Sunday, 21 December 2014

ಮಾಮ್’….. ನಿನ್ನ ನೆನದು...

ಗೆಳೆಯರೇ, ನಿನ್ನೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗದಿರುವುದಕ್ಕೆ ವಿಷಾದವಿದೆ. ಕೆಲಸದ ನಿಮಿತ್ತ ಬೆಳಗಾವಿಯಲ್ಲಿ ಇದ್ದುದರಿಂದ ಸಾಧ್ಯವಾಗಲಿಲ್ಲ. ಆದರೆ, ಕಾರ್ಯಕಾರಿ ಸಮಿತಿಯ ತಂಡದ ಬಗ್ಗೆ , ಮಾಡಿರುವ ಕೆಲಸದ ಬಗ್ಗೆ ಹೆಮ್ಮೆ ಇದೆ... ಕೆಲವು ಅಕ್ಷರಗಳನ್ನು ಗೀಚಿದ್ದೇನೆ.... ಪರಿಶೀಲಿಸಿ... ಬ್ಲಾಗ್‌ನಲ್ಲಿ ಪ್ರಕಟಿಸಲು ಕೃಪೆ ಮಾಡಿ
ಧನ್ಯವಾದಗಳೊಂದಿಗೆ
                                                                                                      -ಸೂರ್ಯ


 ---------------------------------------------------------------

ಕೆಲವು ಬಾರಿ ಹಾಗಾಗುತ್ತದೆ. ಮನಸ್ಸು ತನ್ನಿಂತಾನೇ ಭಾರವಾಗುತ್ತದೆ. ಬೇಡ ಬೇಡ ಎಂದರೂ ಕಣ್ಣಂಚಿನಲ್ಲಿ ನೀರ ಪಸೆ ಒತ್ತರಿಸುತ್ತದೆ. ನಿನ್ನೆ ನನಗೆ ಆದದ್ದೂ ಅದೆ! ವಿಧಾನ ಮಂಡಲದ ಚಳಿಗಾಲದ ಅಧಿವೇಶನದ ವರದಿಗಾರಿಕೆಗಾಗಿ ಬೆಳಗಾವಿಗೆ ಹೋಗಿದ್ದವನಿಗೆ ಅಧಿವೇಶನದ ಕೊನೆಯ ದಿನವಾದ ಶನಿವಾರ, ಕಚೇರಿಗೆ ವರದಿಯನ್ನು ಕಳುಹಿಸಿ ಹೋಟೆಲ್‌ ರೂಮಿನಲ್ಲಿ ಮಲಗಿಕೊಂಡು ಎಂಸಿಜೆ-25 ವಾಟ್ಸ್‌ಆಪ್‌ ಗ್ರೂಪಿನಲ್ಲಿ ಒಂದರ ಹಿಂದೆ ಒಂದರಂತೆ ತೇಲಿ ಬರುತ್ತಿದ್ದ ಚಿತ್ರಗಳನ್ನು ನೋಡುತ್ತಿದ್ದರೆ ಮನಸ್ಸು, ಖುಷಿ-ವ್ಯಥೆಯಿಂದ ವಿಲವಿಲ ಒದ್ದಾಡಿತು. ಒಸರಿದ್ದ ಕಂಬನಿಯನ್ನು ನೀರಿನಿಂದ ತೊಳೆದುಕೊಂಡೆ.
***
ಡಿಸೆಂಬರ್‌ 19ಕ್ಕೆ ಅಧಿವೇಶನ ಕೊನೆಗೊಳ್ಳಬಹುದು ಎಂಬ ನೀರಿಕ್ಷೆಯೊಂದಿಗೆ 8 ರಂದು ರಾತ್ರಿ ಬೆಂಗಳೂರಿನಿಂದ ಬೆಳಗಾವಿ ಬಸ್‌ ಹತ್ತಿದ್ದೆ. 17, 18ರಂದು ನಡೆದಿದ್ದ ಕಲಾಪಗಳ ಚಿತ್ರಣ ನೋಡಿ, 19ರಂದೇ ಅಧಿವೇಶನ ಕೊನೆಗೊಳ್ಳಬಹುದು ಅಂದುಕೊಂಡಿದ್ದೆ. ಉಹ್ಞುಂ. ಹಾಗಾಗಲಿಲ್ಲ. ಶನಿವಾರವೂ ಇದೆ ಎಂದಾಯಿತು. ನನಗಾಗಿದ್ದು ನಿರಾಸೆ. ಹೋಗಲಿ... ನಾಳೆಯಾದರೂ (ಶನಿವಾರ) ಸರಿಯಾಗಿ ಕಲಾಪ ನಡೆಯಬಹುದು ಎಂದು ಎಣಿಸಿದ್ದೆ. ಆದರೆ ಆಗಿದ್ದೇನು? ಕೇವಲ ಅರ್ಧ ಗಂಟೆಯಲ್ಲಿ ಎರಡೂ ಸದನಗಳಲ್ಲಿ ಕಲಾಪಕ್ಕೆ ತೆರೆ ಬಿತ್ತು. ಮನಸ್ಸಲ್ಲಿ ಹುಟ್ಟಿದ್ದು ಶೋಕ ಮಿಶ್ರಿತ ಆಕ್ರೋಶ. ಇದನ್ನ ನಿನ್ನೆಯೇ ಮಾಡಬಹುದಿತ್ತಲ್ವಾ? ಎಂದು ಯಾರಾಲ್ಲೂ ಹೇಳಿಕೊಳ್ಳಲಾಗದ ಆವೇಶ. ಮಧ್ಯಾಹ್ನ 12.30ರ ಹೊತ್ತಿಗೆಲ್ಲ ಸುದ್ದಿ ಬರೆದು ಕಂಪ್ಯೂಟರ್‌ ಶಟ್‌ಡೌನ್‌ ಬಟನ್‌ ಒತ್ತಿಯಾಗಿತ್ತು. ಶುಕ್ರವಾರವೇ ಅಧಿವೇಶನಕ್ಕೆ ಮಂಗಳ ಹಾಡಬಹುದಿತ್ತಲ್ಲ? ಇಂದು ಬೆಂಗಳೂರಿನಲ್ಲಿ ಹಾಯಾಗಿ ಮಲಗಬಹುದಿತ್ತು ಎಂದು ಸಿಡಿಮಿಡಿಗೊಂಡಿದ್ದ ಪತ್ರಕರ್ತರ ಗುಂಪಿನಲ್ಲಿ ನಾನು ಇದ್ದೆ. ಆದರೆ, ನಾನು ಬೆಂಗಳೂರಿನ ಜಾಗದಲ್ಲಿ ಕೊಣಾಜೆ ವಿಶ್ವವಿದ್ಯಾಲಯದ ‘ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯ’ವನ್ನು ಸೇರಿಸಿದ್ದೆ. ಮಲಗುವುದರ ಬದಲು ‘ಸ್ನೇಹ ಮಿಲನ’ದ ಬಗ್ಗೆ ಚಿಂತಿಸಿದ್ದೆ.
***

ಎಲ್ಲದಕ್ಕೂ ಕಾರಣ ಇದೆ. ಗೆಳೆಯ ಕೃಷ್ಣ ಕಿಶೋರ್‌ ಮೂರು ತಿಂಗಳ ಹಿಂದೆ ಎಂಸಿಜೆ ಹಳೆ ವಿದ್ಯಾರ್ಥಿಗಳನ್ನು ಒಗ್ಗೂಡಿಸಿ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಪ್ರಸ್ತಾಪಿಸಿದಾಗ ಸಂತಸಪಟ್ಟಿದ್ದೆ. ಹಲವು ನಿರೀಕ್ಷೆಗಳೂ ಹುಟ್ಟಿದ್ದವು. ಎಂಸಿಜೆಯಿಂದ ವೃತ್ತಿ ಬದುಕನ್ನು ಕಂಡ ಮಂಗಳೂರಿನಲ್ಲಿರುವ ಹಿರಿಯ -ಕಿರಿಯ ಸಮಾನ ಮನಸ್ಕ ಗೆಳೆಯರು ಈ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದಾಗಲೇ, ಅದರ ಭಾಗವಾಗಲು ನಾನು ಅಲ್ಲಿ ಇಲ್ವಲ್ಲ ಎಂಬ ನೋವು ಕಾಡಿತ್ತು. ಪತ್ರಿಕೋದ್ಯಮ ಹಳೆ ವಿದ್ಯಾರ್ಥಿಗಳ ಸಂಘವನ್ನು ಕಟ್ಟು ಯತ್ನ ಹಿಂದೆ ಒಮ್ಮೆ ಬೆಂಗಳೂರಿನಲ್ಲಿ ನಡೆದಿತ್ತು. ಆದರೆ, ಅದು ಯಶಸ್ವಿಯಾಗಲಿಲ್ಲ ಎಂದು ಕೇಳಿದ್ದೇನೆ. ಹಾಗಾಗಿ, ಮತ್ತೆ ಹೊಸದಾಗಿ ಹಳೆಯ ವಿದ್ಯಾರ್ಥಿಗಳನ್ನು ಒಟ್ಟು ಸೇರಿಸಿ ಸಂಘ ಕಟ್ಟುವ ಬಹುದೊಡ್ಡ ಸವಾಲು ಇತ್ತು. ಅದನ್ನು ಧೈರ್ಯವಾಗಿ ಕೆಲವೇ ಕೆಲವು ಮಂದಿ ಸ್ವೀಕರಿಸಿದ್ದು ಶ್ಲಾಘನೆಗೆ ಅರ್ಹವಾದದ್ದು. ಈ ಎರಡೂವರೆ ತಿಂಗಳಲ್ಲಿ ಏನೆಲ್ಲ ಆಯಿತು ಎಂಬುದು ಎಲ್ಲರಿಗೂ ಗೊತ್ತೇ ಇದೆ. ಬೇರೆ ಬೇರೆ ರಾಷ್ಟ್ರ, ರಾಜ್ಯ, ಜಿಲ್ಲೆ, ತಾಲ್ಲೂಕು, ಊರು, ಹಳ್ಳಿ ಎಂದು ಹಂಚಿ ಹೋದವರೆಲ್ಲ ಮೊಬೈಲು, ಇಂಟರ್‌ನೆಟ್‌ ಮೂಲಕ ಹತ್ತಿರವಾಗಿ, ಕಾರ್ಯಕಾರಿ ಸಮಿತಿಯ ಉದ್ದೇಶಕ್ಕೆ ಹೆಗಲು ನೀಡಿ ತನು -ಮನ -ಧನದಿಂದ ಸಹಕಾರ ನೀಡಿದ್ದು ಇಂದು ಇತಿಹಾಸ. ಕ್ಷಿಪ್ರ ಅವಧಿಯಲ್ಲಿ ‘ದೊಡ್ಡ’ ಕೆಲಸ ಮಾಡಿದ ‘ಚಿಕ್ಕ’ ತಂಡಕ್ಕೆ ಎಲ್ಲರೂ ಹೃದಯಾಳದಿಂದ ಕೃತಜ್ಞತೆ ಸಲ್ಲಿಸಲೇಬೇಕು.
***
2008ರಲ್ಲಿ ಎಂಸಿಜೆ ವಿಭಾಗದಿಂದ ಅಂಕಪಟ್ಟಿಗಳೊಂದಿಗೆ ಹೊರಬಂದ ಮೇಲೆ ಅಲ್ಲಿಗೆ ಭೇಟಿ ನೀಡಿದ್ದು ಎರಡೇ ಬಾರಿ. ನನ್ನ ಮತ್ತು ಎಂಸಿಜೆ ವಿಭಾಗದ ನಡುವೆ ಅಷ್ಟೇನು ಭಾವನಾತ್ಮಕ ಸಂಬಂಧಗಳಿಲ್ಲ. ಹಿರಿಯ ಮತ್ತು ಕಿರಿಯ ವಿದ್ಯಾರ್ಥಿಗಳೊಂದಿಗೂ ಅಷ್ಟಕಷ್ಟೇ. ಅಂತಹದ್ದರಲ್ಲಿ, ಶನಿವಾರದ ಸ್ನೇಹ ಸಮ್ಮಿಲನದ ಚಿತ್ರಗಳನ್ನು ನೋಡಿದಾಗ, ಹಿರಿಯ, ಕಿರಿಯ ಮತ್ತು ಸಹಪಾಠಿ ಗೆಳೆಯರು ಹುರುಪಿನಿಂದ ಭಾಗವಹಿಸಿದ್ದನ್ನು ಕಂಡಾಗ, ಪಾಠ ಮಾಡಿದ ಮೇಷ್ಟ್ರುಗಳ ನಗುಮುಖವನ್ನು ಕಾಣುವಾಗ, ಈಗಿನ ವಿದ್ಯಾರ್ಥಿಗಳು ಸಂಭ್ರಮದಿಂದ ಹಿರಿಯರೊಂದಿಗೆ ಬೆರೆತಿದ್ದನ್ನು ಕಂಡಾಗ.. ಛೇ! ನಾನು ಅಲ್ಲಿರಬೇಕಿತ್ತು ಎಂದು ಮನಸ್ಸು ಚಡಪಡಿಸಿತ್ತು. ನಿಜಕ್ಕೂ ಅದೊಂದು ಅಭೂತಪೂರ್ವ ಕ್ಷಣ. ಛೇ... I missed it.


***
ಅಂತು ಎಂಸಿಜೆ ಹಳೆ ವಿದ್ಯಾರ್ಥಿಗಳಿಗೆಮಾಮ್‌’ (MAAM- Media Alumni Association of Mangalagangothri) ಸಿಕ್ಕಿದ್ದಾಳೆ.  ಅವಳ ಕೈ ಬಲಪಡಿಸಲು ಎಲ್ಲರೂ ಮತ್ತೆ ಮತ್ತೆ ಕೂಡಬೇಕು. ಕೂಡಿ ಸಂಭ್ರಮಿಸಬೇಕು. ಆಕೆ ಹೆಸರಲ್ಲಿ ಅತ್ಯುತ್ತಮ ಕೆಲಸಗಳನ್ನು ಮಾಡಿ ಇತರರಿಗೆ ಮಾದರಿಯಾಗಬೇಕು ಎಂಬ ಆಶಯದೊಂದಿಗೆ ನನ್ನದು ಒಂದೇ ನಿವೇದನೆ..

ಹೇ ಮಾಮ್‌, ನಿನ್ನ ಮಡಿಲಲ್ಲಿ ಬೆಚ್ಚಗೆ ಕೂರುವಾಸೆ. ಕೃಪೆ ತೋರು!


ಪ್ರೀತಿಯಿಂದ....

ಸೂರ್ಯನಾರಾಯಣ ವಿ.
ಪ್ರಜಾವಾಣಿ, ಬೆಂಗಳೂರು
(2006-2008 ಬ್ಯಾಚ್‌)

2 comments:

  1. good words from you soorya.
    yes its true you have missed it. but don't be disheartened as our general body meet will be held on may 2nd. please mark the date and bring as many your mangalore mcj classmates as possible.

    ReplyDelete