನೋಹರ ಪ್ರಸಾದ್ ಅವರನ್ನು ಅಭಿನಂದಿಸಲಾಯಿತು. ನಂತರ ಅವರ ಹಿತೈಷಿಗಳು, ಸ್ನೇಹಿತರು, ಅಭಿಮಾನಿಗಳು ನೂಕುನುಗ್ಗಲಿನಲ್ಲಿ ಬಂದು ಮನೋಹರ್ ಅವರನ್ನು ಗೌರವಿಸಿ ಖುಷಿ ಪಟ್ಟರು. ಮನೋಹರ್ ತಾವು ಪಡೆದ ಚೆಕ್ ನ್ನು ಉತ್ತಮ ಕಾರ್ಯಗಳಿಗೆ ಬಳಸಿ ಎಂದು ಮಾಮ್ ಅಧ್ಯಕ್ಷರಿಗೆ ರು.1 ಲಕ್ಷವನ್ನು ಮರಳಿಸುವ ಮೂಲಕ ಸಹೃದಯತೆ ಮೆರೆದರು. ಅವರ ಗೆಳೆಯರು ಸರ್ ಪ್ರೈಸ್ ರೂಪದಲ್ಲಿ ನೀಡಿದ ಚಿನ್ನದ ಪದಕವನ್ನು ತನ್ನೂರು ಕರ್ವಾಲಿನ ಅರ್ಹರ ಉಪಕಾರಕ್ಕೆ ನೀಡುವುದಾಗಿ ಘೋಷಿಸಿದರು.

·                     ಸನ್ಮಾನಕ್ಕೆ ಭಾವುಕರಾಗಿ ಉತ್ತರಿಸಿದ ಅವರು, ಪತ್ರಕರ್ತರು ಇತರರನ್ನು ಬೆಳೆಸುವ ಪಲ್ಲಕ್ಕಿ ಹೊರುವ ಕೆಲಸ ಮಾಡುತ್ತಿದ್ದು, ಇಂದು, ಅಂತಹ ಪಲ್ಲಕ್ಕಿ ಹೊರುವವನನ್ನೇ ಪಲ್ಲಕ್ಕಿಯಲ್ಲಿ ಕೂರಿಸಿದ್ದೀರಿ ಎಂದರು.

·                     ------------------------

·                     ಮಾಮ್ ಗೌರವಾಧ್ಯಕ್ಷ ಸುರೇಂದ್ರ ಶೆಟ್ಟಿ ಸಂಪಾದಕತ್ವದಲ್ಲಿ ಹೊರ ತರಲಾದ ಮನೋಭಿನಂದನ ಅಭಿನಂದನಾ ಗ್ರಂಥವನ್ನು ತರಂಗ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಪೈ ಬಿಡುಗಡೆಗೊಳಿಸಿದರು. ರು.300 ಮುಖಬೆಲೆಯ ಪುಸ್ತಕವನ್ನು ಇಂದು ಸಭಾಂಗಣದಲ್ಲಿ ರು.200 ರಿಯಾಯಿತಿ ದರದಲ್ಲಿ ನೀಡಲಾಯಿತು. ಮಧುಬನ್ ಗ್ರಾಫಿಕ್ಸ್ ನವರು ಪುಸ್ತಕ ಮುದ್ರಿಸಿ ನೀಡಿದ್ದಾರೆ.

·                     ----------------

·                     ನಂತರ ಸುಮಾರು 12 ಗಂಟೆ ವೇಳೆಗೆ ಆರಂಭವಾದ ಪ್ರದೇಶಾಭಿವೃದ್ಧಿಯಲ್ಲಿ ಮಂಗಳೂರು ವಿ.ವಿ. ಕೊಡುಗೆ ವಿಚಾಸಂಕಿರಣದಲ್ಲಿ ಪ್ರೊ.ಶ್ರೀಪತಿ ತಂತ್ರಿ, ಪ್ರೊ.ನಾರ್ಬರ್ಟ್ ಲೋಬೊ, ಪ್ರೊ.ಯಡಪಡಿತ್ತಾಯ, ಪ್ರೊ.ಚೆನ್ನಪ್ಪ ಗೌಡ ಪಾಲ್ಗೊಂಡರೆ, ಪ್ರೊ.ಬಿ.ಎಂ.ಹೆಗ್ಡೆ ಅಧ್ಯಕ್ಷರ ನುಡಿಗಳನ್ನಾಡಿದರು. ವಿ.ವಿ. ಕುಲಪತಿ ಪ್ರೊ.ಬೈರಪ್ಪ ಉಪಸಂಹಾರದ ಮಾತುಗಳನ್ನಾಡಿ, ಪ್ರೇಕ್ಷಕರ ಸಂದೇಹಗಳಿಗೆ ಉತ್ತರ ನೀಡಿದರು (ವಿವರ, ಕೆಳಗಡೆ ಬಾಕ್ಸ್ ನಲ್ಲಿದೆ)

·                     -------------------------------------

ನಮ್ಮ ಖುಷಿ....

·                     -ಅತಿಥಿಗಳಿಗೆ ಹೂವಿನ ಬದಲು ಅರಳಿದ ಹೂವಿನ ಗಿಡವಿರುವ ಕುಂಡಗಳನ್ನು ಸ್ವಾಗತದ ಸಂದರ್ಭ ನೀಡಲಾಯಿತು. ಜೊತೆಗೆ ಸ್ಮರಣಿಕೆ.

·                     -ಮನೋಹರ ಪ್ರಸಾದ್ ಅವರ ಸನ್ಮಾನ ಸಂದರ್ಭ ಕಲಾವಿದ ರಾಜೇಂದ್ರ ಕೇದಿಗೆ ರಚನೆಯ ಬೃಹತ್ ಗಾತ್ರದ ಕ್ಯಾನ್ವಾಸ್ ನಲ್ಲಿ ರಚಿಸಿದ ಅರ್ಥಪೂರ್ಣ ಪೈಂಟಿಂಗ್ ಹಸ್ತಾಂತರಿಸಲಾಯಿತು.

·                     -ಮನೋಭಿನಂದನ ಗ್ರಂಥಕ್ಕೆ ಲೇಖನಗಳನ್ನು ನೀಡಿದ ಹಲವು ಲೇಖಕರು, ಗಣ್ಯರು, ರಾಜಕಾರಣಿಗಳು, ಉದ್ಯಮಿಗಳು, ಸಾಹಿತ್ಯಾಸಕ್ತರು, ರಂಗಕರ್ಮಿಗಳು ಸಹಿತ ನೂರಾರು ಮಂದಿ ಅಪರಾಹ್ನದ ತನಕ ಸಭಾಂಗಣಕ್ಕೆ ಬಂದು ಕಾಯಕ್ರಮದಲ್ಲಿ ಪಾಲ್ಗೊಂಡರು. ಮಂಗಳೂರಿನಲ್ಲಿ ಇಂದು ಚುಟುಕು ಸಾಹಿತ್ಯ ಸಮ್ಮೇಳನ ಸಹಿತ ಮದುವೆ ಇತ್ಯಾದಿ ಶುಭ ಕಾರ್ಯಗಳಿದ್ದರೂ ನಮ್ಮ ಆಮಂತ್ರಿತರು ಭೇಟಿ ನೀಡಲು ಮರೆಯಲಿಲ್ಲ.

·                     -ಸಮಾರಂಭಕ್ಕೆ ಮಧುಬನ್ ಗ್ರಾಫಿಕ್ಸ್ ನವರಿಂದ ಈವೆಂಟ್ ಮ್ಯಾನೆಜ್ ಮೆಂಟ್ ಸಹಾಯ, ಪುಸ್ತಕ ಮುದ್ರಣ, ಹ್ಯಾಂಗ್ಯೋದವರಿಂದ ಐಸ್ ಕ್ರೀಂ, ಸುಮಾರು 10ಕ್ಕೂ ಅಧಿಕ ದಾನಿಗಳಿಂದ ಸಹಾಯವನ್ನು ಕೃತಜ್ಞತೆಯಿಂದ ಸ್ಮರಿಸುತ್ತಿದ್ದೇವೆ. ಈ ಜೊತೆಗೆ ಕಾರ್ಯಕಾರಿ ಸಮಿತಿಯವರ ಜೊತೆ ಸಕ್ರಿಯರಾಗಿ ಸೇರಿ ಕಾರ್ಯಕ್ರಮದ ಯಶಸ್ಸಿಗೆ ಹೆಗಲು ಕೊಟ್ಟ ಸುರೇಶ್ ಪಳ್ಳಿ, ಗುರುರಾಜ ಪಣಿಯಾಡಿ, ದೂರದ ಬೆಂಗಳೂರಿನಿಂದ ಬಂದ ಸೂರ್ಯನಾರಾಯಣ ವಜ್ರಾಂಗಿ, ಕೊಪ್ಪಳದಿಂದ ಬಂದ ಶರತ್ ಹೆಗ್ಡೆ, ಸ್ವಾಗತ ಕೌಂಟರಿನಲ್ಲಿ ಸಹಕರಿಸಿದ ಉಪನ್ಯಾಸಕಿ ವಿದ್ಯಾ ಶೇಡಿಗುಮ್ಮೆ ಇವರೆಲ್ಲರೂ ನಮ್ಮ ಕಾರ್ಯಕ್ರಮವನ್ನು ಚಂದಗೊಳಿಸಿದ್ದಲ್ಲದೆ ಯಶಸ್ವಿಗೊಳಿಸಿದ್ದಾರೆ.

·                     -ತುಸು ವಿಳಂಬವಾದರೂ ಆದಷ್ಟು ಮಟ್ಟಿಗೆ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭಿಸಿದ ಹೆಮ್ಮೆಯಿದೆ. ನಾವೆಲ್ಲ ವೃತ್ತಿನಿರತರಾಗಿದ್ದರೂ ಇಷ್ಟು ದೊಡ್ಡ ಕಾರ್ಯಕ್ರಮ ಹಮ್ಮಿಕೊಂಡು ಗುರುತಿಸಲು ಸಾಧ್ಯವಾಗಿದ್ದಕ್ಕೂ ಅಬಿಮಾನವಿದೆ. ಮುಂದೆ ಇನ್ನಷ್ಟು ಸಮಾಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುವ ಉತ್ಸಾಹವನ್ನೂ ತಂದುಕೊಟ್ಟಿದೆ.

------------------

ವರದಿ....
ವಿವಿ ಎಜುಸೆಂಟ್ ಪ್ರೊಫೆಸರ್ ಆಗಿ ಎಂಪಿ ಆಯ್ಕೆ: ಪ್ರೊ.ಭೈರಪ್ಪ

·                     ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿಗಳ ಸಂಘ ಮೀಡಿಯಾ ಅಲೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ(ಮಾಮ್) ವತಿಯಿಂದ ಭಾನುವಾರ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಅವರನ್ನು ಗೌರವಿಸುವ `ಮನೋಭಿನಂದನೆ' ಕಾರ್ಯಕ್ರಮ ನಗರದ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ನಡೆಯಿತು.

·                     ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಮಂಗಳೂರು ವಿವಿಯ ಕುಲಪತಿ ಪ್ರೊ.ಕೆ.ಭೈರಪ್ಪ, ಸಾಹಿತ್ಯ, ರಾಜಕೀಯ, ಪತ್ರಿಕೋದ್ಯಮ ಹೀಗೆ ಎಲ್ಲಾ ಕ್ಷೇತ್ರದ ಬಗ್ಗೆ ಪಕ್ವತೆಯನ್ನು ಪಡೆದಿರುವ ಮನೋಹರ ಪ್ರಸಾದ್ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ರೋಲ್ ಮಾಡೆಲ್ ಆಗಿದ್ದಾರೆ. ಇವರ ಸೇವೆ ವಿಶ್ವ ವಿದ್ಯಾನಿಲಯದ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೂ ಸಿಗಬೇಕು. ಈ ಹಿನ್ನೆಲೆಯಲ್ಲಿ ಅವರನ್ನು ಎಜುಸೆಂಟ್ ಫ್ರೊಫೆಸರ್ ಆಗಿ ನೇಮಿಸಲಾಗಿರುವುದಾಗಿ ತಿಳಿಸಿದರು.

·                     ವಿವಿಯಲ್ಲಿ ಅಡ್ಜಂಕ್ಟ್ ಫ್ರೊಫೆಸರ್ ಗಳನ್ನು ನೇಮಕ ಮಾಡುವ ಅವಕಾಶವಿದ್ದು, ಈ ಅವಕಾಶವನ್ನು ಬಳಸಿಕೊಳ್ಳಲಾಗಿದೆ. ಇದರಿಂದ ಸಂಶೋಧನಾ ವಿದ್ಯಾರ್ಥಿಗಳಿಗೂ ಹೆಚ್ಚಿನ ಪ್ರಯೋಜನವಾಗಲಿದೆ. ಆಯ್ಕೆಯ ಕುರಿತು ಅಧಿಕೃತವಾಗಿ ಸೋಮವಾರವೇ ಮನೋಹರ್ ಪ್ರಸಾದ್ ಗೆ ಪತ್ರ ರವಾನಿಸುವುದಾಗಿ ಕುಲಪತಿ ನುಡಿದರು.

 

------------------------------------------

·                     ಮಾಮ್ ವತಿಯಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮನೋಹರ್ ಪ್ರಸಾದ್, ಈ ಗೌರವ ನನ್ನ ಬದುಕಿನ ಬಹುದೊಡ್ಡ ಭಾಗ್ಯ. ಇದರ ಮುಂದೆ ಯಾವ ಪ್ರಶಸ್ತಿಯೂ ಸರಿಸಾಟಿಯಾಗಲಾರದು. ಅದ್ದೂರಿ ರೀತಿಯಲ್ಲಿ ಆಯೋಜಿಸಿರುವ ಈ ಅಭಿನಂದಾ ಕಾರ್ಯಕ್ರಮಕ್ಕೆ ಮಾಮ್ಗೆ ಅಭಿನಂದನೆಗಳು ಎಂದರು.

·                     ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ.ಖಾದರ್, ಕ್ರೀಡಾ ಸಚಿವ ಅಭಯಚಂದ್ರ ಜೈನ್, ಸಾಂಸದ ನಳಿನ್ ಕುಮಾರ್ ಕಟೀಲ್, ಉದ್ಯಮಿ ಸುಧಾಕರ ಪೇಜಾವರ ಮುಂತಾದವರು ಅಭಿನಂದಿಸಿ ಮಾತನಾಡಿದರು.

·                     ಉದಯವಾಣಿ ಸಂಸ್ಥೆಯ ಮುಖ್ಯಸ್ಥ ಸತೀಶ್ ಪೈ, ಸ್ಪೋರ್ಟ್ಸ್ ಪ್ರಮೋಟರ್ಸ್ ಅಧ್ಯಕ್ಷ ಎ.ಸದಾನಂದ ಶೆಟ್ಟಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕೆನರಾ ಹೈಸ್ಕೂಲ್ ಅಸೋಸಿಯೇಶನ್ನ ಅಣ್ಣಪ್ಪ ಪೈ, ಉದ್ಯಮಿ ಅಶೋಕ್ ಶೇಟ್, ಕೆನರಾ ಕಾಲೇಜಿನ ಉಪನ್ಯಾಸಕಿ ಪ್ರಮೀಳಾ ರಾವ್ ಉಪಸ್ಥಿತರಿದ್ದರು.

·                     ಮಾಮ್ ಅಧ್ಯಕ್ಷ ವೇಣು ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗನಿರ್ದೇಶಕ ನಾ.ದಾಮೋದರ ಶೆಟ್ಟಿ ಮತ್ತು ಮಾಮ್ ಕೋಶಾಧಿಕಾರಿ ಸ್ಮಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.

--

ಪದವಿ ಕಾಲೇಜುಗಳಲ್ಲಿ ಪಿಎಚ್ಡಿಗೆ ಮಾರ್ಗದರ್ಶನ

·                     ಮನೋಭಿನಂದನೆಯ ಬಳಿಕ `ಪ್ರದೇಶಾಭಿವೃದ್ಧಿಯಲ್ಲಿ ಮಂಗಳೂರು ವಿವಿ ಕೊಡುಗೆ' ವಿಷಯದ ಕುರಿತಂತೆ ವಿಚಾರ ಸಂಕಿರಣ ನಡೆಯಿತು.

·                     ವಿಚಾರ ಸಂಕಿರಣದಲ್ಲಿ ಉಪಸಂಹಾರ ಮಾಡಿ ಮಾತನಾಡಿದ ಕುಲಪತಿ ಪ್ರೊ.ಕೆ.ಭೈರಪ್ಪ, ಇನ್ನು ಮುಂದೆ ಪದವಿ ಕಾಲೇಜುಗಳ ಪ್ರೊಫೆಸರ್ ಗಳಿಗೂ ಪಿಎಚ್ಡಿಗೆ ಮಾರ್ಗದರ್ಶನ ಮಾಡುವ ಅವಕಾಶ ಕಲ್ಪಿಸಲಾಗುವುದು ಎಂದರು.

·                     ಮಾಹೆ ನಿವೃತ್ತ ಕುಲಪತಿ ಪ್ರೊ.ಬಿ.ಎಂ.ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.

·                     ವಿವಿ ಕುಲಸಚಿವ ಪ್ರೊ.ಪಿ.ಎಸ್.ಯಡಪಡಿತ್ತಾಯ, ಕಲಾ ವಿಭಾಗದ ಡೀನ್ ಪ್ರೊ.ಕೆ.ಚಿನ್ನಪ್ಪ ಗೌಡ ಮಾತನಾಡಿ,ವಿವಿ ಸ್ಥಾಪಕ ಸದಸ್ಯ ಪ್ರೊ.ಶ್ರೀಪತಿ ತಂತ್ರಿ, ಅಮುಕ್ತ್ ಅಧ್ಯಕ್ಷ ನೋರ್ಬರ್ಟ್ ಲೋಬೋ ಸಂಪನ್ಮೂಲ ವ್ಯಕ್ತಿಯಾಗಿದ್ದರು.

·                     ರೊನಾಲ್ಡ್ ಅನಿಲ್ ಫರ್ನಾಂಡಿಸ್, ಫ್ಲೋರಿನ್ ರೋಚ್ ಕಾರ್ಯಕ್ರಮ ನಿರೂಪಿಸಿದರು.