![]() |
Photo: Krishnakishore |
![]() |
Photo: Krishnakishore |
![]() |
Photo: Krishnakishore |
![]() |
Photo: Krishnakishore |
![]() |
Photo: Krishnakishore |
Photo: Krishnakishore |
![]() |
Photo: Krishnakishore |
![]() |
Photo: Krishnakishore |
![]() |
Photo: Krishnakishore |
![]() |
Photo: Krishnakishore |
Photo: Krishnakishore |
Photo: Krishnakishore |
ಅದು ಬಹುತೇಕ ಮೊಬೈಲ್ ನಾಟ್ ರೀಚೇಬಲ್ ಪ್ರದೇಶ...
ಅಲ್ಲಿಗೆ ಬಸ್ಸು, ಲಾರಿ ಸದ್ದು ಕೇಳಿಸೋದಿಲ್ಲ, ವಾಟ್ಸಾಪ್, ಫೇಸುಬುಕ್ಕು ಸಂಪರ್ಕದಿಂದ ತುಸು ದೂರ...
ಎತ್ತರದ ಶಿಖರದ ಬುಡದ ಹಚ್ಚಹಸಿರು ಹೊದ್ದ ಬೆಟ್ಟದ ಬುಡದಲ್ಲಿನ ಪುಟ್ಟ ಮನೆ...ಸುತ್ತ ಹೂತೋಟ, ಅಂಕುಡೊಂಕು ಕಚ್ಚಾರಸ್ತೆಯ ಸುತ್ತ ಕಾಫಿ ತೋಟ...
ಝೀರುಂಡೆ ಜೇಂಕಾರಕ್ಕೆ ತಂಪು ತಂಪು ಮಂಜಿನ ಹನಿಗಳ ಸಿಂಚನ...
ಸಾಕಲ್ವೇ... ಯಾಂತ್ರಿಕ ಬದುಕಿನಿಂದ ತುಸು ಅಂತರವಿರಿಸಿ ಮನಸ್ಸು ಫ್ರೆಶ್ ಮಾಡಿಕೊಳ್ಳಲು, ಒಂದು ದಿನ ಆರಾಮವಾಗಿ ಪರಿಸರ ಸುತ್ತಿ ಬರಲು, ಯಂತ್ರಗಳಿಂದ ದೂರ ಹೋಗಿ, ಒಂದಷ್ಟು ಹೊತ್ತು ನಾಟ್ ರೀಚೆಬಲ್ ಆಗಿ ನಮ್ಮನ್ನು ನಾವು ಕಂಡುಕೊಳ್ಳಲು.. ಅರ್ಥಾತ್ ನಮ್ಮೊಳಗಿನ ಸೆಲ್ಫೀಯನ್ನು ನಾವೇ ಕಂಡುಕೊಂಡು ಹೊಸ ಹುರುಪು ಪಡೆದುಕೊಂಡು ಮರಳಲು...
ಇಂತಹದ್ದೇ ಅನುಭವ ಮಾಮ್ ವತಿಯಿಂದ ಕಳೆದ ನ.25ರಂದು ಕೊಡಗಿನ ಬೆಟ್ಟತ್ತೂರು ಎಂಬಲ್ಲಿಗೆ ಪ್ರವಾಸ ತೆರಳಿದ ನಮಗೆಲ್ಲರಿಗಾಯಿತು...
---------
ಊರು ಬಿಟ್ಟು ಕಾಡು ತಪ್ಪಲು ಸೇರಿ ಪ್ರಕೃತಿಯ ಸೊಬಗು ಕಂಡು ಬೆರಗಾಗಿದ್ದು, ಪುಟ್ಟ ಬೆಟ್ಟದ ಶಿಖರ ಹತ್ತಿ ಸುತ್ತಲ ಪ್ರಪಾತ ಕಂಡು ದಂಗಾಗಿದ್ದು, ಮತ್ತೆ ಕೆಳಗಿಳಿದು ಬಂದು ಪುಟ್ಟದಾದ, ಚೊಕ್ಕದಾ ಹೋಂ ಸ್ಟೇಯ ಅಂಗಣದಲ್ಲಿ ಕುಳಿತು ಮಾಮ್ ಮುಂದಿನ ಹೆಜ್ಜೆಗಳ ಕುರಿತು ಸವಿಸ್ತಾರವಾಗಿ ಚರ್ಚಿಸಿದ್ದು ಎಲ್ಲ ಈಗ ನೆನಪಾದರೂ, ತುಂಬ ದಿನ ಅಚ್ಚಳಿಯದೆ ಕಾಡುವಂತಹ ಸುಮಧುರ ಅನುಭೂತಿ..
---------
ಮಂಗಳೂರು ವಿ.ವಿ.ಯ ಪತ್ರಿಕೋದ್ಯಮ ಸ್ನಾತಕೋತ್ತರ ಪದವೀಧರರ ಹಳೆ ವಿದ್ಯಾರ್ಥಿ ಸಂಘ ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶ್ ಆಫ್ ಮಂಗಳಗಂಗೋತ್ರಿ (ಮಾಮ್) ಸ್ಥಾಪನೆಯಾಗಿ ವರ್ಷ ತುಂಬುತ್ತಿದೆ. ಈ ಘಳಿಗೆಯನ್ನು ಸುಮಧುರವಾಗಿಸುವ ಉದ್ದೇಶದಿಂದ ಒಂದು ಸೌಹಾರ್ದಯುತ ಪ್ರವಾಸ ಹಮ್ಮಿಕೊಳ್ಳುವ ಯೋಚನೆ ಬಂತು. ತಕ್ಷಣ ವಾಟ್ಸಾಪ್ ಗ್ರೂಪುಗಳಲ್ಲಿ ಮಾಹಿತಿ ಪಸರಿಸಿ ಆಯಿತು. ಸುಮಾರು 15 ಮಂದಿ ಪ್ರವಾಸದಲ್ಲಿ ಪಾಲ್ಗೊಳ್ಳಲು ಆಸಕ್ತಿ ತೋರಿದರು. ಅಂತಿಮ ಹಂತದಲ್ಲಿ 13 ಮಂದಿ ಉಳಿದು, ಅನಾರೋಗ್ಯ ಇತ್ಯಾದಿ ಕಾರಣದಿಂದ ಕೊನೆಯದಾಗಿ ಪ್ರವಾಸಕ್ಕೆ ಸಿಕ್ಕವರು 9 ಮಂದಿ ಮಾತ್ರ. ಆರು ಮಂದಿ ಮಂಗಳೂರಿನಿಂದ ಹಾಗೂ ಮೂವರು ಬೆಂಗಳೂರಿನಿಂದ.
ಸಮಾನ ಆಸಕ್ತಿ, ಊರು ಸುತ್ತುವ ಹುರುಪು, ಅಷ್ಟೂ ಕ್ಷಣಗಳನ್ನು ಕ್ರೀಡಾಸ್ಫೂರ್ತಿಯಿಂದ ಸ್ವೀಕರಿಸುವ ಆಸಕ್ತಿಯಿಂದ ನಾವು ಹೊರಟ ಜಾಗ ಕೊಡಗಿನ ಮದೆನಾಡು ಸಮೀಪದ ಬೆಟ್ಟತ್ತೂರು ಎಂಬ ಗುಡ್ಡ ಪ್ರದೇಶ. ಇದು ಸುಳ್ಯದಿಂದ ಸುಮಾರು 40 ಕಿ.ಮೀ. ದೂರದಲ್ಲಿದೆ. ಮದೆನಾಡಿನಿಂದ ಸುಮಾರು ಆರೇಳು ಕಿ.ಮೀ. ಒಳಭಾಗದಲ್ಲಿ ಗುಡ್ಡದ ಮಧ್ಯದಲ್ಲಿದೆ...
-------------
ಅಂದ ಹಾಗೆ, ಬೆಟ್ಟತ್ತೂರಿನ ಜಾಗ ಸೂಚಿಸಿದವರು ಮಾಮ್ ಗೌರವಾಧ್ಯಕ್ಷ ವೇಣು ಶರ್ಮ. ನಮಗೆ ಅಲ್ಲಿ ವಾಸ್ತವ್ಯಕ್ಕೆ ಹೋಂ ಸ್ಟೇ ಒದಗಿಸಿ, ನಮ್ಮೊಂದಿಗೆ ಒಂದು ದಿನ ಅಲ್ಲಿ ಉಳಿದು ಚಾರಣ ಕರೆದುಕೊಂಡು ಹೋದವರು ವೇಣು ಶರ್ಮರ ಸಹಪಾಠಿ, ಎಂಸಿಜೆ ಹಳೆ ವಿದ್ಯಾರ್ಥಿ ಕೆ.ಎಂ.ಕಾರ್ಯಪ್ಪ (ಪತ್ರಕರ್ತರು). ಅವರ ಸಹಕಾರ, ಔದಾರ್ಯದಿಂದ ಪ್ರವಾಸ ಯಶಸ್ವಿಯಾಯಿತು ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ...
---------------
ಬೆಟ್ಟತ್ತೂರಿನ ಹೋಂಸ್ಟೇ ಸುತ್ತಮುತ್ತ ಏನಿದೆ...?
ಮಂಗಳೂರು-ಮಡಿಕೇರಿ ರಾಜ್ಯ ಹೆದ್ದಾರಿಯಂದ ಸಾಕಷ್ಟು ಒಳಭಾಗದಲ್ಲಿ ಮದೆನಾಡಿನಿಂದ ಗುಡ್ಡ ಪ್ರದೇಶದಲ್ಲಿ ಕಾರ್ಯಪ್ಪನವರ ಹೋಂಸ್ಟೇ ಇದೆ. ಎತ್ತರದ ಮೂರು ನಾಲ್ಕು ಪರ್ವತ ಶಿಖರದ ಬುಡದಲ್ಲೇ ಅವರ ಹೋಂಸ್ಟೇ ಇರುವುದರಿಂದ ರಾತ್ರಿ ಉಳಕೊಳ್ಳಲು. ಬೇಕಾದ ಹೊತ್ತಿನಲ್ಲಿ ಚಾರಣ ತೆರಳಲು, ರಾತ್ರಿ ಶಿಬಿರಾಗ್ನಿ ಹಾಕಲು, ಬೇಕಾದ ಅಡುಗೆ ಮಾಡಿ ಉಣ್ಣಲು ಎಲ್ಲದಕ್ಕೂ ಅನುಕೂಲವಿದೆ. ಮನೆಯಂಗಳದ ತನಕ ರಸ್ತೆಯೂ ಇರುವುದರಿಂದ ವಾಹನದಲ್ಲೇ ತೆರಳಬಹುದು...ಅಡುಗೆ ಸಹಾಯಕರು, ಚಾರಣ ಮಾರ್ಗದರ್ಶಕರೂ ಜೊತೆಗಿರುವುದರಿಂದ ಚಾರಣ ಸರಳ ಹಾಗೂ ಸುಲಭ.
----------------
ಮಂಗಳೂರಿನಿಂದ ಬೆಳಗ್ಗೆ 6 ಗಂಟೆಗೆ ಸರಿಯಾಗಿ ಶ್ರೀಯುತ ಕೋಟೆಕಾರ್ ಅವರ ತವೇರಾ ವಾಹನದಲ್ಲಿ ವೇಣು ಶರ್ಮ, ಸುರೇಶ್ ಪಳ್ಳಿ, ಅಧ್ಯಕ್ಷೆ ಫ್ಲೋರಿನ್, ಸ್ಮಿತಾ ಶೆಣೈ ಹೊರಟರೆ, ಕಲ್ಲಡ್ಕದಲ್ಲಿ ಬೈಕ್ ನಿಲ್ಲಿಸಿ ನಾನು ಹಾಗೂ ಕಿಶೋರ್ ಅವರಿಗೆ ಸಾಥ್ ನೀಡಿದೆವು. ನಾವು ಮಾಣಿ ಸಮೀಪ ಹೊಟೇಲೊಂದಲ್ಲಿ ತಿಂಡಿ ತಿಂದು, ತಿನಿಸು, ಅಡುಗೆ ಸಾಮಗ್ರಿ ಕಟ್ಟಿಕೊಂಡು ಸುಮಾರು 9.30 ಹೊತ್ತಿಗೆ ಮದೆನಾಡು ತಲುಪಿದಾಗ ಬೆಂಗಳೂರಿನಿಂದ ಬಂದಿದ್ದ ದೀಪಕ್, ಸುಕೇಶ್, ದಿಯಾ, ಕೆ.ಎಂ.ಕಾರ್ಯಪ್ಪ (ಮಾಲೀಕರು) ಜೊತೆ ಸೇರಿದರು. ಬೆಟ್ಟದೂರಿನ ಹೋಂಸ್ಟೇ ತಲುಪಿ ಲಘು ಉಪಹಾರ, ಲೆಮನ್ ಟೀ ಕುಡಿದು ದಣಿವಾರಿಸಿಯಾಯಿತು.
ಬಳಿಕ ಮನೆ ಕೆಳಗೇ ಸಾಗುವ ಡೊಂಕು ರಸ್ತೆಯಲ್ಲಿ ಸುತ್ತಾಡಿ, ಪಕ್ಕದ ನಾಲ್ಕೈದು ಮನೆಯಂಗಳದಲ್ಲಿ ಕಂಡ ಕೊಡಗಿನ ಪುಷ್ಪ ರಾಶಿಯನ್ನು ಕಂಡಿದ್ದು ಮಾತ್ರವಲ್ಲ, ನೀರವ ಪರಿಸರದಲ್ಲಿ ಬೆಳದು ನಿಂತ ಅಷ್ಟುದ್ದ ಮರಗಳು, ಬಯಲಲ್ಲಿ ಕಟ್ಟಿದ ಜಾನುವಾರು ಸಾಲು, ಬೆಳ್ಳಕ್ಕಿ, ಹರಿಯುವ ತೊರೆ ಎಲ್ಲವನ್ನೂ ಕಂಡು, ಫೋಟೋ ಕ್ಲಿಕ್ಕಿಸಿ, ಸೆಲ್ಫೀ ತೆಗೆದು, ಅದೂ ಇದೂ ಹರಟೆ ಹೊಡೆದು ಬರುವಷ್ಟರಲ್ಲಿ ಮನೆಯಲ್ಲಿ ಅಡುಗೆ ರೆಡಿಯಾಗಿತ್ತು.
------------------
ಸ್ವಾದಿಷ್ಟ ಊಟ ಮುಗಿಸಿ, ಕಾರ್ಯಪ್ಪನವರ ಜೊತೆ ಸೇರಿ ಎಂಸಿಜೆ ತರಗತಿಗಳ ಹಳೆ ನೆನಪುಗಳ ಕುರಿತು ಹರಟೆ ಹೊಡೆದಿದ್ದಾಯಿತು. ತುಸು ವಿಶ್ರಾಂತಿ ಮುಗಿಸಿ ಮೂರು ಗಂಟೆ ವೇಳೆಗೆ ಬೆಟ್ಟ ಹತ್ತಲು ಹೊರಟೆವು. ಈ ನಡುವೆ ಹಲವರು ಅಲ್ಪಸ್ವಲ್ಪ ಸಿಗುವ ಮೊಬೈಲ್ ನೆಟ್ ವರ್ಕಿನಲ್ಲೇ ಅಗತ್ಯವಿರುವವರ ಜೊತೆ ಮಾತನಾಡಿದ್ದೂ ಆಗಿತ್ತು. ಆದರೆ, 3ಜಿ, 2ಜಿ ಮಾತ್ರ ಕೈಗೆಟಕುತ್ತಲೇ ಇರಲಿಲ್ಲ. ಹಾಗಾಗಿ ವಾಟ್ಸಾಪ್, ಫೇಸ್ ಬುಕ್ ನೋಡಬೇಕಾದ ಅನಿವಾರ್ಯ ತುಡಿತ ಇರಲಿಲ್ಲ.
ನಾವು 9 ಮಂದಿ ಜೊತೆಗೆ ಕಾರ್ಯಪ್ಪನವರು ಹಾಗೂ ಅವರ ಸಹಾಯಕ ಕಂದ ಇಬ್ಬರೂ ಚಾರಣದಲ್ಲಿ ಸಹಾಯಕ್ಕೆ ಬಂದರು. ಸುಮಾರು ಎರಡು ಕಿ.ಮೀ. ನಡೆದರೆ ಸಿಗುವ ಬೆಟ್ಟದೂರಿನ ಶಿಖರದ ತುದಿಯನ್ನು ಕೇವಲ ಅರ್ಧ ಮುಕ್ಕಾಲು ಗಂಟೆಯಲ್ಲಿ ಏರಲು ಸಾಧ್ಯ. ದಾರಿಯಲ್ಲಿ ಅಕಸ್ಮಾತ್ ಸಿಕ್ಕಿದ ಜಿಗಣೆಗಳಿಂದ ಸ್ಥಳದಲ್ಲೇ ರಕ್ತದಾನ ಶಿಬಿರವೂ ಆಯಿತು. ಕಂದ ಅವರು ಕಡಿದು ಕೊಟ್ಟ ಯಾವುದೋ ಹುಳಿಯನ್ನು ಕಾಲಿಗೆ ಲೇಪಿಸಿದ ಬಳಿಕ ಜಿಗಣೆ ಬಾಧೆ ನಿಂತಿತು.
-----------------------
ಬೆಟ್ಟ ಹತ್ತಿ ಸುತ್ತ ನೋಡಿದಾಗ ಇಳಿಸಂಜೆಯ ಹೊನ್ನ ಬೆಳಕಿನಲ್ಲಿ ಸುತ್ತಮುತ್ತ ನೋಡಿದರೆ ಬೆಟ್ಟಗಳ ಸಾಲು.....ಸಾಲು...
ಕೆಳಗೆ ಪ್ರಪಾತಕ್ಕೆ ಇಣುಕಿದರೆ ದಟ್ಟ ಕಾಡಿನ ಮರಗಳ ತುದಿಗಳಲ್ಲಿ ಸಾವಿರ ಸಾವಿರ ವೆರೈಟಿಯ ಹಸಿರೋ ಹಸಿರು.... ನಾಗರಿಕತೆಯದ ಜಂಜಡದಿಂದ ದೂರ ಬಂದ ಖುಷಿ ಮಾತ್ರವಲ್ಲ. ಎತ್ತರವೊಂದನ್ನು ತಲುಪಿದ ಸಾರ್ಥಕತೆ, ಸಣ್ಣ ಪುಟ್ಟ ಕಾಂಡ್ಲಾ ಮಾದರಿ ಮರಗಳ ಗುಂಪಿನ ತೆಳು ನೆರಳಿನ ಪ್ರದೇಶಗಳು ಧ್ಯಾನಕ್ಕೆ ಹೇಳಿ ಮಾಡಿಸಿದ ಜಾಗ. ಸಾಕಷ್ಟು ಮಂದಿ ಫೋಟೊ ತೆಗೆಸುವ ಹಪಾಹಪಿ. ಸೆಲ್ಫೀ ಹೊಡೆಯುವ ಸಂಭ್ರಮ. ಹಿಂದಿನ ಹಸಿರು ಕಾಡು, ಶುಭ್ರ ಮೋಡ, ತೆಕ್ಕೆಗೆ ನಿಲುಕದ ಆಗಸದ ಬ್ಯಾಕ್ ಗ್ರೌಂಡ್ ಸೇರಿಸಿ ಫೋಟೊ ಹೊಡೆಸಿಕೊಂಡದ್ದಾಗಿತ್ತು. ಸುಕೇಶ್ ಮೊಬೈಲ್ ನಲ್ಲಿ ಅದ್ಭುತ ಎನಿಸುವ ಸೆಲ್ಫೀ ಹೊಡೆಸಿಕೊಂಡದ್ದಾಯಿತು. ಕಿಶೋರ್ ಕ್ಯಾಮೆರಾಗೆ ಬಿಡುವೇ ಇರಲಿಲ್ಲ....
ಅದ್ಭುತ ಶಿಖರವೊಂದನ್ನು ಕಡಿಮೆ ಶ್ರಮದಲ್ಲಿ ಹತ್ತಿದ ಖುಷಿ, ಸಾರ್ಥಕತೆ ಹಾಗೂ ಶುಭ್ರ ವಾಯು ಸೇವಿಸಿದ ಫ್ರೆಶ್ ನೆಸ್ ಅನುಭವ ಬೇರೆ...
ಕಾರ್ಯಪ್ಪನವರಗೆ ಥ್ಯಾಂಕ್ಸ್ ಹೇಳುತ್ತಾ ಬೆಟ್ಟ ಇಳಿಯಲು ತೊಡಗುವ ವೇಳೆ ಮೋಡ ಅಡ್ಡ ಬಂದು ಸೂರ್ಯಾಸ್ತ ನೋಡಲು ಆಗಲಿಲ್ಲ...
ಓಡು ನಡಿಗೆಯಲ್ಲೇ ಕೆಳಗಿಳಿದು ಮನೆ ತಲುಪುವಾಗ ಕತ್ತಲೆ ಆವರಿಸಿತ್ತು. ಖುಷಿಯ ವಿಚಾರವೆಂದರೆ ಅಂದು ಹುತ್ತರಿಯ ಹಿಂದನ ದಿನ ಪೂರ್ಣ ಚಂದಿರನ ದರ್ಶನವಾಯಿತು. ಮಳೆ ಇರಲಿಲ್ಲ, ಪರಿಸರ ಹಿತವಾಗಿತ್ತು.... ತಂಪು ತಂಪು ಕೂಲ್ ಕೂಲ್ ಹವೆಯಲ್ಲೇ ಶಿಬಿರಾಗ್ನಿ ವ್ಯವಸ್ಥೆಯಾಯಿತು.... ಹಾಡಿ, ಕುಣಿದು, ಮಾತನಾಡುವ ಹೊತ್ತಿಗೆ 10 ಗಂಟೆಯಾಗಿದ್ದೇ ತಿಳಿಯಲಿಲ್ಲ....
--------------
ಈ ಹಂತದಲ್ಲೇ ಮಾಮ್ ಭವಿಷ್ಯದ ಕುರಿತು ಸಾಕಷ್ಟು ಚರ್ಚೆಗಳಾದವು. ಮುಖ್ಯವಾಗಿ ಹೆಚ್ಚಿನ ಸದಸ್ಯರನ್ನು ವೈಯಕ್ತಿಕವಾಗಿ ತಲುಪುವ ದೃಷ್ಟಿಯಿಂದ ಮುಂದಿನ ಮಾರ್ಚ್ ವೇಳೆಗೆ ಬೆಂಗಳೂರಿನಲ್ಲಿ ಮಾಮ್ ಸದಸ್ಯರ ವಾರ್ಷಿಕ ಸಮ್ಮಿಲನ ಹಾಗೂ ಔತಣಕೂಟವನ್ನು ನಡೆಸಲು ನಿರ್ಧರಿಸಲಾಯಿತು. ಹೊಸದಾಗಿ ಪರಿಚಯವಾದ ಕಾರ್ಯಪ್ಪನವರಿಂದ ತೊಡಗಿ ಎಲ್ಲರ ಸಲಹೆಗಳನ್ನು ಪಡೆಯಲಾಯಿತು. ಸಂಘಟನೆಯನ್ನು ಮುಂದುವರಿಸುವ ಕುರಿತು ಆತ್ಮಸ್ಥೈರ್ಯಗಳಿಸಲು ಈ ಅನೌಪಚಾರಿಕ ಸಭೆ ಸಹಕಾರಿಯಾಯಿತು....
ರಾತ್ರಿ ಊಟ ಮುಗಿಸಿದ ಬಳಿಕ ಮನೆ ಪಕ್ಕದ ಡೊಂಕುರಸ್ತೆಯಲ್ಲಿ ಎಲ್ಲರೂ ಸೇರಿ ಬೆಳದಿಂಗಳಲ್ಲಿ ನಡೆಸಿದ ಸಣ್ಣ ವಾಕ್ ಮಾತ್ರ ತುಂಬಾ ಹೃದಯಸ್ಪರ್ಶಿ... ತಂಪು ಹವೆ, ನಿರ್ಜನ ರಸ್ತೆ, ಸುತ್ತ ದಟ್ಟ ಮರಗಳು ನಡುವೆ ಸ್ನೇಹಿತರ ಜೊತೆಗಿನ ನಡಿಗೆ ಮಾತ್ರ ಯಾವತ್ತೂ ನೆನಪಲ್ಲಿ ಉಳಿಯುವಂತದ್ದು.... ರಾತ್ರಿ ನಿದ್ರೆ ಮುಗಿಸಿ ಬೆಳಗ್ಗೆ 6 ಗಂಟೆಗೆ ಕಾರ್ಯಪ್ಪನವರಿಗೆ ವಿದಾಯ ಹೇಳಿ ಹೊರಟು ಮಂಗಳೂರು ತಲಪುವಾಗ 9.30 ಕಳೆದಿತ್ತು... ಒಂದು ದಿನವನ್ನು ಸಾರ್ಥಕವಾಗಿ ಕಳೆದ ಖುಷಿ ಎಲ್ಲರಲ್ಲೂ ಮನೆ ಮಾಡಿತ್ತು....
------------
ಯಾಕೆ ಬೇಕಿತ್ತು ಪ್ರವಾಸ...?
ಮಾಮ್ ಕಟ್ಟಿಕೊಂಡಿದ್ದೇವೆ. ಪ್ರತಿದಿನ ವಾಟ್ಸಾಪ್ ಗ್ರೂಪುಗಳಲ್ಲಿ ಸಾಕಷ್ಟು ಚರ್ಚೆಗಳಾಗುತ್ತವೆ. ವರ್ಕಿಂಗ್ ಕಮಿಟಿಯವರ ಚಟುವಟಿಕೆಗಳ ಕುರಿತ ಮಾಹಿತಿಯನ್ನು ಕೆಲವರಾದರೂ ಓದುತ್ತಾರೆ. ಮಾತುಕತೆ, ಹರಟೆ, ಚರ್ಚೆ ನಡೆಯುತ್ತದೆ. ಆದರೆ, ಕೆಲಸದ ಜಂಜಡದಿಂದ ತುಸು ಬ್ರೇಕ್ ಪಡೆದು ಹೊರ ಬಂದು ಮುಕ್ತವಾಗಿ ಮಾತನಾಡುವ, ಪ್ರಕೃತಿಯ ನೀರವತೆಗೆ ಕಿವಿಕೊಡುವ, ಹಸಿರಿನ ಮಡಿಲಲ್ಲಿ ಕುಳಿತು ಉಣ್ಣುವ, ಹಳೆಯ ನೆನಪುಗಳ ಮೆಲುಕು ಹಾಕಿ ತುಸು ಎಳೆಯರಾಗುವ ಖುಷಿಗೆ ಇಂತಹ ಒಂದು ಸಣ್ಣ ಪ್ರವಾಸ ಉತ್ತಮ ವೇದಿಕೆ ಹೌದು...
ಕಾಲೇಜಿಗೆ ಹೋಗುವಷ್ಟು ದಿನ ಅಲ್ಲಿಂದ ಒಂದು ಪ್ರವಾಸಕ್ಕೆ ವೇದಿಕೆ ಇರುತ್ತದೆ. ಕಲಿತು ಹೊರ ಬಂದು ಕೆಲಸಕ್ಕೆ ಸೇರಿದ ಬಳಿಕ ರಜೆ ಇಲ್ಲ, ಕೆಲಸ ಜಾಸ್ತಿ, ಎಲ್ಲರ ಟೈಂ ಕೂಡಿಬರೋದಿಲ್ಲ... ಹೀಗೆಲ್ಲ ಕಾರಣಗಳಿಂದ ಪ್ರವಾಸಕ್ಕೆ ಹೋಗುವುದು ಕಡಿಮೆಯಾಗುವುದು ಹೌದು ತಾನೆ. ಜೊತೆಗೆ ಎಲ್ಲರೂ ಸೇರಿ ಪ್ರವಾಸ ಹೋಗಲು ಸಂದರ್ಭಗಳೂ ಕಡಿಮೆ. ಪ್ರವಾಸಕ್ಕೆ ಜವಾಬ್ದಾರಿಯುತರಾಗಿ ಕರೆದೊಯ್ಯುವವರು, ಪ್ಲಾನ್ ಮಾಡುವವರು, ಸುರಕ್ಷಿತವಾಗಿ ಕರೆದೊಯ್ಯುವವರೂ ಬೇಕಲ್ಲ...
ಈ ಎಲ್ಲದಕ್ಕೂ ಉತ್ತರವಾಗಿ ಮಾಮ್ ಸಂಘಟಿಸಿದ ಈ ಪ್ರವಾಸ ಈ ಬಾರಿ 10 ಮಂದಿಯ ಪ್ರವಾಸವಾದರೂ ಎಲ್ಲರಿಗೂ ಖುಷಿ ಕೊಟ್ಟಿದೆ. ಒಂದೆಡೆ ಕುಳಿತು ಹಳೆ ಸ್ನೇಹಿತರು ಕಲೆತು, ಹೊಸಬರ ಪರಿಚಯ ಮಾಡಿಕೊಳ್ಳಲು ಅವಕಾಶ ಕೊಟ್ಟು ಯಶಸ್ವಿ ಎನಿಸಿದೆ. ವಿವಿಧ ಕಾರಣಗಳಿಂದ ಹಲವು ಹಳೆ ವಿದ್ಯಾರ್ಥಿಗಳಿಗೆ ಈ ಬಾರಿ ಹಲವಿರೆಗ ನಮ್ಮೊಂದಿಗೆ ಸೇರಲು ಸಾಧ್ಯವಾಗಲಿಲ್ಲ. ಮುಂದಿನ ಬಾರಿ ನೀವೆಲ್ಲ ಜೊತೆ ಸೇರಿ ಇನ್ನೊಂದು ಪ್ರವಾಸ ಸಂಘಟಿಸಲು ಇದು ಸ್ಫೂರ್ತಿಯಾಗಿದೆ. ಮಾತ್ರವಲ್ಲ ತುಂಬ ಮಂದಿಯನ್ನು ಈ ಬಾರಿ ಮಿಸ್ ಮಾಡಿಕೊಂಡಿದ್ದೇವೆ. ಮುಂದಿನ ಬಾರಿ ನೀವೆಲ್ಲಾ ಬರ್ತೀರಿ ಅಲ್ವ....
ನಾವಂತೂ ಈ ಪ್ರವಾಸದಲ್ಲಿ ಒಂದು ಆತ್ಮಾವಲೋಕನ ಮೂಲಕ ಚೆಂದದ ಸೆಲ್ಫೀ ಕಂಡುಕೊಂಡಿದ್ದೇವೆ. ಮುಂದನ ಬಾರಿ ಈ ಸೆಲ್ಫೀಯಲ್ಲಿ ನಿಮ್ಮ ಮುಖಗಳೂ ಕಾಣುತ್ತದೆಯಲ್ವ... ಅದಕ್ಕೆ ಬರಹಕ್ಕೆ ಇರಿಸಿದ ಶೀರ್ಷಿಕೆ ಮಾಮ್ ಸೆಲ್ಫೀ....
-----
ಬೆಟ್ಟತ್ತೂರಿಗೇ ಯಾಕೆ...
ನಮ್ಮ ಹಿರಿಯ ವಿದ್ಯಾರ್ಥಿ, ಎಂಸಿಜೆ ಅಲ್ಯೂಮ್ನಿ ಕೆ.ಎಂ.ಕಾರ್ಯಪ್ಪನವರು ನಡೆಸುತ್ತಿರುವ ಹೋಂಸ್ಟೇ ಒಂದು ಕಿರು ಪ್ರವಾಸಕ್ಕೆ ವಾರಾಂತ್ಯದ ಭೇಟಿಗೆ ಹೇಳಿ ಮಾಡಿಸಿದ ಸ್ಥಳ. ಮಂಗಳೂರು, ಬೆಂಗಳೂರು ಭಾಗದಿಂದ ಬರುವವರಿಗೂ ಅನುಕೂಲ. ಅವರಿಗೆ ಪೂರ್ವ ಮಾಹಿತಿ ನೀಡಿದರೆ ಅಲ್ಲಿ ಉಳಕೊಳ್ಳಲು, ಊಟಕ್ಕೂ ವ್ಯವಸ್ಥೆ ಮಾಡುತ್ತಾರೆ. ಸುಮಾರು 30-40 ಮಂದಿಯಿದ್ದರೂ ಸುಧಾರಿಸಬಹುದು. ಟೆಂಟ್ ಹಾಕಲು ಜಾಗವಿದೆ. ಚಾರಣಕ್ಕೆ ಮಾರ್ಗದರ್ಶನ ನೀಡುತ್ತಾರೆ. ಉತ್ತಮ ಪರಿಸರ ನೋಡಿದ ಖುಷಿ ನಿಮ್ಮದಾಗಬಹುದು. ನೀವಾಗಲೀ, ನಿಮ್ಮ ಸ್ನೇಹಿತರಾಗಲೀ ಈ ಭಾಗಕ್ಕೆ ಹೋಗುವಿರಾದರೆ...
ಸಂಪರ್ಕಕ್ಕೆ ಮಾಹಿತಿ...
VIRGIN Mountains,
Bettathur village, MADENAADU Post, MAdikeri Taluk, KOdagu
Trekking, Mountain Climbing, Tetnt pitching, sight seeing, campfire etc..
MAIL-virginmountains@gmail.com
web: www.virginmountains.com
contact: 9343650640
9980568625
9449408625
8277236160.
------
ಮಾಮ್ ಸದಸ್ಯರ ವಾರ್ಷಿಕ ಸಮ್ಮಿಲನ
ಸಾಮಾನ್ಯವಾಗಿ ಮಾರ್ಚ್ ಅಂತ್ಯದ ವೇಳೆಗೆ ಯುಗಾದಿ ಹಬ್ಬಕ್ಕೆ ಮುದ್ರಣ ಮಾಧ್ಯಮದ ಪತ್ರಕರ್ತರಿಗೆ ಕಡ್ಡಾಯ ರಜೆ ಇರುತ್ತದೆ. ಆ ದಿನ (ತಾರೀಕು ನಿಗದಿಯಾಗಿಲ್ಲ) ಬೆಂಗಳೂರಿನಲ್ಲಿ ಹಳೆ ವಿದ್ಯಾರ್ಥಿಗಳ ಸಮ್ಮಿಲನ ಏರ್ಪಡಿಸಲು ಮಾಮ್ ಪ್ರವಾಸ ಸಂದರ್ಭ ನಿರ್ಧರಿಸಲಾಗಿದೆ. ಇತರ ಸಂಘಟನೆ ಜವಾಬ್ದಾರಿ ಮಾಮ್ ಬೆಂಗಳೂರು ಚಾಪ್ಟರ್ ಸದಸ್ಯರದ್ದು, ಹೆಚ್ಚಿನ ಮಾಹಿತಿ ಮುಂದೆ ಪ್ರಕಟಿಸಲಾಗುವುದು.
------
-ಕೆಎಂ, ಪ್ರಧಾನ ಕಾರ್ಯದರ್ಶಿ, ಮಾಮ್.
Memorable trip........nice write up km
ReplyDeleteMemorable trip........nice write up km
ReplyDeleteThis comment has been removed by the author.
ReplyDeletenice!
ReplyDeletenice write up.....memorable trip.....
ReplyDeletethanks to MAAM.
nice write up.....memorable trip.....
ReplyDeletethanks to MAAM.
nice..place....good narration
ReplyDelete