Friday, 7 April 2017

MAAM MCJ lecture series fourth Class (04.04.2017) Ahamadul Kabeer

ತಂತ್ರಜ್ಞಾನ ಬಳಕೆಯಿಂದ ಸುದ್ದಿ ಮಾಧ್ಯಮ ಕಾರ್ಯನಿರ್ವಹಣೆ ಬದಲಾವಣೆ: ಕಬೀರ್
------------------------------


ಮಂಗಳಗಂಗೋತ್ರಿ: ತಂತ್ರಜ್ಞಾನದ ಬಳಕೆಯಿಂದಾಗಿ ಸುದ್ದಿ ಮಾಧ್ಯಮಗಳು ಕಾರ್ಯನಿರ್ವಹಿಸುವ ಶೈಲಿ ಬದಲಾಗುತ್ತಿದೆ. ಇಂದು ಸುದ್ದಿ ಪ್ರಸಾರವು ಪೈಪೋಟಿಯಿಂದ ಕೂಡಿದೆ ಎಂದು ಟಿವಿ೯ ಕನ್ನಡ ಸುದ್ದಿ ವಾಹಿನಿಯ ಹಿರಿಯ ಕಾರ್ಯಕ್ರಮ ನಿರ್ಮಾಪಕ ಅಹಮದುಲ್ ಕಬೀರ್ ಹೇಳಿದ್ದಾರೆ.



ಮಂಗಳೂರು ವಿ.ವಿ. ಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಮಂಗಳವಾರ (ಏ.೪) ಮಾಮ್ (ಮೀಡಿಯಾ ಅಲೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ- ಮಾಮ್) ವತಿಯಿಂದ ಆಯೋಜಿಸಲಾಗಿದ್ದ ಉಪನ್ಯಾಸ ಸರಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ‘ಟೆಲಿವಿಷನ್ ಕಾರ್ಯಕ್ರಮ ನಿರ್ಮಾಣ’ ವಿಷಯದ ಕುರಿತು ಮಾತನಾಡಿದರು.

ಸುದ್ದಿ ಗ್ರಹಿಕೆ ಸಾಮರ್ಥ್ಯ ಅಗತ್ಯ:
ಟೆಲಿವಿಷನ್ ಕಾರ್ಯಕ್ರಮ ನಿರೂಪಕನಿಗೆ ಅಥವಾ ಯಾವುದೇ ಪತ್ರಕರ್ತನಿಗೆ ಸುದ್ದಿ ಗ್ರಹಿಕೆಯ ಸಾಮರ್ಥ್ಯ ಪ್ರಮುಖವಾಗಿ ಇರಬೇಕು. ಯಾವ ಸುದ್ದಿ ಹೆಚ್ಚು ಆದ್ಯತೆ ಪಡೆದಿದೆ ಎಂಬುದನ್ನು ಪರಿಶೀಲಿಸಬೇಕು. ಯಾವ ಸುದ್ದಿ ಪ್ರಾರಂಭದಲ್ಲಿ ಪ್ರಸಾರವಾಗಬೇಕು ಮತ್ತು ಯಾವ ಸುದ್ದಿಗೆ ನಂತೆರದ ಸ್ಥಾನ ಕೊಡಬೇಕು ಎಂಬುದನ್ನು ಆತನೇ ನಿರ್ಧರಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಲು ಇಚ್ಛಿಸುವವರು ಭಾಷೆಯ ಮೇಲೆ ಹಿಡಿತ, ಪ್ರಚಲಿತ ವಿದ್ಯಮಾನಗಳ ಕುರಿತ ಮಾಹಿತಿ, ಸಾಮಾನ್ಯ ಜ್ಞಾನ ಹಾಗೂ ಭಾಷಾಂತರ ಕೌಶಲ್ಯವನ್ನು ಹೊಂದಿರಬೇಕು. ಇತರರನ್ನು ಅನುಕರಣೆ ಮಾಡುವಲ್ಲಿ ಪ್ರಯತ್ನಿಸುವ ಬದಲು ಸ್ವಂತಿಕೆಯಿಂದ ಕಾರ್ಯ ನಿರ್ವಹಿಸಬೇಕು. ಉತ್ತಮ ಶಬ್ಧ ಭಂಡಾರದ ಜೊತೆಗೆ ಜನಸಾಮಾನ್ಯರಿಗೂ ಅರ್ಥವಾಗಬಲ್ಲಂತಹ ಸರಳ ಭಾಷಾಜ್ಞಾನ ಅಗತ್ಯ ಎಂದು ಅಭಿಪ್ರಾಯ ಪಟ್ಟರು.

ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ. ಜಿ.ಪಿ. ಶಿವರಾಂ, ಗೌರವ ಪ್ರಾಧ್ಯಾಪಕ ಸಂದೀಪ್ ಮತ್ತಿತರರು ಹಾಜರಿದ್ದರು.
ಇದರೊಂದಿಗೆ ಮಾಮ್-ಎಂಸಿಜೆ ಉಪನ್ಯಾಸ ಸರಣಿ ಕೊನೆಗೊಂಡಿದೆ. ಈ ಹಿಂದೆ ಬಾಲಕೃಷ್ಣ ಹೊಳ್ಳ, ನವೀನ್ ಅಮ್ಮೆಂಬಳ ಹಾಗೂ ಫ್ಲೋರಿನ್ ರೋಚ್ ಮಾಮ್ ಕಡೆಯಿಂದ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲೊಂಡು ವಿವಿಧ ವಿಷಯಗಳ ಕುರಿತು ಎಂಸಿಜೆ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದ್ದಾರೆ.
REPORT: ಮೇಘಲಕ್ಷ್ಮೀ, ಎಂಸಿಜೆ ವಿದ್ಯಾರ್ಥಿನಿ.

No comments:

Post a Comment