Monday, 11 November 2024

MAAM ವಾಟ್ಸಪ್‌ ಬಳಗಕ್ಕೆ 10 ವರ್ಷ ಪೂರ್ಣ!

ಆತ್ಮೀಯರೇ

ಮಂಗಳಗಂಗೋತ್ರಿ ಕ್ಯಾಂಪಸ್ಸಿನ ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದಲ್ಲಿ ಕಲಿತ ಹಳೆ ವಿದ್ಯಾರ್ಥಿಗಳಾದ ನಾವೆಲ್ಲರ ಒಟ್ಟಿಗೆ ಇರಲು ಕಾರಣವಾದ ಈ ವಾಟ್ಸಪ್‌ ಗ್ರೂಪು ಶುರುವಾಗಿ ಇಂದಿಗೆ 10 ವರ್ಷಗಳು ಪೂರ್ತಿಯಾಗಿವೆ. 2014 ನ.12ರಂದು ನಾವು ಹಳೆ ವಿದ್ಯಾರ್ಥಿಗಳ ಸಂಘಟನೆ ಮತ್ತು ತ್ವರಿತ ಸಂವಹನ ಉದ್ದೇಶದಿಂದ ಈ ವಾಟ್ಸಪ್‌ ಗ್ರೂಪು ಶುರು ಮಾಡಿದ್ದೆವು. ಗ್ರೂಪು ಇಂದು ದಶಮಾನದ ಸಂಭ್ರಮದಲ್ಲಿದೆ ಎಂದು ಘೋಷಿಸಲು ಖುಷಿಯಾಗುತ್ತಿದೆ.
2014ರಲ್ಲಿ ಎಂಸಿಜೆ ವಿಭಾಗಕ್ಕೆ (ಈಗ ಇದರ ಹೆಸರು ಜೆಎಂಸಿ) 25 ವರ್ಷ ಪೂರ್ತಿಯಾಯಿತು. ಆ ಸಂಭ್ರಮವನ್ನು ಆಚರಿಸಲು ಆಗ ನಾವು ಎಂಸಿಜೆ ಎರಡನೇ ಬ್ಯಾಚಿನ ವಿದ್ಯಾರ್ಥಿಗಳಾದ ಫ್ಲೋರಿನ್ ರೋಚ್‌, ದಿ.ಸುರೇಂದ್ರ ಶೆಟ್ಟಿ ಇವರೊಂದಿಗೆ ಹಳೆ ವಿದ್ಯಾರ್ಥಿಗಳಾದ ಶರತ್ ಹೆಗ್ಡೆ, ರೊನಾಲ್ಡ್ ಅನಿಲ್ ಫರ್ನಾಂಡಿಸ್, ಯೋಗೀಶ್ ಹೊಳ್ಳ, ಹರೀಶ್ ಮೋಟುಕಾನ, ಸುಶಿಲೇಂದ್ರ, ವೇಣುವಿನೋದ್‌, ವೇಣು ಶರ್ಮ, ವಸಂತ ಕೊಣಾಜೆ, ಸ್ಮಿತಾ ಶೆಣೈ, ಕೃಷ್ಣ ಕಿಶೋರ್‌ ಮತ್ತಿತರು ಸೇರಿ ಒಂದು ಅನೌಪಚಾರಿಕ ಸಮಿತಿ ರಚಿಸಿ ಅದೇ ವರ್ಷ ಎಂಸಿಜೆ 25 ಹೆಸರಿನ ಹಳೆ ವಿದ್ಯಾರ್ಥಿಗಳ ಸ್ನೇಹಮಿಲನ (ರಿಯೂನಿಯನ್) ಸಂಘಟಿಸಿದ್ದೆವು. ಆಗ ದಿ.ಸುರೇಂದ್ರ ಶೆಟ್ಟಿ ಅವರು ಈ ಸಂಘಟನೆಯ ಅಧ್ಯಕ್ಷರಾಗಿದ್ದರು. ಎಂಸಿಜೆ 25 ಸಮಾರಂಭದ ದಿನ ಈಗ ಅಸ್ತಿತ್ವದಲ್ಲಿರುವ ಮೀಡಿಯಾ ಅಲ್ಯುಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ ಅಥವಾ MAAM ಪುನರ್ ರಚನೆಯಾಯಿತು.
ಯಾಕೆ ‘ಪುನರ್ ರಚನೆ’ ಆಯಿತು ಎಂದರೆ ಇದೇ ಹೆಸರಿನ ಸಂಘಟನೆ ಬೆಂಗಳೂರಿನಲ್ಲಿ 1990ರ ದಶಕಾಂತ್ಯದಲ್ಲಿ ಒಮ್ಮೆ ಸ್ಥಾಪನೆಯಾಗಿ ಹಲವು ಚಟುವಟಿಕೆಗಳನ್ನು ನಡೆಸಿದ್ದು, ಈಗಿನ ಮಾಮ್ ಅಧ್ಯಕ್ಷ ನವೀನ್ ಅಮ್ಮೇಂಬಳ, ಉಪೇಂದ್ರ ಶೆಟ್ಟಿ, ಅರವಿಂದ ಶೆಟ್ಟಿ, ವೇಣು ಶರ್ಮ ಸಹಿತ ಹಲವರು ಆ ಸಂಘಟನೆಯಲ್ಲಿ ಆಗ ಸಕ್ರಿಯರಾಗಿದ್ದರು. ಬಳಿಕ ಕಾರಣಾಂತರಗಳಿಂದ ಈ ಸಂಘಟನೆ ಚಟುವಟಿಕೆ ನಿಂತು ಹೋಯಿತು.
ಇದಾದ ನಂತರ 2014ರಲ್ಲಿ ಎಂಸಿಜೆ ವಿಭಾಗದ ಬೆಳ್ಳಿ ಹಬ್ಬ ಆಚರಣೆ ಸಂದರ್ಭ ಮತ್ತೆ ಸ್ಥಾಪಿಸಿದ ಹಳೆ ವಿದ್ಯಾರ್ಥಿಗಳ ಸಂಘಕ್ಕೆ MAAM ಎಂಬ ಅದೇ ಹೆಸರು ಇರಿಸಿದ್ದು, ನಂತರ ನಾವು ವಿವಿಧ ಅಧ್ಯಕ್ಷರ ಅವಧಿಯಲ್ಲಿ ಈ ಹತ್ತು ವರ್ಷಗಳ ಅ‍ವಧಿಯಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಈಗ ಇತಿಹಾಸ.
ನಮ್ಮ ಪ್ರತಿ ಚಟುವಟಿಕೆಯ ವಿವರ ನಮ್ಮ ಬ್ಲಾಗ್‌ನಲ್ಲಿ ಲಭ್ಯವಿದೆ. ಅದರ ಕೊಂಡಿಯನ್ನು ಈ ಬರಹದ ಕೊನೆಯಲ್ಲಿ ಹಂಚಿಕೊಂಡಿದ್ದೇನೆ. ನಮ್ಮ ಮಾಮ್ ಬಳಗ ನೋಂದಣಿಯಾಗಿದೆ. ಅಧಿಕೃತ ಬ್ಯಾಂಕ್‌ ಖಾತೆ ಇದೆ. ಮಾಮ್ ಇನ್ ಸ್ಪೈರ್ ಅವಾರ್ಡ್ ಹೆಸರಿನಲ್ಲಿ ಪ್ರತಿ ವರ್ಷ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡುತ್ತಾ ಬಂದಿರುವುದು ನಮ್ಮ ಸಂಘಟನೆಯ ಹೆಗ್ಗಳಿಕೆಯೇ ಸರಿ.
ನಮ್ಮ ಈ ಗ್ರೂಪಿನಲ್ಲಿ ಮೊದಲನೇ ಬ್ಯಾಚಿನಿಂದ ತೊಡಗಿ ಇತ್ತೀಚಿನ ಬ್ಯಾಚುಗಳ ವರೆಗೂ (ಕಳೆದ ಐದಾರು ವರ್ಷಗಳಿಂದ ಅಪ್ಡೇಟ್ ಆಗಿಲ್ಲ) ಕಲಿತ ಸುಮಾರು 182 ಹಳೆ ವಿದ್ಯಾರ್ಥಿಗಳಿದ್ದಾರೆ. ಅಂದಾಜು 400ಕ್ಕೂ ಅಧಿಕ ಹಳೆ ವಿದ್ಯಾರ್ಥಿಗಳು ನಮ್ಮ ವಿಭಾಗದಲ್ಲಿ ಕಲಿತಿದ್ದರೂ ಅವರೆಲ್ಲರನ್ನೂ ಇಲ್ಲಿ ಸೇರಿಸಲು ಸಾಧ್ಯವಾಗಿಲ್ಲ. ಇನ್ನು ಕೆಲವರು ಗ್ರೂಪಿಗೆ ಸೇರಿದ್ದರೂ ವಿವಿಧ ಸಂದರ್ಭಗಳಲ್ಲಿ ತ್ಯಜಿಸಿ ಹೋದದ್ದೂ ಇದೆ.
ಏನೇ ಇರಲಿ. ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ, ಮಾಧ್ಯಮಕ್ಕೆ ಹೊರತಾಗಿ ಖಾಸಗಿ ಸಂಸ್ಥೆಗಳಲ್ಲಿ, ಸ್ವ ಉದ್ಯಮಗಳಲ್ಲಿ ತೊಡಗಿಸಿಕೊಂಡಿರುವ ನಾವು 182 ಮಂದಿಯೂ ಎಂಸಿಜೆ ಹಳೆ ವಿದ್ಯಾರ್ಥಿಗಳೆಂಬ ಸಾಮಾನ್ಯ ಆಸಕ್ತಿಯಿಂದ ಈ ತನಕ ಜೊತೆಗಿದ್ದೆವು. ಮುಂದೆಯೂ ನಮ್ಮ ಚಟುವಟಿಕೆಗಳಿಗೆ ಈ ಗ್ರೂಪು ಅತ್ಯುತ್ತಮ ವೇದಿಕೆ ಆಗಿರಲಿ ಎಂಬ ಸದಾಶಯ ನಮ್ಮದು. ಮುಂದೆಯೂ ನಿಮ್ಮ ಸಹಕಾರ ಇರಲಿ. ಈ ತನಕ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದಗಳು.
ಗ್ರೂಪಿನ ಬಗ್ಗೆ ನಿಮ್ಮ ಮುಕ್ತ ಅನಿಸಿಕೆಗಳನ್ನು ಹಂಚಿಕೊಳ್ಳಲು ಅವಕಾಶ ಇದೆ.

-ಕೃಷ್ಣಮೋಹನ, ಸ್ಥಾಪಕ ಅಡ್ಮಿನ್, ಮಾಮ್ ವಾಟ್ಸಪ್ ಬಳಗ.