Saturday, 23 September 2017

ಎಲ್ಲ ಕಿರಿಯ ಸ್ನೇಹಿತರಿಗೆ ನಮಸ್ಕಾರಗಳು...

ಈ ಗ್ರೂಪು ಹುಟ್ಟು ಹಾಕಿ ವಾರ ಕಳೆಯುತ್ತಾ ಬಂದರು ನಿಮ್ಮ ಜೊತೆ ವಿಸ್ತೃತವಾಗಿ ಮಾತನಾಡಲು ಆಗಿಲ್ಲ.

ನಿಮಗೆಲ್ಲ ತಿಳಿದ ಹಾಗೆ ನಮ್ಮ ಹಳೆ ವಿದ್ಯಾರ್ಥಿ ಸಂಘ ಮಾಮ್ (ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ) ಶುರುವಾಗಿದ್ದು 2014ರಲ್ಲಿ. ಎಂಸಿಜೆಯಲ್ಲಿ ಕಳೆದ ಹಳೆ ವಿದ್ಯಾರ್ಥಿಗಳ ಸಂಘಟನೆ. ಎಂಸಿಜೆ ಮುಗಿಸಿ ಹೊರ ಬಂದವರು ಸಹಜವಾಗಿ ನಮ್ಮ ಸಂಘಟನೆಯ ಸದಸ್ಯರಾಗಿರುತ್ತೀರಿ. ಹಾಗಾಗಿ ನಮ್ಮ ಬಳಗಕ್ಕೆ ನಿಮ್ಮನ್ನು ಸೇರಿಸುವ ಪೂರ್ವಭಾವಿಯಾಗಿ ನಿಮ್ಮ ಬ್ಯಾಚಿನ ಪ್ರತ್ಯೇಕ ಗ್ರೂಪು ಮಾಡಲಾಗಿದೆ. ಕೆಲವು ದಿನ ಬಿಟ್ಟು ನಿಮ್ಮನ್ನೆಲ್ಲ ನಮ್ಮ ಪ್ರಧಾನ ಗ್ರೂಪು (ಎಂಸಿಜೆ ಆಕ್ಟಿವ್) ಇದೆ, ಅದಕ್ಕೆ ಸೇರಿಸಲಾಗುತ್ತದೆ. ಅದರಲ್ಲಿ ಎಂಸಿಜೆ ಮೊದಲ ಬ್ಯಾಚಿನಿಂದ ತೊಡಗಿ ಇತ್ತೀಚಿನ ವರೆಗಿನ ನೂರಕ್ಕೂ ಹೆಚ್ಚು ಮಂದಿ ವಿವಿಧ ಮಾಧ್ಯಮ ರಂಗಗಳಲ್ಲಿ ಕೆಲಸ ಮಾಡುವ ಹಿರಿಯ, ಕಿರಿಯ ಸ್ನೇಹಿತರಿದ್ದಾರೆ.

ಇದೊಂದು ಹತ್ತರಲ್ಲಿ ಹನ್ನೊಂದು ಗ್ರೂಪು ಎಂಬ ಭಾವನೆ ಖಂಡಿತಾ ಬೇಡ. ನಮ್ಮ ಹಳೆ ವಿದ್ಯಾರ್ಥಿ ಚಟುವಟಿಕೆಗಳ ಬಗ್ಗೆ, ಉದ್ಯೋಗಾವಕಾಶದ ಬಗ್ಗೆ, ಮಾಧ್ಯಮ ಸಂಬಂಧಿ ಬೆಳವಣಿಗೆಗಳ ಬಗ್ಗೆ ನಾವಿಲ್ಲಿ ಚರ್ಚಿಸೋಣ. ನೀವೂ ಅಷ್ಟೇ ನಿಮಗೆ ಬಂದಿದ್ದು, ಹೇಳಬೇಕನಿಸಿದ್ದು ಇಲ್ಲಿ ಹಂಚಿಕೊಳ್ಳಬಹುದು. ಆದರೆ, ಯಾವುದೇ ಅನಗತ್ಯ, ಅಧಿಕಪ್ರಸಂಗದ ಅನಪೇಕ್ಷಿತ ಪೋಸ್ಟುಗಳಿಗೆ ಅವಕಾಶವಿಲ್ಲ. ಮಾಮ್ ಗೆ ಯಾವುದೇ ರಾಜಕೀಯ ಪಕ್ಷ, ಜಾತಿ, ಸಂಘಟನೆ, ಸಿದ್ಧಾಂತಗಳ ಬಗ್ಗೆ ಪ್ರತ್ಯೇಕ ಒಲವಿಲ್ಲ. ಹಾಗಾಗಿ ವೈಯಕ್ತಿಕ ನಿಂದನೆ, ಸಿದ್ಧಾಂತಗಳ ಪ್ರಚಾರಗಳಿಗೆ ಇದು ವೇದಿಕೆಯಲ್ಲ ಎಂಬುದನ್ನು ಸ್ಪಷ್ಟವಾಗಿ ನಿಮ್ಮ ಗಮನಕ್ಕೆ ತರುತ್ತಿದ್ದೇನೆ.


ಹಾಗಾದರೆ ನಿಮಗೆ ಮಾಮ್ ನಿಂದ ಏನು ಪ್ರಯೋಜನ?

ನಿಮ್ಮಲ್ಲಿ ಕೆಲವು ಮಂದಿ ಇನ್ನೂ ಕೆಲಸವಾಗಿಲ್ಲ ಎಂದು ತಿಳಿಸಿದ್ದೀರಿ. ಕೆಲಸ ಸಿಗದ ಯಾರೂ ನಿರಾಶರಾಗಬೇಡಿ. ಎಂಸಿಜೆ ಮುಗಿಸಿದ ಪ್ರತಿಯೊಬ್ಬರೂ ಇಂತಹ ಒಂದು ಹಂತ ದಾಟಿ ಬಂದಿರುತ್ತಾರೆ. ಹಾಗಂತ ಇವತ್ತು ಯಾರೂ ನಿರುದ್ಯೋಗಿಗಳಾಗಿ (ಬಹುತೇಕ ಶೇ.99 ಮಂದಿ) ಮನೆಯಲ್ಲಿಲ್ಲ. ಕೆಲಸ ಪಡೆದುಕೊಂಡಿದ್ದಾರೆ. ತುಸು ಕಾಯಬೇಕಾಗುತ್ತದಷ್ಟೆ. ಮಾಮ್ ಮೂಲಕ ನಮಗೆ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಸ್ನೇಹಿತರ ಸಂಪರ್ಕ ಇರುವ ಕಾರಣ, ಉದ್ಯೋಗಾವಕಾಶಗಳ ಬಗ್ಗೆ ತಿಳಿದುಬಂದಲ್ಲಿ ತಕ್ಷಣ ನಿಮ್ಮ ಗಮನಕ್ಕೆ ಅದನ್ನು ನಾವು ಈ ಗ್ರೂಪಿನಲ್ಲಿ ತಿಳಿಸುತ್ತೇವೆ. ನೀವು ಅದರ ಫಾಲೋ ಅಪ್ ಮಾಡಬೇಕು.

ಎರಡನೆಯದಾಗಿ, ನೀವೆಲ್ಲಾದರೂ ಉದ್ಯೋಗಕ್ಕೆ ಅಪ್ಲೈ ಮಾಡಿದ್ದರೆ, ಅಲ್ಲಿ ನಿಮಗೆ ನಮ್ಮ ಕಡೆಯಿಂದ ಶಿಫಾರಸ್ ಬೇಕಾಗಿದ್ದರೆ, ಖಂಡಿತಾ ನಮ್ಮ ಪರಿಚಯದ ಹಿರಿಯ ಸ್ನೇಹಿತರಿದ್ದರೆ ನಿಮ್ಮ ಕುರಿತು ನಾವು ಶಿಫಾರಸ್ ಮಾಡಬಹುದು. ಆದರೆ ನೀವು ಆ ಕೆಲಸಕ್ಕೆ ಯೋಗ್ಯರಾಗಿದ್ದರೆ ಮಾತ್ರ. ಪತ್ರಿಕೋದ್ಯಮದಲ್ಲಿ ಕೇವಲ ಶಿಫಾರಸ್ ಹಿಡಿದು ಕೆಲಸ ಪಡೆಯಬಹುದು, ಆದರೆ, ಉಳಿಸಿಕೊಳ್ಳಲು ಆಗುವುದಿಲ್ಲ. ಆದ್ದರಿಂದ ಯಾವ ಕ್ಷೇತ್ರಕ್ಕೆ ನೀವು ಫಿಟ್ ಎಂಬುದನ್ನು ತಿಳಿದುಕೊಂಡು ಅದರಲ್ಲೇ ದುಡಿಯಲು ಪ್ರಯತ್ನ ಪಡಿ. ಹಾಗೂ ಉದ್ಯೋಗಾವಕಾಶಕ್ಕೆ ಪ್ರಯತ್ನಿಸುವ ಸಂದರ್ಭ, ಸಂದರ್ಶನಕ್ಕೆ ಹೋಗುವ ಮೊದಲು ನಮ್ಮ ಗಮನಕ್ಕೆ ತಂದರೆ, ನಮ್ಮಿಂದ ಸಾಧ್ಯವಾದರೆ ಖಂಡಿತಾ ಸಹಾಯ ಮಾಡುತ್ತೇವೆ. ಹಾಗಂತ ಮಾಮ್ ನಲ್ಲಿರುವ ನಾವೂ ಸರ್ವಜ್ನರೂ, ಪರಿಪೂರ್ಣರೂ ಅಂತಲ್ಲ, ಕೆಲಸ ತೆಗೆಸಿಕೊಡುತ್ತೇವೆ ಎಂಬ ಹುಸಿ ಭರವಸೆಯನ್ನೂ ನಾವು ಕೊಡುವುದಲ್ಲ. ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲ, ಮಾರ್ಗದರ್ಶನ ಖಂಡಿತಾ ಇರುತ್ತದೆ.

ಮೂರನೆಯದಾಗಿ ಕ್ಷೇತ್ರವನ್ನು ಆರಿಸಿಕೊಳ್ಳುವಲ್ಲಿ ನಿಮಗೆ ಗೊಂದಲಗಳಿದ್ದರೆ, ನಮ್ಮ ಹಿರಿಯ ಸ್ನೇಹಿತರ ಪೈಕಿ ಯಾರನ್ನು ಸಂಪರ್ಕಿಸಿದರೂ ಅವರು ನಿಮಗೆ ಮಾರ್ಗದರ್ಶನ ನೀಡುತ್ತಾರೆ. ಡೆಸ್ಕೋ, ವರದಿಗಾರಿಕೆಯೋ, ಟಿವಿಯೋ, ವೆಬ್ ಸೈಟೋ, ಪತ್ರಿಕೆಯೋ ಹೀಗೆ... ಗೊಂದಲಗಳಿದ್ದರೆ ಅನುಭವಿ ಪತ್ರಕರ್ತರಿಂದ ನೀವು ಮಾರ್ಗದರ್ಶನ ಪಡೆಯಬಹುದು.

ನಾಲ್ಕನೆಯದಾಗಿ ಪತ್ರಿಕಾ ರಂಗ ನಿಂತ ನೀರಲ್ಲ. ಕೆಲಸಗಳನ್ನು ಬಿಡಬೇಕಾಗಿ ಬರುವುದು,ಬದಲಾಯಿಸಬೇಕಾಗಿ ಬರುವುದು ಸಾಮಾನ್ಯ. ಎಷ್ಟೋ ಸಂದರ್ಭಗಳಲ್ಲಿ ನಾವು ಕೆಲಸ ತ್ಯಜಿಸಬೇಕಾಗಿ ಬರಬಹುದು. ಅಂತಹ ಸಂದರ್ಭಗಳಲ್ಲಿ ಮತ್ತೆ ನೀವು ನಮ್ಮ ಮಾಮ್ ಹಿರಿಯ ಸದಸ್ಯರ ನೆರವಿನಿಂದ ಬೇರೆಡೆ ಕೆಲಸಕ್ಕೆ ಪ್ರಯತ್ನ ಮಾಡಬಹುದು. ಯಾಕೆಂದರೆ ಕರ್ನಾಟಕದ ಪ್ರಮುಖ ಮಾಧ್ಯಮ ಸಂಸ್ಥೆಗಳ ಪ್ರಮುಖ ಹುದ್ದೆಗಳಲ್ಲಿ ಮಾಮ್ ಸದಸ್ಯರೂ ಇದ್ದಾರೆ. ನೀವು ಯೋಗ್ಯ ಅಭ್ಯರ್ಥಿಯಾಗಿದ್ದು, ಅವಕಾಶ ವಂಚಿತರಾಗಿದ್ದರೆ, ಸಮರ್ಥರಾಗಿದ್ದರೆ ಖಂಡಿತಾ ಸಹಾಯ ಮಾಡುತ್ತಾರೆ. ಅಂತಹ ಅವಕಾಶಗಳನ್ನೂ ಬಳಸಬಹುದು.

ಐದನೆಯದಾಗಿ ಎಂಸಿಜೆ ಮುಗಿದಲ್ಲಿಗೆ ವಿದ್ಯಾರ್ಥಿ ಜೀವನ ಮುಗಿಯಿತು. ಅಲ್ವ... ನಾವಿನ್ನು ಹಳೆ ವಿದ್ಯಾರ್ಥಿಗಳು. ವಿದ್ಯಾರ್ಥಿ ಬದುಕಿನ ಸಂಭ್ರಮ, ಜವಾಬ್ದಾರಿರಹಿತ ಬದುಕು ಇನ್ನಿಲ್ಲ. ಅವರವರ ದಾರಿ ಅರರಿಗೆ ಎಂಬಂಥ ಪರಿಸ್ಥಿತಿ. ಹೀಗಿರುವಾಗ ಮತ್ತೆಯೂ ನಾವು ಸಂಘಟನೆಯ ಮೂಲಕ ಆ ಬದುಕನ್ನು ಉಳಿಸಿಕೊಂಡರೆ ಪರಸ್ಪರ ವಿಚಾರ ವಿನಿಮಯಕ್ಕೆ, ಆಗಾಗ ಕಲೆಯುವುದಕ್ಕೆ, ಸಂತೋಷ, ದುಖವನ್ನು ಹೇಳಿಕೊಳ್ಳುವುದಕ್ಕೆ ಅನುಕೂಲವಾಗುತ್ತದೆ. ಮೀಟಿಂಗುಗಳ ಮೂಲಕ, ಪ್ರವಾಸಗಳ ಮೂಲಕ, ಗೆಟ್ ಟುಗೆದರ್ ಗಳ ಮೂಲಕ ನಾವು ಪರಸ್ಪರ ಸಂಪರ್ಕ ಹೊಂದಿರಬಹುದು. ಆ ಮೂಲಕ ಸಹಪಾಠಿಗಳೆಂಬ ಖುಷಿಯನ್ನು ಕಾಯ್ದಿಟ್ಟುಕೊಳ್ಳಬಹುದು.

ಆರನೆಯದಾಗಿ ನೀವು ಇನ್ನು ವೃತ್ತಿಪರರಾಗಲಿದ್ದೀರಿ. ನಿಮ್ಮಲ್ಲೂ ತುಂಬ ಮಂದಿ ಆಯಕಟ್ಟಿನ ಹುದ್ದೆಗಳನ್ನು ಅಲಂಕರಿಸಲಿದ್ದೀರಿ. ವರ್ಷಗಳು ಉರುಳಿದ ಹಾಗೆ ನೀವೂ ದೊಡ್ಡ ಪತ್ರಕರ್ತರಾಗುತ್ತೀರಿ. ಆಗಲೂ ನೀವು ಮಾಮ್ ಜೊತೆಗಿರಬೇಕು. ನಮ್ಮ ನಂತರ ಬರುವ ಕಿರಿಯ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು. ಅವರಿಗೂ ಕೆಲಸ ಬೇಕಾದಾಗ ಸಹಾಯ ಮಾಡಬೇಕು... ಆ ಮೂಲಕ ನಮ್ಮ ಸಂಸ್ಥೆಯ ಚಟುವಟಿಕೆಗಳು ನಿರಂತರ ಸಾಗಬೇಕು. ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು. ಸಾಧ್ಯವಾದರೆ, ನೀವೆಲ್ಲರೂ ಅಕ್ಟೋಬರ್ 14ರಂದು ಮಂಗಳೂರಿನಲ್ಲಿ ನಡೆಯುವ ನಮ್ಮ ವಾರ್ಷಿಕ ಮಹಾಸಭೆಗೆ ಬಂದು ಪ್ರಾತನಿಧಿಕ ಶುಲ್ಕ ಪಾವತಿಸಿ ಸದಸ್ಯರಾಗಿ (ಇದು ಚಂದಾ ಎತ್ತುವ ವ್ಯವಹಾರವೆಂದು ತಿಳಿದುಕೊಳ್ಳಬೇಡಿ, ಸದಸ್ಯರಾಗುವು ಅಧಿಕೃತ ಕ್ರಿಯೆ ಅಷ್ಟೆ). ಅಲ್ಲಿ ನಮ್ಮ ಚಟುವಟಿಕೆಗಳನ್ನು ಚರ್ಚಿಸೋಣ. ಸಭೆಯ ವಿವರ ನಿಮಗೆ ಮೇಲ್ ಮಾಡಲಾಗಿದೆ.

ಕೆಲಸ ಸಿಕ್ಕದವರು ಯಾರೂ ಹತಾಶರಾಗಬೇಡಿ. ಸ್ವಲ್ಪ ದಿನ ತಾಳ್ಮೆಯಿಂದಿರಿ, ಖಂಡಿತಾ ಸಿಗುತ್ತದೆ. ಕೆಲಸ ಸೃಷ್ಟಿಯಾಗುತ್ತಲೇ ಇರುತ್ತದೆ, ನಮಗೆ ಸೂಕ್ತ, ಹೊಂದುವ ಕೆಲಸ ಸಿಗುವ ತನಕ ಪ್ರಯತ್ನ ಬಿಡಬಾರದು. ಇನ್ನೊಂದು ಅಂಶ, ಈ ನಡುವಿನ ಅವಧಿಯಲ್ಲಿ ಖಿನ್ನರಾಗಿ ಸುಮ್ಮನೆ ಕೂರಬೇಡಿ. ಏನಾದರೂ ಬರೆಯುತ್ತಲೇ ಇರಿ. ನಿಮ್ಮ ಬೈಲೈನ್ ಗಳ ಸಂಖ್ಯೆ ಜಾಸ್ತಿಯಾಗಲಿ. ಬರೆದಷ್ಟೂ ನೀವು ಪ್ರೌಢರಾಗುತ್ತೀರಿ.
ಶುಭವಾಗಲಿ....


-ಕೆಎಂ, ಕಾರ್ಯದರ್ಶಿ, ಮಾಮ್ (ಗ್ರೂಪ್ ಸಹ ಅಡ್ಮಿನ್).

No comments:

Post a Comment