Friday, 13 March 2020

‘ಮಾಮ್ ಇನ್‌ಸ್ಪೈರ್ ಅವಾರ್ಡ್’ ಪ್ರದಾನ ಸಮಾರಂಭ (On 13.03,2020) @ ALVAS COLLEGE MOODBIDRI





















"ಬದುಕಿನಲ್ಲಿ ನಿರ್ದಿಷ್ಟ ಗುರಿ, ಬದ್ಧತೆ ಇದ್ದರೆ ಸಾಧನೆಯ ಹಾದಿ ಸುಗಮ"
 ‘ಮಾಮ್ ಇನ್‌ಸ್ಪೈರ್ ಅವಾರ್ಡ್’ ಪ್ರದಾನ ಸಮಾರಂಭದಲ್ಲಿ ಡಾ.ಎಂ.ಮೋಹನ ಆಳ್ವ


ಮಂಗಳೂರು: ಬದುಕಿನಲ್ಲಿ ನಿರ್ದಿಷ್ಟ ಗುರಿ, ಬದ್ಧತೆ ಇದ್ದರೆ ಸಾಧನೆಯ ಹಾದಿ ಸುಗಮವಾಗುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಭಿಪ್ರಾಯಪಟ್ಟರು.

ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಹಳೆ
ವಿದ್ಯಾರ್ಥಿ ಸಂಘಟನೆ ಮೀಡಿಯಾ ಅಲ್ಯೂಮ್ನಿ ಅಸೋಸಿಯೇಷನ್ (ಮಾಮ್) ವತಿಯಿಂದ ಶುಕ್ರವಾರ ಆಳ್ವಾಸ್ ವಿದ್ಯಾಸಂಸ್ಥೆಯ ಕುವೆಂಪು ಸಭಾಂಗಣದಲ್ಲಿ ನಡೆದ ೨೦೧೮-೧೯ನೇ ಸಾಲಿನ ಮಾಮ್ ಇನ್‌ಸ್ಪೈರ್ ಅವಾರ್ಡ್ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಪತ್ರಿಕೋದ್ಯಮ ಕ್ಷೇತ್ರ ಇನ್ನಷ್ಟು ಬೆಳೆಯಬೇಕು. ಸಮಾಜಮುಖಿಯಾದ ಹೆಚ್ಚು ಹೆಚ್ಚು ಬರಹಗಳು ಮಾಧ್ಯಮದ ಮೂಲಕ ಹೊರಬರಬೇಕು. ಪತ್ರಿಕೋದ್ಯಮಕ್ಕೆ ಬರುವ ಮಂದಿ ವೃತ್ತಿ ಧರ್ಮವನ್ನು ಮರೆಯಬಾರದು. ಮಾಮ್ ಸಂಘಟನೆ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದೆ. ಪತ್ರಿಕೋಧ್ಯಮ ಕ್ಷೇತ್ರದಲ್ಲಿ ಬೆಳೆಯುತ್ತಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳುತ್ತಿರುವ ಇನ್‌ಸ್ಪೈರ್ ಅವಾರ್ಡ್ ನಿರಂತರ ಮುಂದುವರಿಯಲಿ ಎಂದು ಡಾ.ಆಳ್ವ ಆಶಿಸಿದರು.

ಮುಖ್ಯ ಅತಿಥಿಯಾಗಿದ್ದ ಮಾಮ್ ಪ್ರಶಸ್ತಿ ತೀರ್ಪುಗಾರರು, ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿವಿ ಇಲ್ಲಿನ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಮಾತನಾಡಿ, ಭಾಷೆಯ ಮೇಲಿನ ಹಿಡಿತದೊಂದಿಗೆ ಹೊಸತನ್ನು ಹುಡುಕುವ, ಶೋಧನೆಯ ಕೆಲಸ ಪತ್ರಕರ್ತರಿಂದ ಆಗಬೇಕು. ಅವಸರದ ಸುದ್ದಿಗಳಿಗೆ ಆದ್ಯತೆ ನೀಡದೆ, ನೈಜತೆಯನ್ನು ತೆರೆದಿಡುವ ಸುದ್ದಿಗಳಿಗೆ ಒತ್ತುನೀಡಬೇಕು. ಮಾಮ್ ಸಂಘಟನೆ ವಿದ್ಯಾರ್ಥಿಗಳ ಬರಹಗಳಿಗೆ ಉತ್ತೇಜನ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮಾಮ್ ಅಧ್ಯಕ್ಷ ಸುರೇಶ್ ಪುದುವೆಟ್ಟು ಅಧ್ಯಕ್ಷತೆ ವಹಿಸಿದ್ದರು. ಮಾಮ್ ಗೌರವಾಧ್ಯಕ್ಷ ವೇಣು ಶರ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಾಮ್ ಪ್ರಶಸ್ತಿ ಸಮಿತಿ ಸಂಚಾಲಕ ಶರತ್ ಹೆಗ್ಡೆ ಕಡ್ತಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕ ಶ್ರೀನಿವಾಸ ಪೆಜತ್ತಾಯ ಸ್ವಾಗತಿಸಿ, ಮಾಮ್ ಕೋಶಾಧಿಕಾರಿ ಕೃಷ್ಣ ಕಿಶೋರ್ ವೈ ವಂದಿಸಿದರು. ಸದಸ್ಯ ಕೃಷ್ಣಮೋಹನ ತಲೆಂಗಳ ಕಾರ್ಯಕ್ರಮ ನಿರೂಪಿಸಿದರು.
ಮಾಮ್ ಉಪಾಧ್ಯಕ್ಷ ವೇಣು ವಿನೋದ್ ಕೆ.ಎಸ್,  ಪ್ರಧಾನ ಕಾರ್ಯದರ್ಶಿ ಸುರೇಶ್ ಡಿ. ಪಳ್ಳಿ, ಚಂದ್ರಶೇಖರ ಕುಳಮರ್ವ, ಮಂಗಳೂರು ವಿವಿ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಸಫಿಯಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
---

ನಾಲ್ಕು ಮಂದಿಗೆ ಮಾಮ್ ಇನ್‌ಸ್ಪೈರ್ ಅವಾರ್ಡ್ ಪ್ರದಾನ

ಮಂಗಳೂರು ವಿವಿಯ ಕುಲಸಚಿವ ಡಾ.ಎ.ಎಂ.ಖಾನ್ ಮತ್ತು ಡಾ.ಎಂ.ಮೋಹನ ಆಳ್ವ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಮಾಮ್ ಇನ್‌ಸ್ಪೈರ್ ಅವಾರ್ಡ್ ಪ್ರದಾನಿಸಿದರು. ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದಲ್ಲಿ ಮೂಡಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ವಿಭಾ ಡೋಂಗ್ರೆ (ಪ್ರಥಮ), ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಶನ್‌ನ ವಿದ್ಯಾರ್ಥಿನಿ ಚೇತನಾ ನಾಯಕ್ ಕೆ. (ದ್ವಿತೀಯ), ಪದವಿ ವಿಭಾಗದಲ್ಲಿ ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಶ್ರೀಕಾಂತ್ ಪಿ. (ಪ್ರಥಮ), ಆಳ್ವಾಸ್ ಕಾಲೇಜಿನ ಸೋನಿಯ ಎಸ್.(ದ್ವಿತೀಯ) ಪ್ರಶಸ್ತಿ ಗಳಿಸಿದರು. ಪ್ರಥಮ ಸ್ಥಾನ ವಿಜೇತರಿಗೆ ರೂ.೫೦೦೦ ನಗದು, ಪ್ರಶಸ್ತಿ ಫಲಕ, ದ್ವಿತೀಯ ಸ್ಥಾನ ವಿಜೇತರಿಗೆ ರೂ.೧೫೦೦ ನಗದು ಪ್ರಶಸ್ತಿ ಫಲಕದೊಂದಿಗೆ ಗೌರವಿಸಲಾಯಿತು.
---
ನಿರಂತರ ಓದಿನಿಂದ ಉತ್ತಮ ಬರಹಗಾರನಾಗಲು ಸಾಧ್ಯ. ಯುವಜನಾಂಗಕ್ಕೆ ಸರಿಯಾದ ಮಾರ್ಗದರ್ಶನದೊಂದಿಗೆ ಉತ್ತಮ ಸಮಾಜ ನಿರ್ಮಾಣದಲ್ಲಿ ತೊಡಗುವಂತೆ ಮಾಡುವ ಮಹತ್ತರ ಜವಾಬ್ದಾರಿ ಮಾಧ್ಯಮದ ಮೂಲೂ ಇದೆ.
-
ಡಾ.ಎ.ಎಂ.ಖಾನ್, ಕುಲಸಚಿವರು ಮಂಗಳೂರು ವಿವಿ.

---
ಯಾವುದೇ ಕ್ಷೇತ್ರವಾದರೂ ಸರಿ, ಅಲ್ಲಿ ಧನಾತ್ಮಕ ಚಿಂತನೆ, ಪ್ರಾಮಾಣಿಕತೆ, ವೃತ್ತಿಧರ್ಮವನ್ನು ಪಾಲನೆ ಮಾಡುವುದು ತುಂಬಾ ಮುಖ್ಯ, ಆಗ ಮಾತ್ರ ನಾವು ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಲು ಸಾಧ್ಯ.
- ಮಾಮ್ ಅಧ್ಯಕ್ಷ ಸುರೇಶ್ ಪುದುವೆಟ್ಟು


‘ಪತ್ರಿಕೋದ್ಯಮ ಉಳಿಯಬೇಕಾದರೆ ಯಾವುದೇ ತಂತ್ರಜ್ಞಾನ ಅಭಿವೃದ್ಧಿ ಪಡಿಸುವ ಅಗತ್ಯವಿಲ್ಲ, ಬದಲಾಗಿ ಓದುಗರನ್ನು ಸೃಷ್ಠಿ ಮಾಡುವ ಅವಶ್ಯಕತೆಯಿದೆ. ಅವರಿಗೆ ಅಗತ್ಯವಾದ ಮಾಹಿತಿಗಳನ್ನು ನೀಡಿದಾಗ ಮಾತ್ರ ಇದು ಸಾಧ್ಯ
- ವೇಣು ಶರ್ಮ, ಮಾಮ್ ಗೌರವಾಧ್ಯಕ್ಷ
































































ಫೋಟೋ ಕೃಪೆ: ಆಳ್ವಾಸ್ ಪತ್ರಿಕೋದ್ಯಮ ವಿದ್ಯಾರ್ಥಿಗಳು ಮತ್ತು ಕೃಷ್ಣಕಿಶೋರ್, ಸಫಿಯಾ (MAAM)

No comments:

Post a Comment