ನವೆಂಬರ್ 25ರ ಮಂಗಳವಾರ ತಡರಾತ್ರಿ 3.15ಕ್ಕೆ ದೀಪಕ್ ಅವರ ಫೋನ್ ಬಂತು. “ನಾನು ಇಲ್ಲಿಂದ ಹೊರಟೆ, ಕಾರ್ಯಪ್ಪ ಅವರನ್ನು ಪಿಕ್ ಮಾಡಿಕೊಂಡು ಬಂದು ಅಂಬೇಡ್ಕರ್ ಕಾಲೇಜು ಬಳಿ ಸಿಗ್ತೇನೆ,’’ಎಂದರು. 4.15 ಆಗುವಷ್ಟರಲ್ಲಿ ಅವರಿಂದ ಮತ್ತೆ ಫೋನ್.
“ ಎಲ್ಲಿದ್ದೀಯಾ? ನಾನು ಬಂದಿದ್ದೇನೆ,’’ ಮತ್ತೊಂದು ಐದು ನಿಮಿಷದಲ್ಲಿ ಅವರಿದ್ದಲ್ಲಿಗೆ ನಾನು ಕಾರು ತೆಗೆದುಕೊಂಡು ಹೋದೆ. ಅವರಿಬ್ಬರನ್ನು ಹತ್ತಿಸಿಕೊಂಡು ಮೈಸೂರು ರೋಡ್ ಕಡೆ ಹೋಗಲು ಶುರು ಮಾಡಿದೆ.
ಮಡಿಕೇರಿಯ ಮದೆನಾಡಿನ ವರ್ಜಿನ್ ಮೌಂಟೇನ್ಸ್ ಹೋಮ್ ಸ್ಟೇನಲ್ಲಿ ಮಾಮ್( MAAM) ಆಯೋಜಿಸಿದ್ದ
ಒಂದು ದಿನದ ಟ್ರೆಕ್ಕಿಂಗ್ ಹಾಗೂ ಸಾಮಾನ್ಯ ಸಭೆಗೆ ನಮ್ಮ ಪ್ರಯಾಣ ಇಲ್ಲಿಂದ ಆರಂಭವಾಗುತ್ತದೆ. ಬುಧವಾರ ಬೆಳಗ್ಗೆ ಆರು ಗಂಟೆಯಾಗುವಷ್ಟರಲ್ಲಿ ಮೈಸೂರು ದಾಟಿ ನಮ್ಮ ಕಾರು ಮಡಿಕೇರಿ ರಸ್ತೆ ಮೇಲಿತ್ತು. ಇದೇ ವೇಳೆ ಅತ್ತ ಮಂಗಳೂರಿನಿಂದ ಬರಬೇಕಾಗಿದ್ದ ಮಾಮ್ ಸದಸ್ಯರ ಇನ್ನೊಂದು ತಂಡ ಪ್ರಯಾಣ ಆರಂಭಿಸಿದ ವಾರ್ತೆ ಗೊತ್ತಾಯಿತು. ಹಾಗಾದರೆ ನಾವೇ ಮೊದಲು ಮಡಿಕೇರಿ ತಲುಪುತ್ತೇವೆ ಎಂದು ಮಾತಾಡಿಕೊಂಡೆವು. ಬೆಂಗಳೂರಿನಿಂದ ಹೊರಟ ತಂಡದಲ್ಲಿದ್ದದ್ದು ಇವರು, ನಾನು ಸುಖೇಶ, ಹಲೀಮತ್ ಸಾದಿಯಾ, ಹೋಮ್ ಸ್ಟೇ ಮಾಲೀಕ ಕಾರ್ಯಪ್ಪ(ಇವರೂ ಮ್ಯಾಮ್ ಸದಸ್ಯರು) ಹಾಗೂ ಸ್ಮಾಟ್ ಗೈ ದೀಪಕ್.
26ರಂದು ಬೆಳಗ್ಗೆ 8 ಗಂಟೆಗೆ ನಾವು ಮಡಿಕೇರಿಯ ಕೊಡವ ಸಮಾಜದಲ್ಲಿರುವ ಹೋಟೆಲೊಂದರಲ್ಲಿ ಬೆಳಗ್ಗಿನ ಉಪಾಹಾರಕ್ಕಾಗಿ ಕುಳಿತಿದ್ದೇವು. ಎಲ್ಲ ಮುಗಿಸಿ ಮತ್ತೆ ಹೊರಟಿತ್ತು ಮದೆನಾಡಿಗೆ ನಮ್ಮ ದಂಡು. ಮಂಗಳೂರಿನಿಂದ ಬಂದ ತಂಡ ಅಲ್ಲಿ ನಮ್ಮನ್ನು ಸಂಧಿಸಿತು. ಮಾಮ್ ಅಧ್ಯಕ್ಷೆ ಫ್ಲೋರಿನ್ ರೋಚ್, ಹಿರಿಯ ಸದಸ್ಯ ವೇಣು ಶರ್ಮಾ, ಸ್ಮಿತಾ, ಕೃಷ್ಣ ಮೋಹನ್ ತಲೆಂಗಳ,ಸುರೇಶ್ ಪಳ್ಳಿ, ಕೃಷ್ಣ ಕಿಶೋರ್ ಆ ಕಾರಿನಲ್ಲಿದ್ದರು. ಅದರ ಜತೆಗೆ ಎರಡು ದಿನದ ಖರ್ಚಿಗೆ ಬೇಕಾದ ದೀನಸಿ ಸಾಮಗ್ರಿಗಳು ಇತ್ತು. ಅಲ್ಲಿಂದ 30 ನಿಮಿಷಗಳ ಕಾಲ ಗುಡ್ಡ ಪ್ರದೇಶದ ರಸ್ತೆಯಲ್ಲಿ ನಮ್ಮ ಕಾರು ಸಾಗುತ್ತಲೇ ಇತ್ತು.
ಪರಿಚಯ, ಲಘು ಉಪಾಹಾರ:
ಹೋಮ್ ಸ್ಟೇ ತಲುಪಿದ ತಕ್ಷಣ ವೇಣು ಶರ್ಮಾ ಅವರು ಎಲ್ಲರ ಪರಿಚಯ ಮಾಡಿಕೊಟ್ಟರು, ಜತೆಗೆ ನಾವು ಹೋದ ಸ್ಥಳ ಮಹಿಮೆಯನ್ನು ಪರಿಚಯಿಸಿದರು. ಇದೇ ವೇಳೆ ನಾವಲ್ಲಿದ್ದಷ್ಟು ಹೊತ್ತು ನಮ್ಮ ಊಟೋಪಚಾರ ಮಾಡಲಿದ್ದ, ಕಂದ (ಇದು ಹೆಸರು) ಹಾಗೂ ಅವರಮ್ಮ ತಾಯಮ್ಮ ಅವರ ಪರಿಚಯವನ್ನೂ ಮಾಡಿಕೊಂಡೆವು. ತಕ್ಷಣ ಟೀ, ಕಾಫಿ, ಶರಬತ್ತು ಸರತಿ ಸಾಲಿನಲ್ಲಿ ನಾವಿದ್ದಲ್ಲಿಗೆ ಬಂತು. ಜತೆಗೆ ಒಂದಿಷ್ಟು ಕುರುಕುಲು ತಿಂಡಿಗಳ ಸಮಾರಾಧನೆ. ಜತೆಗೆ ಅಂದಿನ ಕಾರ್ಯಕ್ರಮದ ಕುರಿತು ಪೀಠಿಕೆ ಹಾಕಿಕೊಂಡೆವು.
ತೊರೆ ಕಡೆಗೆ
ಮುಂದಿನದು ಹೋಮ್ ಸ್ಟೇಗಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿದ್ದ ತೊರೆ (ತೋಡು) ಕಡೆ ಪ್ರಯಾಣ. ನಡೆದುಕೊಂಡೇ ಹೋದೆವು. ದಾರಿ ಮಧ್ಯೆ ಮಾತುಗಳ ಭರ ಜೋರಿತ್ತು.ಪತ್ರಿಕೋದ್ಯಮ, ಸಿನೆಮಾ, ರಾಜಕೀಯ, ಸಾಮಾಜಿಕ ಸ್ಥಿತಿಗಳ ಬಗ್ಗೆಯೂ ಚರ್ಚೆ ಜೋರಾಗಿತ್ತು.(ಕೆಲವೊಂದು ಗಂಭೀರವಾಗಿತ್ತು) ಕಾಡಿನ ಪ್ರದೇಶವಾಗಿದ್ದ ಕಾರಣ ನಮ್ಮ ತಂಡದಲ್ಲಿದ್ದ ಯುವ ಛಾಯಾಗ್ರಾಹಕ ಕೃಷ್ಣ ಕಿಶೋರ್, ಅಪರೂಪದ ಸಸ್ಯ, ಕೀಟ ಹಾಗು ಪ್ರಾಣಿಗಳನ್ನು ತಮ್ಮ…. ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದರು. ನಮ್ಮ ತಂಡ ದಾರಿ ಮಧ್ಯದಲ್ಲಿ ಸಿಕ್ಕಿದ ಕೆಲವು ಮನೆಗಳಿಗೆ ಹೋಗಿ ಅಲ್ಲಿದ್ದ ಜನರನ್ನೂ ಮಾತನಾಡಿಸಿತು. ಮುಗ್ಧರು, ಪಾಪ, ನಮ್ಮನ್ನು ಹೊರಗಿನವರು ಎಂದು ಅಂದುಕೊಳ್ಳಲಿಲ್ಲ. ಆತ್ಮೀಯವಾಗಿ ಮಾತನಾಡಿಸಿದರು. ಸಿಟಿ ಜನರಿಗೂ ಇವರಿಗೂ ಏನು ಪರಾಕು ಇದೆ ಎಂದು ಮಾತಾಡಿಕೊಂಡೆವು. ಜತೆಗೆ ಆ ಪ್ರದೇಶದಲ್ಲಿ ಬೆಳೆಯುವ ಕೆಲವು ವಿಶೇಷ ಗಿಡಗಳ ಬಗ್ಗೆ ಪರಿಚಯ ಮಾಡಿಕೊಂಡೆವು. ತೊರೆಯಲ್ಲಿ ನೀರಿನಾಟ, ಫೋಟೋಗ್ರಫಿಗೆ ಜಾಸ್ತಿ ಆದ್ಯತೆಯಿತ್ತು.
ಊಟದ ಸಮಯ:
ವಾಪಸ್ ಬಂದಾಗ ನಮ್ಮೆಲ್ಲರ ಹೊಟ್ಟೆ ಊಟಕ್ಕಾಗಿ ಹಾತೊರೆಯುತ್ತಿತ್ತು. ಗೀ ರೈಸ್, ಚಿಕನ್ ಸಾರು, ಇದು ನಾನ್ ವೆಜ್ ಮೆನು. ಗೀ ರೈಸ್, ಪ್ಲೇಯಿನ್ ರೈಸ್, ತಿಳಿ ಸಾರು, ವೆಜ್ ಸಲಾಡ್, ವೆಜ್ ಮೆನು. ಆಯ್ಕೆ ಅವರವರಿಗೆ ಬಿಟ್ಟಿದ್ದು, ಎರಡೂ ತಿಂದರೂ ಪ್ರಶ್ನಿಸುವವರಿರಲಿಲ್ಲ. ಬರೇ ತಿನ್ನೊ ಕೆಲಸ ಅಷ್ಟೇ ಮಾಡಲಿಲ್ಲ. ಮಾಮ್ ನ ಕುರಿತು ಒಬ್ಬೊಬ್ಬರು ಮಾತನಾಡಲು ಶುರು ಮಾಡಿದರು. ಹೀಗಾಗಿ ಊಟ ಸಾಗಿದ್ದೇ ಗೊತ್ತಾಗಲಿಲ್ಲ. ಇನ್ನೊಂದು ವಿಷಯ, ಕೆಲವೇ ಗಂಟೆಗಳ ಮೊದಲು ಪರಸ್ಪರ ಪರಿಚಯ ಮಾಡಿಕೊಂಡಿದ್ದ ನಾವು ಅಷ್ಟೊತ್ತಿಗಾಗಲೇ ಕುಟುಂಬದ ಸದಸ್ಯರಂತೆ ಆದೆವು.ಎಷ್ಟೆಂದರೆ, ಹೆಗಲ ಮೇಲೆ ಕೈ ಹಾಕಿ ಮಾತನಾಡಿಸುವಷ್ಟು, ದಪ್ಪ, ಸಪೂರ ಎಂದು ಕಿಚಾಯಿಸುವಷ್ಟು.
ಟ್ರಕ್ಕಿಂಗ್ ಆರಂಭ
ಊಟದ ಸ್ವಲ್ಪ ಹೊತ್ತು ವಿಶ್ರಾಂತಿ ಎನ್ನವುದು ನಮ್ಮ ಯೋಜನೆ. ಆದರೆ ದೇಹಕ್ಕೆ ರೆಸ್ಟ್ ಸಿಗುತ್ತಿತ್ತೇ ಹೊರತು ಮಾತಿಗಿರಲಿಲ್ಲ. ಅಂತೂ, ಬೆಟ್ಟತ್ತೂರು ಬೆಟ್ಟ ಏರುವ ಸಮಯ ಬಂತು. ಗೈಡ್ ಆಗಿ ಕಂದ ಅವರು ನಮ್ಮ ಜತೆಗಿದ್ದರು. ಮಚ್ಚು(ಕತ್ತಿ) ಯಲ್ಲಿ ನಮ್ಮ ದಾರಿಗೆ ಅಡ್ಡ ಬರುವ ಪೊದೆಗಳನ್ನು ಸವರಿಕೊಂಡು ನಮ್ಮ ತಂಡವನ್ನು ಅವರು ಮುನ್ನಡೆಸಿದರು. ಸುಮಾರು ವರ್ಷಗಳಿಂದ ಕಚೇರಿ, ಕೆಲಸವೆಂದಷ್ಟೇ ಯೋಚಿಸಿದ್ದ ನಮಗೆ ಬೆಟ್ಟ ಏರುವಾಗ ಏದುಸಿರು ಬಂದದ್ದು ಸುಳ್ಳಲ್ಲ. ಇನ್ನೇನು ಅರ್ಧ ಬೆಟ್ಟ ಏರುತ್ತಿದ್ದ ಹಾಗೆ, ಕೃಷ್ಣ ಮೋಹನ್ ಕಾಲಿನೆಡೆಗೆ ತೋರಿಸಿದ ಹಲೀಮತ್ ಸಾದಿಯಾ“ನಿಮ್ಮ ಕಾಲಿಗೆ ಜಿಗಣೆ ಏರಿದೆ,’’ ಎಂದು ಹೇಳುವುದು ಕೇಳಿಸಿತು. ಅಷ್ಟೇಳಿ ಸ್ವಲ್ಪ ಹೊತ್ತಿನ್ಲಲಿ ಆಕೆಯೂ “ಅಯ್ಯಯ್ಯೋ ಜಿಗಣೆ’’ ಎಂದು ಕೂಗಲು ತೊಡಗಿದರು. ಎಲ್ಲರೂ ತಮ್ಮ ತಮ್ಮ ಕಾಲುಗಳನ್ನು ನೋಡುವ ಸದರಿ ಎದುರಾಗಿತ್ತು. ಜಿಗಣೆ ಯಾರನ್ನೂ ಬಿಡದೆ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವ ಕಾಯಕ ಆರಂಭಿಸಿತ್ತು. ಕಂದ ಅವರು ಕಾಡಿನಲ್ಲಿ ಸಿಗುವ ಕಿತ್ತಳೆ ಜಾತಿಯ ಹಣ್ಣನ್ನು ಕೊಯ್ದು ಕೊಟ್ಟು ಕಾಲಿಗೆ ಉಜ್ಜಿಕೊಳ್ಳಲು ಹೇಳಿದರು. ನಾಟಿ ಔಷಧ ಫಲಿಸಿತ್ತು. ಜಿಗಣೆ ಕಾಟ ಸ್ವಲ್ಪ ಹೊತ್ತಿನಲ್ಲೇ ನಿವಾರಣೆ. ಬೆಟ್ಟದ ತುದಿ ತಲುಪಿದೆವು. ಅಲ್ಲಿ ಮರ ಏರುವ ಪ್ರೊಗ್ರಾಂ ಇತ್ತು.ಅಧ್ಯಕ್ಷರೂ ತಾನೇನು ಕಡಿಮೆಯಿಲ್ಲ ಎನ್ನುವ ರೀತಿಯಲ್ಲಿ ಮರ ಏರಿ ಸಾಮರ್ಥ್ಯ ಪ್ರದರ್ಶಿಸಿದರು!
15 ಬಾರಿ ಹಾರಿದ ಸುರೇಶ್
ಸೂರ್ಯಾಸ್ತ ಸಮಯ ಬರುತ್ತಿದ್ದಂತೆ ಮತ್ತೆ ಛಾಯಾಗ್ರಹಣಕ್ಕೆ ಶುರು ಹಚ್ಚಿಕೊಂಡೆವು. ಪ್ರಕೃತಿಯ ಫೋಟೊ ತೆಗೆಯುವ ಜತೆಗೆ ನಮ್ಮ ಪೋಟೋಗಳನ್ನೂ ತೆಗೆಸಿಕೊಂಡೆವು. ಈ ವೇಳೆ ನಮ್ಮ ಸುರೇಶ್ ಪಳ್ಳಿಗೆ ಮೇಲಕ್ಕೆ ಜಿಗಿದು ಕೆಳಗಿನಿಂದ ಫೋಟೋ ತೆಗೆಸಿಕೊಳ್ಳುವ ಮನಸ್ಸಾಯಿತು. ಕೃಷ್ಣ ಮೋಹನ್ ಅವರಲ್ಲಿ ಕ್ಯಾಮೆರಾ ಕೊಟ್ಟು, ಜಿಗಿಯಲು ಶುರು ಮಾಡಿದರು. ಆದರೆ, ಮೊಬೈಲ್ ಆಗಿದ್ದ ಕಾರಣ ಔಟ್ ಆಫ್ ಪೋಕಸ್ ಆಗಿ ಫೋಟೋ ಕ್ಯಾಪ್ಚರ್ ಆಗುವುದು ತಡವಾಗುತ್ತಿತ್ತು. ಜತೆಗೆ ಸುರೇಶ್ ಮೇಲಕ್ಕೆ ಹಾರುವ ಲಯವೂ ಪರ್ಫೆಕ್ಟ್ ಆಗಿರಲಿಲ್ಲ. ಹೀಗಾಗಿ ಒಂದೊಂದು ಫೋಟೊ ಒಂದೊಂದು ರೀತಿ ಬಂತೇ ಹೊರತು ಅಂದುಕೊಂಡ ಹಾಗೆ ಆಗಲಿಲ್ಲ. ಹೀಗೇ ಫೋಟೋಗಾಗಿ ಸುರೇಶ್ ಕನಿಷ್ಠ 15 ಬಾರಿ ಮೇಲಕ್ಕೆ ಹಾರಿರಬಹುದು ಎಂದು ನಾವು ಅಂದಾಜಿಸಿದೆವು.
ವಾಪಸ್
ಕೊನೆಗೊಂದು ಸೆಲ್ಫಿ ತೆಗೆದುಕೊಂಡು ವಾಪಸ್ ಬೆಟ್ಟ ಇಳಿಯಲು ಆರಂಭಿಸಿದೆವು. ಜಾರುತ್ತಾ ಬೀಳುತ್ತಾ ಬೆಟ್ಟದ ಬುಡಕ್ಕೆ ಬಂದಿತ್ತು ಇನ್ನಷ್ಟು ಸ್ವಾರಸ್ಯಕರವಾಗಿತ್ತು. ಬೀಳುವುದರಲ್ಲಿ ಸ್ಮೀತಾ ಅವರದ್ದು ಎತ್ತಿದ ಕೈ ಎಂಬುದು ಅದಾಗಲೇ ಸಾಬೀತಾಯಿತು. ಅಂತೂ ಕೆಳಕ್ಕೆ ಬರವಷ್ಟರಲ್ಲಿ ಮಾತುಗಳಿಗೆ ಸ್ವಲ್ಪ ನಿಯಂತ್ರಣ ಬಂದಿತ್ತು. ಅದಕ್ಕೆ ಸುಸ್ತು ಕಾರಣವೇ ಹೊರತು ವಿಷಯದ ಕೊರತೆಯಲ್ಲ.
ಮೀಟಿಂಗ್ , ಕ್ಯಾಂಪ್ ಫೈರ್
ಬೆಟ್ಟದಿಂದ ಇಳಿದು ಸ್ನಾನ ಮುಗಿಸುವಷ್ಟರಲ್ಲಿ ಬಿಸಿ ಬಿಸಿ ಬಜ್ಜಿ, ಆನಿಯನ್ ಪಕೋಡ(ನೀರುಳ್ಳಿ ಬಜೆ) ಕಾಫಿ ಟೀ ರೆಡಿಯಾಗಿತ್ತು. ಅದನ್ನು ತಿಂದು ಮ್ಯಾಮ್ ಮೀಟಿಂಗ್ ಗೆ ತಯಾರಿ ನಡೆಸಿದೆವು.ಕ್ಯಾಂಪ್ ಫೈರ್ ನಲ್ಲೇ ಮೀಟಿಂಗ್ ಮಾಡುವುದು ನಮ್ಮ ಉದ್ದೇಶ. ಅದಕ್ಕಾಗಿ ಕಟ್ಟಿಗೆಗಳನ್ನು ತಂದು ಜೋಡಿಸಿದ್ದೂ ನಾವೇ. ಮೀಟಿಂಗ್ ನಲ್ಲಿ ಮ್ಯಾಮ್ ಅನ್ನು ಸಂಘಟಿಸುವ ಹಾಗೂ ನಾವು ಇಂದು ಆಯೋಜಿಸಿರುವಂಥ ಕಾರ್ಯಕ್ರಮಗಳು ಇನ್ನಷ್ಟು ನಡೆಯಬೇಕು ಎನ್ನುವ ಒಕ್ಕೊರಲ ಅಭಿಪ್ರಾಯ ವ್ಯಕ್ತವಾಯಿತು. ಜತೆಗೆ ಬೆಂಗಳೂರಿನ ಮಾಮ್ ತಂಡವು ಇನ್ನಷ್ಟು ಸಕ್ರಿಯವಾಗಬೇಕು ಎನ್ನುವ ಮನವಿಯೂ ಬಂತು. ಬೆಂಗಳೂರಿನಿಂದ ಬಂದಿದ್ದ ನಾವು ಮುಂದಿನ ದಿನಗಳಲ್ಲಿ ಸಕ್ರಿಯವಾಗುವ ಭರವಸೆ ನೀಡಿದೆವು. ಹೀಗಾಗಿ ಮಾರ್ಚ್ ತಿಂಗಳಲ್ಲಿ ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮ ನಡೆಸುವ ಕುರಿತು ತೀರ್ಮಾನವಾಯಿತು.
ನಿಶಾಚರಿಗಳು
ರಾತ್ರಿ ಊಟದ ಬಳಿಕ ಕಾಡಿನ ಕಗ್ಗತ್ತಲಲ್ಲಿ ತಿರುಗಾಡುವ ಮನಸ್ಸು ಎಲ್ಲರಿಗೂ ಬಂತು. ಅದನ್ನೂ ಮಾಡಿದೆವು. ದೆವ್ವ ಪಿಶಾಚಿ, ದಿಢೀರ್ ಮನುಷ್ಯನ ಮೇಲೆ ಎರಗುವ ಪ್ರಾಣಿಗಳ ಬಗ್ಗೆ ಮಾತನಾಡುತ್ತಾ, ಕಾಡಿನ ಹಾದಿಯಲ್ಲೊಂದು ಸುತ್ತು ಬಂದೆವು. ಬಳಿಕ ಎಲ್ಲರೂ ನಿದ್ದೆ…. ಗುರುವಾರ ಬೆಳಗ್ಗೆ 5.30ಕ್ಕೆ ಎದ್ದ ನಾವು ಕಾಫಿ ಕುಡಿದು ಫ್ರೆಶ್ ಆಗಿ ಮತ್ತೆ ವಾಪಸ್ ಪ್ರಯಾಣ ಆರಂಭಿಸಿದೆವು. ಮಂಗಳೂರಿನ ಗೆಳೆಯರು 9.30ಕ್ಕೆ ತಲುಪಿದರೆ, ನಾವು 11.30ಕ್ಕೆ ಬೆಂಗಳೂರಿಗೆ ಕಾಲಿಟ್ಟೆವು.
-ಸುಕೇಶ ಪಡಿಬಾಗಿಲು, ಮಾಮ್ ಬೆಂಗಳೂರು ಚಾಪ್ಟರ್.
Photos: Krishnakishor.
Photos: Krishnakishor.
ಸಂಪರ್ಕಕ್ಕೆ ಮಾಹಿತಿ...
VIRGIN Mountains,
Bettathur village, MADENAADU Post, MAdikeri Taluk, KOdagu
Trekking, Mountain Climbing, Tetnt pitching, sight seeing, campfire etc..
MAIL-virginmountains@gmail.com
web: www.virginmountains.com
contact: 9343650640
9980568625
9449408625
8277236160.

👍👌 very nice
ReplyDeleteನಿರೂಪಣೆ ನವಿರಾಗಿದೆ.ಇನ್ನೊಮ್ಮೆ ಪ್ರವಾಸದಲ್ಲಿ ಎಲ್ಲ ಸಿಗೋಣ
ReplyDeleteನಿರೂಪಣೆ ನವಿರಾಗಿದೆ.ಇನ್ನೊಮ್ಮೆ ಪ್ರವಾಸದಲ್ಲಿ ಎಲ್ಲ ಸಿಗೋಣ
ReplyDelete