Saturday, 10 November 2018

ಮಾಮ್ ಇನ್ ಸ್ಪೈರ್ ಪ್ರಶಸ್ತಿ ಪ್ರದಾನ (10.11.2018)



ನಾನು ಮೊದ ಮೊದಲಿಗೆ ಬರಹವನ್ನು ಬರೆದು ಪತ್ರಿಕೆಗೆ ಕಳುಹಿಸಿದಾಗ 350 ರು. ಗೌರವಧನ ಸಿಕ್ತು. ತುಂಬಾ ಖುಷಿ ಆಯ್ತು. ಬರಹ ಬದುಕಿಗೂ ಆರ್ಥಿಕ ಭದ್ರತೆ ಕೊಡುತ್ತದೆ ಎಂದು ಗೊತ್ತಾಯ್ತು. ಬರೆಯುತ್ತಾ ಹೋದಂತೆ ಬರವಣಿಗೆ ಸಿದ್ಧಿಸಿತು... ತಂಗಿಯೇ ನನ್ನ ಬರಹಗಳ ಮೊದಲ ಓದುಗಳು...ಮಾಮ್ ಪ್ರಶಸ್ತಿ ಪಡೆದಿದ್ದು ಅನಿರೀಕ್ಷಿತ, ಆದರೆ ಮತ್ತಷ್ಟು ಖುಷಿ ಕೊಟ್ಟಿದೆ...

ಮಂಗಳೂರು ವಿ.ವಿ.ಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿನಿ, ಮಾಮ್ ಇನ್ ಸ್ಪೈರ್ ವಿಜೇತ ವಿದ್ಯಾರ್ಥಿನಿ ಮೇಘಲಕ್ಷ್ಮೀ ಮುರುವಾಳ ತನ್ನ ಅನಿಸಿಕೆ ಹೇಳುತ್ತಿದ್ದಾಗ ಆಕೆಯ ಮುಖದಲ್ಲೊಂದು ಸಾರ್ಥಕ ಭಾವವಿತ್ತು, ಮಾಮ್ ಕಾರ್ಯಕಾರಿ ಸಮಿತಿ ಸದಸ್ಯರಲ್ಲಿ ತಮ್ಮ ಶ್ರಮ ಕೈಗೂಡಿದ ಖುಷಿ ಎದ್ದು ಕಾಣುತ್ತಿತ್ತು.

ಈ ಸನ್ನಿವೇಶ ಕಂಡು ಬಂದದ್ದು ಮಂಗಳೂರಿನ ಬಿಜೈ ಆಡ್ ಐಡಿಯಾ ಕಚೇರಿಯಲ್ಲಿ...ನ.10, 2018ರ ಶನಿವಾರ ಪೂರ್ವಾಹ್ನ. ಸಂದರ್ಭ-ಮಂಗಳೂರು ವಿ.ವಿ.ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿಗಳ (ಎಂಸಿಜೆ) ಸಂಘ (ಮಾಮ್) ವತಿಯಿಂದ ಏರ್ಪಡಿಸಿದ್ದ ಪ್ರಥಮ ವರ್ಷದ ಮಾಮ್ ಇನ್ ಸ್ಪೈರ್ ಸ್ಪರ್ಧೆಯ ವಿಜೇತರಿಗೆ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ.
ಸ್ನಾತಕೋತ್ತರ ವಿಭಾಗದಲ್ಲಿ ಪ್ರಶಸ್ತಿ ಪಡೆದ ಮಂಗಳೂರು ವಿ.ವಿ. ಕ್ಯಾಂಪಸ್ ನ ಮೇಘಲಕ್ಷ್ಮೀ ಮುರುವಾಳ, ಪದವಿ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಪಡೆದ ಪ್ರಥಮ  ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಪ್ರೀತಿ ಆರ್ ಭಟ್, ಸ್ನಾತಕೋತ್ತರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ  ಆಳ್ವಾಸ್ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮೂಡುಬಿದಿರೆಇಲ್ಲಿನ ಪ್ರಕಾಶ್ ಡಿ.ರಾಂಪುರ್, ಪದವಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ (ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು ಉಜಿರೆ ಇಲ್ಲಿನ ಸುವರ್ಚಲಾ ಅಂಬೇಕರ್ ಬಿ.ಎಸ್.ಇವರನ್ನು ನಗದು, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.
ಮಾಮ್ ದತ್ತಿ ನಿಧಿಯಿಂದ ಪ್ರಥಮ ಸ್ಥಾನ ವಿಜೇತರಿಗೆ ತಲಾ 5 ಸಾವಿರ ಹಾಗೂ ದ್ವಿತೀಯ ಸ್ಥಾನ ವಿಜೇತರಿಗೆ ತಲಾ 2,500 ರು. ನಗದು ಪುರಸ್ಕಾರ ಹಸ್ತಾಂತರಿಸಲಾಯಿತು.

ಸ್ವರ್ಧೆಯ ತೀರ್ಪುಗಾರ, ಹಿರಿಯ ಪತ್ರಕರ್ತ ರಘುರಾಮ್ ಎಂ. ಅವರು ಮಾತನಾಡಿ, ಪತ್ರಿಕೋದ್ಯಮ ವಿದ್ಯಾರ್ಥಿಗಳು ಹಾಗೂ ಯುವ ಪತ್ರಕರ್ತರು ಓದುವಿಕೆಯಲ್ಲಿ ತೊಡಗಿಸಿಕೊಳ್ಳಬೇಕಾದ ಅಗತ್ಯತೆ ಹಾಗೂ ಸಂಕೋಚ ತೊರೆದು ಕೆಲಸದಲ್ಲಿ ತೊಡಗಿಸಿಕೊಳ್ಳುವುದು, ಪ್ರಶ್ನಿಸುವ ಮನೋಭಾವ ಬೆಳೆಸುವ ಅಗತ್ಯತೆ ಕುರಿತು ಮಾತನಾಡಿದರು.

ಮಂಗಳೂರು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ತಮ್ಮ ವೃತ್ತಿಬದುಕಿನ ಅನುಭವಗಳು, ಕಸಿವಿಸಿಗೊಳಗಾದ ಸಂದರ್ಭಗಳು, ವೃತ್ತಿ ಬದುಕಿನ ಸವಾಲುಗಳ ಕುರಿತು ನಿದರ್ಶನ ಸಹಿತ ಮಾತನಾಡಿದರು. ಮಾಮ್ ಜೊತೆಗೆ ಮುಂಬರುವ ದಿನಗಳಲ್ಲಿ ಕೈಜೋಡಿಸಿ ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಭರವಸೆ ನೀಡಿದರು. ಉಭಯ ಅತಿಥಿಗಳು ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಿದರು. ನಾಲ್ಕೂ ಮಂದಿ ಪ್ರಶಸ್ತಿ ಪುರಸ್ಕೃತರು ತಮ್ಮ ಬರವಣಿಗೆ ಹಾಗೂ ವೃತ್ತಿ ಬದುಕಿನ ಅನುಭವ ಹಂಚಿಕೊಂಡರಲ್ಲದೆ ಮಾಮ್ ಪ್ರೋತ್ಸಾಹಕ್ಕೆ ಧನ್ಯವಾದ ಅರ್ಪಿಸಿದರು.

ಮಾಮ್ ಗೌರವಾಧ್ಯಕ್ಷ ವೇಣು ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಾಮ್ ಪ್ರಧಾನ ಕಾರ್ಯದರ್ಶಿ ಸುರೇಶ್ ಡಿ.ಪಳ್ಳಿ ವಂದಿಸಿದರು. ಪ್ರಶಸ್ತಿ ಸಮಿತಿ ಸಂಚಾಲಕ ಶರತ್ ಹೆಗ್ಡೆ ಕಡ್ತಲ ಪ್ರಶಸ್ತಿ ವಿಜೇತರ ವಿವರ ನೀಡಿದರು. ಸದಸ್ಯ ಕೃಷ್ಣ ಮೋಹನ ಕಾರ್ಯಕ್ರಮ ನಿರ್ವಹಿಸಿದರು.
ಸಮಾರಂಭದಲ್ಲಿ ಮಂಗಳೂರು ವಿ.ವಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಅತಿಥಿ ಉಪನ್ಯಾಸಕ ಶಶಿಧರ್ ವಿಭಾಗದ ಪರವಾಗಿ ಹಾಜರಿದ್ದರು. ಪತ್ರಿಕೋದ್ಯಮ ವಿದ್ಯಾರ್ಥಿಗಳು, ಮಾಮ್ ಸದಸ್ಯರು ಹಾಜರಿದ್ದರು.
ಮಾಮ್ ಪದಾಧಿಕಾರಿಗಳಾ ವೇಣು ವಿನೋದ್ ಕೆ.ಎಸ್. ಹಾಗೂ ಕೃಷ್ಣಕಿಶೋರ್ ಸಹಕರಿಸಿದರು.
ಬಳಿಕ ಸಹಭೋಜನ ಏರ್ಪಡಿಸಲಾಗಿತ್ತು.

ಪ್ರಸ್ತುತ ವರ್ಷದ ಮಾಮ್ ಇನ್ ಸ್ಪೈರ್ ಅವಾರ್ಡ್ ಸ್ಪರ್ಧೆಯನ್ನು ಸಮಾರಂಭದಲ್ಲಿ ಘೋಷಿಸಲಾಯಿತು.

2014ರಲ್ಲಿ ಮಂಗಳೂರು ವಿ.ವಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ 25ನೇ ವರ್ಷಾಚರಣೆ ಸಂದರ್ಭ ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ಅಸ್ತಿತ್ವಕ್ಕೆ ಬಂತು. ಮಾಧ್ಯಮ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಸಹಕಾರಿಯಾಗುವ ಅನೇಕ ಚಟುವಟಿಕೆಗಳನ್ನು ಮಾಮ್ ಹಮ್ಮಿಕೊಳ್ಳುತ್ತಾ ಬಂದಿದೆ. ಮಂಗಳೂರು ವಿ.ವಿ. ವ್ಯಾಪ್ತಿಯ ಮಂಗಳಗಂಗೋತ್ರಿ ಕ್ಯಾಂಪಸ್ ಹಾಗೂ ಪದವಿ ಕಾಲೇಜುಗಳ ಪತ್ರಿಕೋದ್ಯಮ ವಿದ್ಯಾರ್ಥಿಗಳ ಸರ್ವತೋಮುಖ ಪ್ರತಿಭೆಯನ್ನು ಪರಿಗಣಿಸಿ ಮಾಮ್ ಇನ್ ಸ್ಪೈರ್ ಪ್ರಶಸ್ತಿ ಸ್ಪರ್ಧೆ ನಡೆಸಲಾಗುತ್ತಿದ್ದು. ನ.10ರಂದು ನೀಡಿರುವುದು ಈ ಸರಣಿಯ ಪ್ರಥಮ ಪ್ರಶಸ್ತಿಯಾಗಿದೆ. ಪ್ರಶಸ್ತಿ ನೀಡುವುದಕ್ಕೋಸ್ಕರ ಮಾಮ್ ಪ್ರತ್ಯೇಕ ದತ್ತಿ ನಿಧಿ ಸ್ಥಾಪಿಸಿದೆ. ವಿವಿಧ ಶಿಕ್ಷಣ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿ, ಹಿರಿಯ ಪತ್ರಕರ್ತರ ತಂಡ ವಿಜೇತರನ್ನು ಆರಿಸುತ್ತಿದೆ ಎಂದು ಮಾಮ್ ಪ್ರಕಟಣೆ ತಿಳಿಸಿದೆ.


-ವರದಿ; ಕೆಎಂ
ಫೋಟೋಗಳು; ವೇಣು ವಿನೋದ್ ಕೆ.ಎಸ್.

















3 comments:

  1. I salute the spirit of MAAM, when people are busy in pursuing their priorities MAAM takes note of the budding media personnel. I congratulate the winners and appreciate the spirit of people who made it happen. MAAM is making name by it's good gesture. Take care.

    ReplyDelete