ಮಾಮ್ ಕಾರ್ಯಕಾರಿ ಸಮಿತಿ ಪರವಾಗಿ ನಾನು 2017-19ನೇ ಸಾಲಿನ ಮಾಮ್ ವಾರ್ಷಿಕ ಚಟುವಟಿಕೆಗಳ ವರದಿಯನ್ನು ನಿಮ್ಮ ಮುಂದಿಡಲು ಹರ್ಷ ವ್ಯಕ್ತಪಡಿಸುತ್ತೇನೆ. ಕಳೆದ ಸಾಲಿನ ಆಗುಹೋಗುಗಳ ಮೇಲೆ ಕಣ್ಣಾಡಿಸುವ ಮೊದಲು ಮಾಮ್ ಹುಟ್ಟಿಕೊಂಡ ಕುರಿತು ಸಂಕ್ಷಿಪ್ತ ಮಾಹಿತಿ ನೀಡಲು ಇಚ್ಚಿಸುತ್ತೇನೆ. ಮಂಗಳೂರು ವಿ.ವಿ.ಯ ಎಂಸಿಜೆ ವಿಭಾಗಕ್ಕೆ 25 ವರ್ಷ ಪೂರ್ತಿಗೊಂಡ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ವೃತ್ತಿನಿರತ ಕೆಲವು ಮಂದಿ ಹಳೆ ವಿದ್ಯಾರ್ಥಿಗಳು ಸೇರಿಕೊಂಡು ಮಂಗಳೂರು ವಿ.ವಿ.ಯಲ್ಲಿ 2014ರ ಡಿಸೆಂಬರ್ 20ರಂದು ನಡೆಸಿದ ಎಂಸಿಜೆ 25 ಸಮ್ಮಿಲನದ ಸಂದರ್ಭ ಮಾಮ್ ಸಂಘಟನೆಯನ್ನು ಸ್ಥಾಪಿಸಲಾಯಿತು. ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ ಅಥವಾ ಮಾಮ್ ಎಂದು ಸಂಸ್ಥೆಗೆ ಹೆಸರಿಡಲಾಯಿತು. ಸಂಘಟನೆಗೆ ಹಳೆ ವಿದ್ಯಾರ್ಥಿಗಳ ಕಡೆಯಿಂದ ಬಂದ ಅಭೂತಪೂರ್ವ ಪ್ರತಿಕ್ರಿಯೆ ಹಿನ್ನೆಲೆಯಲ್ಲಿ ಸಂಘಟನೆಯ ಚಟುವಟಿಕೆಗಳನ್ನು ಕ್ರಮಬದ್ಧವಾಗಿ ನಡೆಸಲು ಮಂಗಳೂರು ಕೇಂದ್ರವಾಗಿಟ್ಟು ಒಂದು ಕಾರ್ಯಕಾರಿ ಸಮಿತಿಯನ್ನು ರಚಿಸಿ ಚಟುವಟಿಕೆಗಳನ್ನು ಆರಂಭಿಸಲಾಯಿತು. ಸದ್ಯ ನಮ್ಮಲ್ಲಿ ಆಜೀವ ಸದಸ್ಯರಾಗಿ ಅಧಿಕೃತವಾಗಿ ಸದಸ್ಯತ್ವ ಶುಲ್ಕ ಪಾವತಿಸಿದ 37 ಮಂದಿ ಸದಸ್ಯರಿದ್ದಾರೆ. ನಾವು ಮಾಮ್ ಆಕ್ಟಿವ್, ಮಾಮ್ ಸೈಲೆಂಟ್, ಮಾಮ್ ಬೆಂಗಳೂರು ಚಾಪ್ಟರ್ ಹೆಸರಿನ ಮೂರು ಸಕ್ರಿಯ ವಾಟ್ಸಪ್ ಗ್ರೂಪುಗಳನ್ನು ಹೊಂದಿದ್ದೇವೆ. ಇದರ ಜೊತೆಗೆ ಮಾಮ್ ವರ್ಕಿಂಗ್ ಕಮಿಟಿ ಸದಸ್ಯರಿಗಾಗಿ ಮಾಮ್ ವರ್ಕಿಂಗ್ ಕಮಿಟಿ ಹಾಗೂ ಅಂತಿಮ ಸೆಮಿಸ್ಟರಿನಲ್ಲಿರುವ ವಿದ್ಯಾರ್ಥಿಗಳ ಜೊತೆಗಿನ ಸಂಪರ್ಕಕ್ಕಾಗಿ ಪ್ರತ್ಯೇಕ ವಾಟ್ಸಪ್ ಗ್ರೂಪುಗಳನ್ನು ಹೊಂದಿದ್ದೇವೆ. ಮಾಮ್ ಆಕ್ಟಿವಿನಲ್ಲಿ 137 ಹಾಗೂ ಮಾಮ್ ಸೈಲೆಂಟ್ ಗ್ರೂಪಿನಲ್ಲಿ 41, ಬೆಂಗಳೂರು ಚಾಪ್ಟರ್ ಗ್ರೂಪಿನಲ್ಲಿ 43 ಸೇರಿದಂತೆ ಸುಮಾರು 150ಕ್ಕೂ ಹೆಚ್ಚು ಮಂದಿ ಎಂಸಿಜೆ ಹಳೆ ವಿದ್ಯಾರ್ಥಿಗಳ ಸಂಪರ್ಕದಲ್ಲಿ ನಾವಿದ್ದೇವೆ. ನಮ್ಮದೆ ಆದ ಸಕ್ರಿಯಾ ಬ್ಲಾಗ್, ವೆಬ್ ಸೈಟ್, ಬ್ಯಾಂಕ್ ಖಾತೆಗಳನ್ನು ನಾವು ಹೊಂದಿದ್ದೇವೆ. ನಮ್ಮ ಸಂಘಟನೆ ನೋಂದಣಿಯಾಗಿದೆ.
----
ಕಳೆದ ವಾರ್ಷಿಕ ಮಹಾಸಭೆ:
(ಮಾಮ್)ನ 2017ನೇ ಸಾಲಿನ ವಾರ್ಷಿಕ ಮಹಾಸಭೆ (ಮೂರನೇ ಎಜಿಎಂ) ಶನಿವಾರ
(14.10.2017)ಮಂಗಳೂರು ಬಿಜೈ ಭಾರತೀನಗರದ ಆಡ್ಐಡಿಯಾ ಕಚೇರಿಯಲ್ಲಿ ನಡೆಯಿತು.
ಸಂಘದ ಕಾರ್ಯದರ್ಶಿ ವೇಣು ವಿನೋದ್ ಕೆ.ಎಸ್. ಅವರು ಸ್ವಾಗತಿಸಿದರು. ನಿರ್ಗಮನ ಪ್ರಧಾನ ಕಾರ್ಯದರ್ಶಿ ಕೃಷ್ಣಮೋಹನ ಕಳೆದ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ನಿರ್ಗಮನ ಕೋಶಾಧಿಕಾರಿ ಸ್ಮಿತಾ ಶೆಣೈ ಅವರು 2015-16ನೇ ಸಾಲಿನ ಪರಿಶೋಧನೆಗೊಳಗಾದ ಲೆಕ್ಕಪತ್ರ ಮಂಡಿಸಿದರು.
ಸಂಘದಲ್ಲಿರುವ ಎರಡು ನಿರಖು ಠೇವಣಿಯ ಹೊರತಾಗಿ ಮಹಾಸಭೆಯ ದಿನದ ವರೆಗೆ ರು.12012 ಉಳಿತಾಯ ಖಾತೆಯಲ್ಲಿರುವ ಮಾಹಿತಿ ನೀಡಲಾಯಿತು.
ಬಳಿಕ ಸಂಘದ ನಿರ್ಗಮನ ಅಧ್ಯಕ್ಷೆ ಫ್ಲೋರಿನ್ ರೋಚ್ ಅವರು ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು.
ನಂತರ 2017 19ನೇ ಅವಧಿಯ ಮುಂದಿನ ಎರಡು ವರ್ಷಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷರಾಗಿ ಉದಯವಾಣಿ ಮಣಿಪಾಲ ಆವೃತ್ತಿ ಸಂಪಾದಕ ಎ.ವಿ.ಬಾಲಕೃಷ್ಣ ಹೊಳ್ಳ ಅವಿರೋಧವಾಗಿ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಹೊಸದಿಗಂತ ಪತ್ರಿಕೆಯ ವರದಿಗಾರ ಸುರೇಶ್ ಡಿ.ಪಳ್ಳಿ ಹಾಗೂ ಕೋಶಾಧಿಕಾರಿಯಾಗಿ ವಿಜಯಕರ್ನಾಟಕ ಪತ್ರಿಕೆಯ ಮುಖ್ಯ ಕಾಪಿ ಎಡಿಟರ್ ಯೋಗೀಶ್ ಹೊಳ್ಳ ಆಯ್ಕೆಯಾದರು.
ಬಳಿಕ ನೂತನ ಅಧ್ಯಕ್ಷ ಬಾಲಕೃಷ್ಣ ಹೊಳ್ಳರ ಅಧ್ಯಕ್ಷತೆಯಲ್ಲಿ ಮುಂದಿನ ಸಾಲಿ ಕಾರ್ಯಚಟುವಟಿಕೆಗಳ ಕುರಿತು ಚರ್ಚೆಗಳು ನಡೆದವು. ಮಾಮ್ ಗೌರವಾಧ್ಯಕ್ಷ ವೇಣು ಶರ್ಮ ವಂದಿಸಿದರು. ಕಳೆದ ಜೂನ್ ನಲ್ಲಿ ವಿವಾಹ ಬಂಧನಕ್ಕೊಳಗಾದ ನೂತನ ಪ್ರಧಾನ ಕಾರ್ಯದರ್ಶಿ ಸುರೇಶ್ ಪಳ್ಳಿ ಅವರನ್ನು ಸಭೆಯಲ್ಲಿ ಗೌರವಿಸಲಾಯಿತು. ಸಭೆಯ ಬಳಿಕ ಕದ್ರಿಯ ಡಿಂಕಿ ಡೈನ್ ನಲ್ಲಿ ಭೋಜನ ಮಾಡಲಾಯಿತು.
ಸಭೆಯಲ್ಲಿ 2017ರಲ್ಲಿ ವ್ಯಾಸಂಗ ಮುಗಿಸಿದವರ ಸಹಿತ ಒಟ್ಟು 30 ಮಂದಿ ಹಳೆ ವಿದ್ಯಾರ್ಥಿಗಳು ಪಾಲ್ಗೊಂಡರು.
ಮಹಾಸಭೆಯಲ್ಲಿ ಓರ್ವರು ಆಜೀವ ಸದಸ್ಯರಾಗಿ ಹಾಗೂ ಇತರ 10 ಮಂದಿ ವಾರ್ಷಿಕ ಸದಸ್ಯರಾಗಿ ಶುಲ್ಕ ಪಾವತಿಸಿ ಸೇರ್ಪಡೆಗೊಂಡರು.
---
ಮಾಮ್ ವಿಚಾರಸಂಕಿರಣ
ದಿನಾಂಕ 21.11.2017ರಂದು
ಮಂಗಳೂರು ವಿಶ್ವವಿದ್ಯಾಲಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ ಹಳೆ ವಿದ್ಯಾರ್ಥಿ ಸಂಘ (ಮಾಮ್) ಮಂಗಳೂರು ಹಾಗೂ ಸಂದೇಶ ಪ್ರತಿಷ್ಠಾನ ಸಹಯೋಗದಲ್ಲಿ ಮಂಗಳೂರು ನಗರದ ನಂತೂರು ಸಂದೇಶ ಪ್ರತಿಷ್ಠಾನದಲ್ಲಿ ‘ಮಾಧ್ಯಮಗಳಿಗೆ ಬೇಕೇ ಲಗಾಮು’ ಎಂಬ ವಿಷಯದ ಕುರಿತ ಸಂವಾದ ಗೋಷ್ಠಿ ನಡೆಯಿತು. ಮಂಗಳೂರು ವಿವಿ ಎಂಸಿಜೆ ವಿಭಾಗ ಪ್ರಾಧ್ಯಾಪಕ ಪ್ರೊ.ಡಾ. ಜಿ.ಪಿ.ಶಿವರಾಮ್ ಸಂವಾದ ಉದ್ಘಾಟಿಸಿದರು. ಸಂದೇಶ ಪ್ರತಿಷ್ಠಾನದ ನಿರ್ದೇಶಕ ಫಾ.ವಿಕ್ಟರ್ ವಿಜಯ್ ಲೋಬೊ, ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ, ಮಾಧ್ಯಮ ಚಿಂತಕ ರಿಚರ್ಡ್ ಡಿಸೋಜ, ವಕೀಲ ಸಂತೋಷ್ ಪೀಟರ್ ಡಿಸೋಜ, ಪರಿಸರ ಹೋರಾಟಗಾರ ದಿನೇಶ ಹೊಳ್ಳ ಮಾತನಾಡಿದರು. ಮಾಮ್ ಅಧ್ಯಕ್ಷ ಬಾಲಕೃಷ್ಣ ಹೊಳ್ಳ ಸಮಾರೋಪ ಭಾಷಣ ಮಾಡಿದರು. ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ನಡೆಯಿತು. ಮಾಮ್ ಉಪಾಧ್ಯಕ್ಷ ಡಾ.
ರೊನಾಲ್ಡ್ ಅನಿಲ್ ಫರ್ನಾಂಡಿಸ್, ಗೌರವಾಧ್ಯಕ್ಷ ವೇಣು ಶರ್ಮ ಸಂವಾದ ನಿರ್ವಹಿಸಿದರು. ಹಿರಿಯ ಪತ್ರಕರ್ತ ಚಿದಂಬರ ಬೈಕಂಪಾಡಿ ಅವರನ್ನು ಈ ಸಂದರ್ಭ ಗೌರವಿಸಲಾಯಿತು. ಕಾರ್ಯದರ್ಶಿ ವೇಣುವಿನೋದ್ ಕೆ.ಎಸ್.ಸ್ವಾಗತಿಸಿದರು. ಸ್ಮಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಸಹೋದರ ವಿಕ್ಟರ್ ಕ್ರಾಸ್ತಾ ವಂದಿಸಿದರು.
----
ವಿದ್ಯಾರ್ಥಿಗಳಿಗೆ ವಿಚಾರಸಂಕಿರಣ
ಮಂಗಳಾ ಸೇವಾ ಸಮಿತಿ ಟ್ರಸ್ಟ್ ವತಿಯಿಂದ ಡಿ.16, 2017 ಶನಿವಾರ ಕುತ್ತಾರುಪದವು ಬಾಲಸಂರಕ್ಷಣಾ ಕೇಂದ್ರದಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಾಗಿ ಭಾರತೀಯ ಪ್ರಜಾತಂತ್ರದ ಚತುರ್ಥ ಸ್ತಂಭ ಮಾಧ್ಯಮ ಒಂದು ವಿಚಾರಸಂಕಿರಣ ನಡೆಯಿತು. ಸಮಾರಂಭದ ಅಪರಾಹ್ನದ ಮುಖ್ಯ ಸಂವಾದ ಕಾರ್ಯಕ್ರಮಕ್ಕೆ ಮಾಮ್ ಸಹಯೋಗ ನೀಡಿತ್ತು. ಬೆಳಗ್ಗೆ ನಡೆದ ದ್ವಿತೀಯ ಗೋಷ್ಠಿ ಮಾಧ್ಯಮ ಹಾಗೂ ಸಾಮಾಜಿಕ ಬದ್ಧತೆ ವಿಚಾರದಲ್ಲಿ ಮಾಮ್ ಪ್ರತಿನಿಧಿ, ಸುವರ್ಣ ನ್ಯೂಸ್ ವಾಹಿನಿಯ ವಿಶೇಷ ಪ್ರತಿನಿಧಿ ವಿಜಯಲಕ್ಷ್ಮೀ ಶಿಬರೂರು ಪಾಲ್ಗೊಂಡು ವಿಚಾರ ಮಂಡಿಸಿದರು.
ಅಪರಾಹ್ನ ನಡೆದ ಮುಕ್ತ ಸಂವಾದದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಜಾವಾಣಿ ಮಂಗಳೂರು ಆವೃತ್ತಿ ಮುಖ್ಯಸ್ಥ ಶ್ರೀ ಬಾಲಕೃಷ್ಣ ಎಂ.ಜಿ.,
ವಿಜಯಕರ್ನಾಟಕ ಮಂಗಳೂರು ಆವೃತ್ತಿ ಮುಖ್ಯಸ್ಥ ಯು.ಕೆ.ಕುಮಾರನಾಥ, ವಿಜಯಕರ್ನಾಟಕದ ಮಂಗಳೂರಿನ ಚೀಫ್ ಕಾಪಿ ಎಡಿಟರ್ ಬಿ.ರವೀಂದ್ರ ಶೆಟ್ಟಿ, ಸುರ್ವಣ ನ್ಯೂಸ್ ನ ವಿಶೇಷ ಪ್ರತಿನಿಧಿ ವಿಜಯಲಕ್ಷ್ಮೀ ಶಿಬರೂರು ಪಾಲ್ಗೊಂಡರು. ಮಾಮ್ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಕೃಷ್ಣಮೋಹನ ಟಿ.ಪ್ರಾಸ್ತಾವಿಕ ಮಾತನಾಡಿ, ಸಂವಾದದಲ್ಲಿ ಪಾಲ್ಗೊಂಡರು. ಮಾಮ್ ಗೌರವಾಧ್ಯಕ್ಷ ವೇಣು ಶರ್ಮ ಸಂವಾದ ನಿರ್ವಹಿಸಿದರು.
ವಿವಿಧ ಕಾಲೇಜುಗಳ ಪತ್ರಿಕೋದ್ಯಮ ವಿದ್ಯಾರ್ಥಿಗಳು, ಉಪನ್ಯಾಸಕರು ಪಾಲ್ಗೊಂಡಿದ್ದರು. ಮಂಗಳಾ ಸೇವಾ ಸಮಿತಿ ಟ್ರಸ್ಟ್ ಸಂಚಾಲಕ ಡಾ.ಪಿ.ಅನಂತಕೃಷ್ಣ ಭಟ್ ಸಂಪನ್ಮೂಲ ವ್ಯಕ್ತಿಗಳನ್ನು ಗೌರವಿಸಿದರು. ಮಾಮ್ ಕಾರ್ಯಕ್ರಮ ಸಂಯೋಜಕ ಕೃಷ್ಣ ಕಿಶೋರ್ ವೈ., ವಸಂತ ಕೊಣಾಜೆ, ಮಹಾಂತೇಶ ಹಿರೇಮಠ್, ಸ್ಮಿತಾ ಶೆಣೈ ಮತ್ತಿತರರು ಪಾಲ್ಗೊಂಡರು.
--
ಮಂಗಳೂರಿನ ಬಿಜೈ ಆಡ್ ಐಡಿಯಾ ಕಚೇರಿಯಲ್ಲಿ...ನ.10, 2018ರ ಶನಿವಾರ ಪೂರ್ವಾಹ್ನ. ಮಂಗಳೂರು ವಿ.ವಿ.ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಹಳೆ ವಿದ್ಯಾರ್ಥಿಗಳ (ಎಂಸಿಜೆ) ಸಂಘ (ಮಾಮ್) ವತಿಯಿಂದ ಪ್ರಥಮ ವರ್ಷದ ಮಾಮ್ ಇನ್ ಸ್ಪೈರ್ ಸ್ಪರ್ಧೆಯ ವಿಜೇತರಿಗೆ ಪುರಸ್ಕಾರ ಪ್ರದಾನ ಸಮಾರಂಭ
ನಡೆಯಿತು. ಸ್ನಾತಕೋತ್ತರ ವಿಭಾಗದಲ್ಲಿ ಪ್ರಶಸ್ತಿ ಪಡೆದ ಮಂಗಳೂರು ವಿ.ವಿ. ಕ್ಯಾಂಪಸ್ ನ ಮೇಘಲಕ್ಷ್ಮೀ ಮುರುವಾಳ, ಪದವಿ ವಿಭಾಗದಲ್ಲಿ ಪ್ರಥಮ ಪ್ರಶಸ್ತಿ ಪಡೆದ ಪ್ರಥಮ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಪ್ರೀತಿ ಆರ್ ಭಟ್, ಸ್ನಾತಕೋತ್ತರ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ ಆಳ್ವಾಸ್ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮೂಡುಬಿದಿರೆಇಲ್ಲಿನ ಪ್ರಕಾಶ್ ಡಿ.ರಾಂಪುರ್, ಪದವಿ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದ (ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು ಉಜಿರೆ ಇಲ್ಲಿನ ಸುವರ್ಚಲಾ ಅಂಬೇಕರ್ ಬಿ.ಎಸ್.ಇವರನ್ನು ನಗದು, ಪ್ರಶಸ್ತಿ ಫಲಕ ನೀಡಿ ಗೌರವಿಸಲಾಯಿತು.
ಮಾಮ್ ದತ್ತಿ ನಿಧಿಯಿಂದ ಪ್ರಥಮ ಸ್ಥಾನ ವಿಜೇತರಿಗೆ ತಲಾ 5 ಸಾವಿರ ಹಾಗೂ ದ್ವಿತೀಯ ಸ್ಥಾನ ವಿಜೇತರಿಗೆ ತಲಾ 2,500 ರು. ನಗದು ಪುರಸ್ಕಾರ ಹಸ್ತಾಂತರಿಸಲಾಯಿತು.
ಸ್ವರ್ಧೆಯ ತೀರ್ಪುಗಾರ, ಹಿರಿಯ ಪತ್ರಕರ್ತ ರಘುರಾಮ್ ಎಂ. , ಮಂಗಳೂರು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿದರು. ಮಾಮ್ ಗೌರವಾಧ್ಯಕ್ಷ ವೇಣು ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮಾಮ್ ಪ್ರಧಾನ ಕಾರ್ಯದರ್ಶಿ ಸುರೇಶ್ ಡಿ.ಪಳ್ಳಿ ವಂದಿಸಿದರು. ಪ್ರಶಸ್ತಿ ಸಮಿತಿ ಸಂಚಾಲಕ ಶರತ್ ಹೆಗ್ಡೆ ಕಡ್ತಲ ಪ್ರಶಸ್ತಿ ವಿಜೇತರ ವಿವರ ನೀಡಿದರು. ಸದಸ್ಯ ಕೃಷ್ಣ ಮೋಹನ ಕಾರ್ಯಕ್ರಮ ನಿರ್ವಹಿಸಿದರು.
ಸಮಾರಂಭದಲ್ಲಿ ಮಂಗಳೂರು ವಿ.ವಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಅತಿಥಿ ಉಪನ್ಯಾಸಕ ಶಶಿಧರ್ ವಿಭಾಗದ ಪರವಾಗಿ ಹಾಜರಿದ್ದರು. ಪತ್ರಿಕೋದ್ಯಮ ವಿದ್ಯಾರ್ಥಿಗಳು, ಮಾಮ್ ಸದಸ್ಯರು ಹಾಜರಿದ್ದರು. ಮಾಮ್ ಪದಾಧಿಕಾರಿಗಳಾ ವೇಣು ವಿನೋದ್ ಕೆ.ಎಸ್. ಹಾಗೂ ಕೃಷ್ಣಕಿಶೋರ್ ಸಹಕರಿಸಿದರು. ಬಳಿಕ ಸಹಭೋಜನ ಏರ್ಪಡಿಸಲಾಗಿತ್ತು. ಪ್ರಸ್ತುತ ವರ್ಷದ ಮಾಮ್ ಇನ್ ಸ್ಪೈರ್ ಅವಾರ್ಡ್ ಸ್ಪರ್ಧೆಯನ್ನು ಸಮಾರಂಭದಲ್ಲಿ ಘೋಷಿಸಲಾಯಿತು.
2014ರಲ್ಲಿ ಮಂಗಳೂರು ವಿ.ವಿ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ 25ನೇ ವರ್ಷಾಚರಣೆ ಸಂದರ್ಭ ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ಅಸ್ತಿತ್ವಕ್ಕೆ ಬಂತು. ಮಾಧ್ಯಮ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಸಹಕಾರಿಯಾಗುವ ಅನೇಕ ಚಟುವಟಿಕೆಗಳನ್ನು ಮಾಮ್ ಹಮ್ಮಿಕೊಳ್ಳುತ್ತಾ ಬಂದಿದೆ. ಮಂಗಳೂರು ವಿ.ವಿ. ವ್ಯಾಪ್ತಿಯ ಮಂಗಳಗಂಗೋತ್ರಿ ಕ್ಯಾಂಪಸ್ ಹಾಗೂ ಪದವಿ ಕಾಲೇಜುಗಳ ಪತ್ರಿಕೋದ್ಯಮ ವಿದ್ಯಾರ್ಥಿಗಳ ಸರ್ವತೋಮುಖ ಪ್ರತಿಭೆಯನ್ನು ಪರಿಗಣಿಸಿ ಮಾಮ್ ಇನ್ ಸ್ಪೈರ್ ಪ್ರಶಸ್ತಿ ಸ್ಪರ್ಧೆ ನಡೆಸಲಾಗುತ್ತಿದ್ದು. ನ.10ರಂದು ನೀಡಿರುವುದು ಈ ಸರಣಿಯ ಪ್ರಥಮ ಪ್ರಶಸ್ತಿಯಾಗಿದೆ. ಪ್ರಶಸ್ತಿ ನೀಡುವುದಕ್ಕೋಸ್ಕರ ಮಾಮ್ ಪ್ರತ್ಯೇಕ ದತ್ತಿ ನಿಧಿ ಸ್ಥಾಪಿಸಿದೆ. ವಿವಿಧ ಶಿಕ್ಷಣ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿ, ಹಿರಿಯ ಪತ್ರಕರ್ತರ ತಂಡ ವಿಜೇತರನ್ನು ಆರಿಸುತ್ತಿದೆ ಎಂದು ಮಾಮ್ ಪ್ರಕಟಣೆ ತಿಳಿಸಿದೆ.
----------------
ಮಾ ಉತ್ಸವ 2019
ಮಂಗಳೂರು ವಿ.ವಿ.ಸ್ನಾತಕೋತ್ತರ ವಿದ್ಯಾರ್ಥಿಗಳ ಹಳೆ ವಿದ್ಯಾರ್ಥಿಗಳ ಸಂಘ (ಮಂಗಳಾ ಆಲ್ಯೂಮ್ನಿ ಅಸೋಸಿಯೇಶನ್ -MAA) ಫೆ.17, 2019 ಭಾನುವಾರ ಮಂಗಳಗಂಗೋತ್ರಿಯ ಮಂಗಳಾ ಆಡಿಟೋರಿಯಂ ಅಂಗಣದಲ್ಲಿ ಆಯೋಜಿಸಿದ್ದ ಮಾ ಉತ್ಸವ 2019 ಹಲವು ಆಹ್ಲಾದಕರ ಕ್ಷಣಗಳಿಗೆ ಸಾಕ್ಷಿಯಾಯಿತು. ಸುಮಾರು 550ಕ್ಕೂ ಮಿಕ್ಕದ ಹಳೆ ವಿದ್ಯಾರ್ಥಿಗಳು ನಾನಾ ಕಡೆಗಳಿಂದ ಬಿಡುವು ಮಾಡಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮದ ಅಂದ ಹೆಚ್ಚಿಸಿದರು. ಈ ಮಾ ಸಂಗಮ ಕಾರ್ಯಕ್ರಮಕ್ಕೆ ಮಾಮ್ ಮಾಧ್ಯಮ ಸಹಯೋಗ ನೀಡಿತ್ತು. ಜೊತೆಗೆ ಮಾ ಸಂಗಮದ ಎರಡು ಕ್ರೀಡಾ ಸ್ಪರ್ಧೆಗಳಲ್ಲಿ ಮಾಮ್ ತಂಡಗಳು ಸಕ್ರಿಯವಾಗಿ ಪಾಲ್ಗೊಂಡಿದ್ದವು ಎಂದು ತಿಳಿಸಲು ಖುಷಿ ಪಡುತ್ತೇನೆ.
---
ಹಣಕಾಸು ಸ್ಥಿತಿಗತಿಗಳ ಸಂಕ್ಷಿಪ್ತ ವರದಿ
ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನಲ್ಲಿ ನಾವು ಉಳಿತಾಯ ಖಾತೆಯನ್ನು ಮಾಮ್ ಹೆಸರಿನಲ್ಲಿ ಹೊಂದಿದ್ದೇವೆ. ಮಾಮ್ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಕೋಶಾಧಿಕಾರಿಗಳು ಈ ಖಾತೆಯ ಸಂಯುಕ್ತ ಖಾತೆದಾರರಾಗಿದ್ದು, ಈ ಪೈಕಿ ಯಾವುದೇ ಇಬ್ಬರ ಸಹಿ ಮೂಲಕ ನಾವು ಚೆಕ್ ವ್ಯವಹಾರ ನಡೆಸುವ ಅಧಿಕಾರ ಹೊಂದಿದ್ದೇವೆ. ದಿನಾಂಕ 5.9.2019ರ ತನಕ ನಾವು ನಮ್ಮ ಉಳಿತಾಯ ಖಾತೆಯಲ್ಲಿ 21,518 ರು. ನಗದು ಹೊಂದಿದ್ದೇವೆ. ಜೊತೆಗೆ ನಮ್ಮಲ್ಲಿ 2,25,000 ಮೊತ್ತದ ಎರಡು ಫಿಕ್ಸೆಡ್ ಡೆಪಾಸಿಟ್ ಖಾತೆಗಳಿವೆ. 1 ಲಕ್ಷ ರು.ಮೊತ್ತದ ಶೇ.8.25 ಬಡ್ಡಿ ದರದ ಒಂದು ಫಿಕ್ಸೆಡ್ ಡೆಪಾಸಿಟ್ ನ್ನು 10.05.2021ರ ಅವಧಿಗೆ ಇರಿಸಲಾಗಿದೆ. ಈ ಎಫ್ ಡಿ ಬಡ್ಡಿಯನ್ನು ನಾವು ಮಾಮ್ ಇನ್ ಸ್ಪೈಯರ್ ಪ್ರಶಸ್ತಿಗೆ ನಗದು ಬಹುಮಾನ ನೀಡಲು ಬಳಸಲಿದ್ದೇವೆ. ಇನ್ನೊಂದು 1,25,000 ರು. ಮೊತ್ತದ ಅಲ್ಪಾವಧಿ ಎಫ್ ಡಿ 16.11.2019ರಂದು ಅವಧಿ ಕೊನೆಗೊಳ್ಳಲಿದ್ದು, ಅದನ್ನು ಮತ್ತೆ ನವೀಕರಿಸಲಿದ್ದೇವೆ. ಸದ್ಯ, ಸದಸ್ಯತ್ವ ಶುಲ್ಕ ಹೊರತುಪಡಿಸಿ ಮತ್ಯಾವುದೇ ಆದಾಯದ ಮೂಲ ಮಾಮ್ ಗೆ ಇರುವುದಿಲ್ಲ. ತಮ್ಮಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಜೀವ ಸದಸ್ಯತ್ವವನ್ನು ರು.1000 ಪಾವತಿಸುವ ಮೂಲಕ ಪಡೆದು ಆರ್ಥಿಕವಾಗಿಯೂ ನಮಗೆ ಪ್ರೋತ್ಸಾಹ ನೀಡಬೇಕೆಂದು ಕೋರುತ್ತೇನೆ.
ಉಪ ಸಂಹಾರ
ಇದರೊಂದಿಗೆ, 2017-18 ಹಾಗೂ 2018-19ನೇ ಸಾಲಿನ, ಅಂದರೆ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮುಗಿಸಿ ಹೊರಬಂದ ಎಂಸಿಜೆ ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ಸಂದರ್ಭ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಅವಕಾಶ ಕಲ್ಪಿಸಲು ಮಾಮ್ ಪ್ರತಿನಿಧಿಗಳು ಸಕಾಲದಲ್ಲಿ ನೆರವು ಒದಗಿಸಿದ್ದಾರೆ. ಬೆಂಗಳೂರಿನಲ್ಲಿರುವ ಮಾಧ್ಯಮ ಸಂಸ್ಥೆಗಳ ವಿವಿಧ ಸ್ನೇಹಿತರಿಗೆ ಈ ಸಹಕಾರಕ್ಕಾಗಿ ನಾನು ಆಭಾರಿಯಾಗಿದ್ದೇನೆ. 2015-17
ನೇ ಸಾಲಿನಲ್ಲಿ ವ್ಯಾಸಂಗ ಮುಗಿಸಿ ಹೊರ ಬಂದ ವಿದ್ಯಾರ್ಥಿಗಳಿಗಾಗಿ ಮಾಮ್ 2015-17 ಹೆಸರಿನ ವಾಟ್ಸಪ್ ಗ್ರೂಪ್ ರಚಿಸಿದ್ದು ಅವರನ್ನು ಮಾಮ್ ಬಳಗಕ್ಕೆ ಸೇರಿಸಿಕೊಳ್ಳಲಾಗಿದೆ. ಪ್ರತಿ ವರ್ಷ ಈ ಗ್ರೂಪನ್ನ ಅಪ್ಡೇಟ್ ಮಾಡಿ ಆಯಾ ವರ್ಷಗಳ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳ ಜೊತೆ ಸಂಪರ್ಕ ಇರಿಸುವ ಪ್ರಯತ್ನ ಮಾಡಲಾಗುವುದು. ಈ ಕಾರ್ಯಕ್ಕೆ ನಮಗೆ ಎಂಸಿಜೆ ವಿಭಾಗದ ಬೋಧಕ ಸಿಬ್ಬಂದಿ ಸಹಕಾರವನ್ನು ಕೋರುತ್ತೇವೆ. ಉದ್ಯೋಗಾಕವಾಶಗಳು ಹಾಗೂ ಮಾಧ್ಯಮ ರಂಗದ ಅವಕಾಶಗಳ ಕುರಿತು ನಮ್ಮನ್ನು ಸಂಪರ್ಕಿಸಿದ ಇತ್ತೀಚಿನ ಹಳೆ ವಿದ್ಯಾರ್ಥಿಗಳಿಗೆ ಮಾಮ್ ಕಡೆಯಿಂದ ಮಾಹಿತಿಗಳನ್ನು ನೀಡುತ್ತಾ ಬರಲಾಗಿದೆ. ಕೆಲವು ಹಳೆ ವಿದ್ಯಾರ್ಥಿಗಳಿಗೆ ಮಾಮ್ ಚಟುವಟಿಕೆಗಳ ಪರಿಚಯದ ಹಿನ್ನೆಲೆಯಲ್ಲೇ, ಅಲ್ಲಿ ಮಾಮ್ ಸ್ನೇಹಿತರ ಶಿಫಾರಸ್ ಮೇರೆಗೆ ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ನೇರ ನೇಮಕಾತಿ ನಡೆದಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.
--
ಇದರೊಂದಿಗೆ 2017-19ನೇ ಸಾಲಿನ ವರದಿಯನ್ನು ಇಲ್ಲಿಗೆ ಕೊನೆಗೊಳಿಸುತ್ತಿದ್ದೇನೆ.
-ವಂದನೆಗಳು...
-ಕೃಷ್ಣಮೋಹನ (ಮಾಮ್ ಪ್ರಧಾನ ಕಾರ್ಯದರ್ಶಿ ಮತ್ತು ಕೋಶಾಧಿಕಾರಿ ಪರವಾಗಿ ಸಲ್ಲಿಸಿದ ವರದಿ)