Friday, 7 April 2017

MAAM MCJ lecture series fourth Class (04.04.2017) Ahamadul Kabeer

ತಂತ್ರಜ್ಞಾನ ಬಳಕೆಯಿಂದ ಸುದ್ದಿ ಮಾಧ್ಯಮ ಕಾರ್ಯನಿರ್ವಹಣೆ ಬದಲಾವಣೆ: ಕಬೀರ್
------------------------------


ಮಂಗಳಗಂಗೋತ್ರಿ: ತಂತ್ರಜ್ಞಾನದ ಬಳಕೆಯಿಂದಾಗಿ ಸುದ್ದಿ ಮಾಧ್ಯಮಗಳು ಕಾರ್ಯನಿರ್ವಹಿಸುವ ಶೈಲಿ ಬದಲಾಗುತ್ತಿದೆ. ಇಂದು ಸುದ್ದಿ ಪ್ರಸಾರವು ಪೈಪೋಟಿಯಿಂದ ಕೂಡಿದೆ ಎಂದು ಟಿವಿ೯ ಕನ್ನಡ ಸುದ್ದಿ ವಾಹಿನಿಯ ಹಿರಿಯ ಕಾರ್ಯಕ್ರಮ ನಿರ್ಮಾಪಕ ಅಹಮದುಲ್ ಕಬೀರ್ ಹೇಳಿದ್ದಾರೆ.



ಮಂಗಳೂರು ವಿ.ವಿ. ಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಮಂಗಳವಾರ (ಏ.೪) ಮಾಮ್ (ಮೀಡಿಯಾ ಅಲೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ- ಮಾಮ್) ವತಿಯಿಂದ ಆಯೋಜಿಸಲಾಗಿದ್ದ ಉಪನ್ಯಾಸ ಸರಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ‘ಟೆಲಿವಿಷನ್ ಕಾರ್ಯಕ್ರಮ ನಿರ್ಮಾಣ’ ವಿಷಯದ ಕುರಿತು ಮಾತನಾಡಿದರು.

ಸುದ್ದಿ ಗ್ರಹಿಕೆ ಸಾಮರ್ಥ್ಯ ಅಗತ್ಯ:
ಟೆಲಿವಿಷನ್ ಕಾರ್ಯಕ್ರಮ ನಿರೂಪಕನಿಗೆ ಅಥವಾ ಯಾವುದೇ ಪತ್ರಕರ್ತನಿಗೆ ಸುದ್ದಿ ಗ್ರಹಿಕೆಯ ಸಾಮರ್ಥ್ಯ ಪ್ರಮುಖವಾಗಿ ಇರಬೇಕು. ಯಾವ ಸುದ್ದಿ ಹೆಚ್ಚು ಆದ್ಯತೆ ಪಡೆದಿದೆ ಎಂಬುದನ್ನು ಪರಿಶೀಲಿಸಬೇಕು. ಯಾವ ಸುದ್ದಿ ಪ್ರಾರಂಭದಲ್ಲಿ ಪ್ರಸಾರವಾಗಬೇಕು ಮತ್ತು ಯಾವ ಸುದ್ದಿಗೆ ನಂತೆರದ ಸ್ಥಾನ ಕೊಡಬೇಕು ಎಂಬುದನ್ನು ಆತನೇ ನಿರ್ಧರಿಸಬೇಕಾಗುತ್ತದೆ ಎಂದು ಅವರು ತಿಳಿಸಿದರು.

ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಲು ಇಚ್ಛಿಸುವವರು ಭಾಷೆಯ ಮೇಲೆ ಹಿಡಿತ, ಪ್ರಚಲಿತ ವಿದ್ಯಮಾನಗಳ ಕುರಿತ ಮಾಹಿತಿ, ಸಾಮಾನ್ಯ ಜ್ಞಾನ ಹಾಗೂ ಭಾಷಾಂತರ ಕೌಶಲ್ಯವನ್ನು ಹೊಂದಿರಬೇಕು. ಇತರರನ್ನು ಅನುಕರಣೆ ಮಾಡುವಲ್ಲಿ ಪ್ರಯತ್ನಿಸುವ ಬದಲು ಸ್ವಂತಿಕೆಯಿಂದ ಕಾರ್ಯ ನಿರ್ವಹಿಸಬೇಕು. ಉತ್ತಮ ಶಬ್ಧ ಭಂಡಾರದ ಜೊತೆಗೆ ಜನಸಾಮಾನ್ಯರಿಗೂ ಅರ್ಥವಾಗಬಲ್ಲಂತಹ ಸರಳ ಭಾಷಾಜ್ಞಾನ ಅಗತ್ಯ ಎಂದು ಅಭಿಪ್ರಾಯ ಪಟ್ಟರು.

ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ. ಜಿ.ಪಿ. ಶಿವರಾಂ, ಗೌರವ ಪ್ರಾಧ್ಯಾಪಕ ಸಂದೀಪ್ ಮತ್ತಿತರರು ಹಾಜರಿದ್ದರು.
ಇದರೊಂದಿಗೆ ಮಾಮ್-ಎಂಸಿಜೆ ಉಪನ್ಯಾಸ ಸರಣಿ ಕೊನೆಗೊಂಡಿದೆ. ಈ ಹಿಂದೆ ಬಾಲಕೃಷ್ಣ ಹೊಳ್ಳ, ನವೀನ್ ಅಮ್ಮೆಂಬಳ ಹಾಗೂ ಫ್ಲೋರಿನ್ ರೋಚ್ ಮಾಮ್ ಕಡೆಯಿಂದ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲೊಂಡು ವಿವಿಧ ವಿಷಯಗಳ ಕುರಿತು ಎಂಸಿಜೆ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡಿದ್ದಾರೆ.
REPORT: ಮೇಘಲಕ್ಷ್ಮೀ, ಎಂಸಿಜೆ ವಿದ್ಯಾರ್ಥಿನಿ.

Wednesday, 22 March 2017

MAAM MCJ LECTURE SERIES session 3 (21.03.2017)

ರೇಡಿಯೋ ಕಾರ್ಯಕ್ರಮ ನಿರ್ಮಾಣದಲ್ಲಿ 
ಸಮಯಪ್ರಜ್ಞೆ ಅಗತ್ಯ: ಫ್ಲೋರಿನ್ ರೋಚ್
-----------------------




ಮಂಗಳಗಂಗೋತ್ರಿ: ರೇಡಿಯೊ ಕಾರ್ಯಕ್ರಮ ನಿರ್ಮಾಣದಲ್ಲಿ ಕಾರ್ಯಕ್ರಮ ನಿರ್ಮಾಪಕನ ಪಾತ್ರ ಪ್ರಮುಖವಾದುದು. ಕಾರ್ಯಕ್ರಮ ನಿರ್ಮಾಣದ ಪ್ರತಿಯೊಂದು ಹಂತದಲ್ಲೂ ಸಮಯ ಪ್ರಜ್ಞೆ ಅತಿ ಅಗತ್ಯ ಎಂದು ಮಂಗಳೂರು ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕಿ ಫ್ಲೋರಿನ್ ರೋಚ್ ಅಭಿಪ್ರಾಯಪಟ್ಟಿದ್ದಾರೆ. 


ಮಂಗಳೂರು ವಿ.ವಿ.ಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಮಾಮ್ (ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ-ಮಾಮ್) ವತಿಯಿಂದ ಆಯೋಜಿಸಲಾಗಿದ್ದ ಉಪನ್ಯಾಸ ಸರಣಿಯಲ್ಲಿ, ಮಂಗಳವಾರ ರೇಡಿಯೋ ಕಾರ್ಯಕ್ರಮ ನಿರ್ಮಾಣ ಕುರಿತು ಅವರು ಮಾಹಿತಿ ನೀಡಿದರು.
ರೇಡಿಯೋದಲ್ಲಿ ಚರ್ಚೆ, ಸಂದರ್ಶನ, ರೂಪಕ, ನಾಟಕ, ಸುದ್ದಿ ಹೀಗೆ ವಿವಿಧ ಪ್ರಕಾರದ ಕಾರ್ಯಕ್ರಮಗಳನ್ನು ನಿರ್ಮಾಣ ಮಾಡಲಾಗುತ್ತದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ವಿಭಿನ್ನವಾದ ನಿರ್ಮಾಣ ಪ್ರಕ್ರಿಯೆಗಳಿವೆ. ಪ್ರತಿಯೊಂದು ಹಂತದಲ್ಲಿಯೂ ಕಾರ್ಯಕ್ರಮ ನಿರ್ಮಾಣ ಸಿಬ್ಬಂದಿಯ ಪಾತ್ರ ಮುಖ್ಯವಾಗಿರುತ್ತದೆ. ಆಕಾಶವಾಣಿಯು ದೇಶದ ಸುಮಾರು ಶೇ. ೯೮ ರಷ್ಟು ಜನರನ್ನು ತಲುಪುವ ಏಕೈಕ ಮಾಧ್ಯಮವಾಗಿದ್ದು, ಸರ್ಕಾರದ ಯೋಜನೆಗಳ ಕುರಿತಾಗಿ ಉತ್ತಮ ಕಾರ್ಯಕ್ರಮಗಳನ್ನು ನಿರ್ಮಾಣ ಮಾಡುತ್ತಿದೆ. ಆಕಾಶವಾಣಿಯ ಕಾರ್ಯಕ್ರಮಗಳನ್ನು ಆಲಿಸುವುದರಿಂದ  ನಮ್ಮ ಭಾಷಾ ಸಾಮರ್ಥ್ಯದ ವೃದ್ಧಿಯ ಜೊತೆಗೆ ಭಾಷಾ ಶುದ್ಧತೆಯನ್ನು ಕಾಣಬಹುದು ಎಂದು ಅವರು ವಿವರಿಸಿದರು.
ಬಾನುಲಿ ನಾಟಕ: ರೇಡಿಯೊ ನಾಟಕ ನಿರ್ಮಾಣದ ಕುರಿತು ಮಾತನಾಡುತ್ತಾ ಅವರು, ರೇಡಿಯೋ ನಾಟಕಗಳನ್ನು ನಿರ್ಮಾಣ ಮಾಡುವುದು ಸವಾಲಿನ ಕೆಲಸ. ಇದು ಇತರ ನಾಟಕಗಳಂತೆ ಅಲ್ಲ. ರೇಡಿಯೋದಲ್ಲಿ ಕೇವಲ ಧ್ವನಿಯ ಮೂಲಕ ಸನ್ನಿವೇಷಗಳನ್ನು ಶ್ರೋತೃಗಳಿಗೆ ವಿವರಿಸಬೇಕಾಗುತ್ತದೆ. ಇದಕ್ಕಾಗಿಯೇ ಅನೇಕ ವಿಧದ ಧ್ವನಿಗಳ ಸಂಗ್ರಹವಿರುವುದು ಅಗತ್ಯ. ಇಲ್ಲಿ ಸಂಕಲನದ ಪಾತ್ರ ಮಹತ್ವವಾದದ್ದು. ಎಂದರು.


ನೇರ ಪ್ರಸಾರದ ಕಾರ್ಯಕ್ರಮಗಳಲ್ಲಿ ನಿರೂಪಕರು ಎಚ್ಚರಿಕೆಯಿಂದಿರಬೇಕಾಗುತ್ತದೆ. ಇದಕ್ಕಾಗಿ ಸಾಕಷ್ಟು ಪೂರ್ವತಯಾರಿಯನ್ನು ಮಾಡಿಕೊಂಡಿರಬೇಕು. ಮತ್ತು ಕಾರ್ಯಕ್ರಮಗಳಲ್ಲಿ ಎದುರಾಗುವ ಅನಿರೀಕ್ಷತ ಸಂದರ್ಭಗಳನ್ನು ನಿರ್ವಹಿಸುವ ಕೌಶಲ್ಯ ಕಾರ್ಯಕ್ರಮ ನಿರೂಪಕರಿಗೆ ಇರಬೇಕಾಗುತ್ತದೆ. ಎಂದು ಹೇಳಿದರು
ಪತ್ರಿಕೋದ್ಯಮ ವಿದ್ಯಾರ್ಥಿಗಳು ಪ್ರತಿನಿತ್ಯ ಕನಿಷ್ಠ ೧೫ ನಿಮಿಷಗಳ ಕಾಲವಾದರೂ ರೇಡಿಯೋ ಕಾರ್ಯಕ್ರಮಗಳನ್ನು ಆಲಿಸುವ ಅಗತ್ಯವಿದೆ. ರೇಡಿಯೋ ಕಾರ್ಯಕ್ರಮಗಳು ಕೇಳುಗರನ್ನು ಯೋಚಿಸುವಂತೆ ಮತ್ತು ವಿಮರ್ಶಿಸುವಂತೆ ಪ್ರಚೋದಿಸುತ್ತದೆ ಎಂದು ಅವರು ನುಡಿದರು.


ವಿ.ವಿ.ಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಪ್ರೊ. ಜಿ.ಪಿ. ಶಿವರಾಂ ಉಪಸ್ಥಿತರಿದ್ದರು.


ವರದಿ: ಜಯರಾಜ್, ಎಂಸಿಜೆ ವಿದ್ಯಾರ್ಥಿ. 
-------------------------------------------

  
 ಸರಣಿ ಉಪನ್ಯಾಸಕ್ಕೆ ವಿದ್ಯಾರ್ಥಿನಿಯ ಪ್ರತಿಕ್ರಿಯೆ....

ಮನದಾಳದಿಂದ...
 
ನೀವು ನೀಡುತ್ತಿರುವ  ಸರಣಿ ಉಪನ್ಯಾಸ ಕಾರ್ಯಕ್ರಮಗಳು  ನಮಗೆ ತಲುಪುತ್ತಿವೆ ಎಂದು ಹೇಳಲು ಖುಷಿ ಪಡುತ್ತೇನೆ. ರೋಗಿ ಬಯಸಿದ್ದು ಹಾಲು ಅನ್ನ, ವೈದ್ಯ ಹೇಳಿದಸ್ದು ಹಾಲು ಅನ್ನ ಎನ್ನುವ ಮಾತಿನಂತೆ, ನಾವು ಗೆಳೆಯರೆಲ್ಲಾ ಸೇರಿ ಚರ್ಚಿಸಿದ್ದ ವಿಷಯದಂತೆಯೇ ಈಗ ಕಾರ್ಯಕ್ರಮ ನಡೆಯುತ್ತಿವೆ ಎಂದರೆ ತಪ್ಪಾಗಲಾರದು. ಅದೇನೆಂದರೆ ಬೇರೆ ಬೇರೆ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವಂತಹ ಜೊತೆಗೆ ಏಳು ಬೀಳಿನ ಅನುಭವಗಳ ಮಹಾಪೂರವನ್ನೇ ತಮ್ಮ ಯಶಸ್ಸಿನ ಜೋಳಿಗೆಯಲ್ಲಿ ತುಂಬಿಕೊಂಡಿರುವ ಅನೇಕ ಪತ್ರಕರ್ತರಿದ್ದಾರೆ. ಅವರನ್ನು ಕರೆಸಿ, ಎಲ್ಲರನ್ನಲ್ಲವಾದರೂ ನಮ್ಮಿಂದ ಸಾಧ್ಯವಾದವರನ್ನಾದರೂ ಕರೆಸಿ ಅವರ ಅನುಭವಗಳ ಮಾತುಗಳ ಜೊತೆ ಜೊತೆಗೆ ಮಾರ್ಗದರ್ಶನದ ಎಳೆಯನ್ನೂ ಪಡೆದುಕೊಳ್ಳುವಂತಹ ಕಾರ್ಯಕ್ರಮಗಳನ್ನು ನಮ್ಮ ಕಮ್ಯುನಿಕೇಶನ್ ಕ್ಲಬ್‌ನಿಂದ ಮಾಡಿಸಬೇಕು ಎನ್ನುವ ಮಹಾದಾಸೆಯನ್ನು ನಾವು ಆರಂಭದಲ್ಲಿ ಹೊಂದಿದ್ದೆವು. ಆದರೆ ಅನಿವಾರ‌್ಯ ಕಾರಣಗಳಿಂದ  ಸಾಧ್ಯವಾಗಲಿಲ್ಲ. ಆದರೆ ಅದನ್ನು ನೀವು ಮಾಮ್‌ನ ಸರಣಿ ಕಾರ್ಯಕ್ರಮಗಳ ಮೂಲಕ ನೀಡುತ್ತಿರುವುದಕ್ಕೆ ತುಂಬು ಹೃದಯದ ಧನ್ಯವಾದಗಳು.
ಇದರೊಂದಿಗೆ ಇನ್ನೊಂದು ಮಾತು ಹೇಳಬಯಸುತ್ತೇನೆ. ಒಂದು ತಿಂಗಳೊಳಗೆ ಅಥವಾ ಎರಡು ತಿಂಗಳುಗಳೊಳಗೆ ಹಲವು ಕಾರ್ಯಕ್ರಮಗಳನ್ನು ಮಾಡುವ ಬದಲಾಗಿ. ಒಂದು ತಿಂಗಳಲ್ಲಿ ಎರಡು ಕಾರ್ಯಕ್ರಮಗಳಂತೆ, ಮುಂದಿನ ತಿಂಗಳುಗಳಲ್ಲಿ ಪ್ರತೀ ವರ್ಷವೂ ಇದು ಮುಂದುವರಿದರೆ ತುಂಬಾ ಸಂತೋಷ. ಒಂದು ಪುಟ್ಟ ಕಿವಿಮಾತು ಹೇಳಬಯಸುತ್ತೇನೆ, ಪಿಪಿಟಿಯಲ್ಲಿರುವುದನ್ನು ಓದಿ ಅಲ್ಪ ಸ್ವಲ್ಪ ವಿವರಿಸುವ ಬದಲು, ಮಾತುಕತೆಯಂತೆ ವಿಚಾರ ವಿನಿಮಯ ನಡೆದರೆ, ನಮ್ಮ ಏಕಾಗ್ರತೆ ಚಂಚಲವಾಗುವುದನ್ನೂ ತಪ್ಪಿಸಬಹುದು. ಯಾಕೆಂದರೆ ಹೆಚ್ಚಿನವರು ಅದರತ್ತ ಗಮನ ಕೊಡುವುದೇ ಇಲ್ಲ. ಮತ್ತು ಡಯಾಸ್ ಹತ್ರವೇ ನಿಂತು ಮಾತನಾಡುವ ಬದಲು ತರಗತಿಯೆಲ್ಲೆಡೆ, ವಿದ್ಯಾರ್ಥಿಗಳ ಬಳಿ ಬಂದು ಸಂಭಾಷಣೆ ಗೈದರೆ, ಅನುಭವಗಳನ್ನು ಹಂಚುತ್ತಾ ಹೋದರೆ ಅವರ ಅನುಭವಗಳೊಳಗೆ ನಾವು ಒಬ್ಬರಾಗಲು ಸಾಧ್ಯ ಮತ್ತು ಅಂತಹ ವಾತಾವರಣ ಸೃಷ್ಟಿಯಾಗಲು ಸಾಧ್ಯ ಎನ್ನುವಂತಹದು ನನ್ನ ಅಭಿಪ್ರಾಯವೂ ಒಟ್ಟಿಗೆ ಕೋಲಿಕೆಯೂ ಹೌದು.
ಧನ್ಯವಾದಗಳೊಂದಿಗೆ,

 
-ಮೇಘಲಕ್ಷ್ಮಿ ಮರುವಾಳ

Sunday, 19 February 2017

maammangalore.com ಅನಾವರಣ



ಮೀಡಿಯಾ ಅಲ್ಯೂಮ್ನಿ ಆಫ್ ಮಂಗಳಗಂಗೋತ್ರಿ (ಮಾಮ್) ಸಂಘಟನೆಯ ಬಹುದಿನದ ಕನಸು ನನಸಾಗಿದೆ. ನಮ್ಮದೇ ಆದ ವೆಬ್ ಸೈಟ್ maammangalore.com ಸಿದ್ಧಗೊಂಡು ಕಳೆದ ಫೆ.19, 2017ರಂದು ಮಂಗಳೂರು ವಿ.ವಿ.ಯಲ್ಲಿ ನಡೆದ ಹಳೆ ವಿದ್ಯಾರ್ಥಿಗಳ ಸಮಾವೇಶ ಸಂಗಮದ ಭವ್ಯ ವೇದಿಕೆಯಲ್ಲಿ ಲೋಕಾರ್ಪಣೆಗೊಂಡಿತು. ಮಾ ಅಧ್ಯಕ್ಷ ದಿನೇಶ್ ಕುಮಾರ್ ಆಳ್ವ ವೆಬ್ ಸೈಟಿಗೆ ಚಾಲನೆ ನೀಡಿದರು.
ಇದೇ ಸಂದರ್ಭ ವೇದಿಕೆಯಲ್ಲಿ ಈ ವರ್ಷದ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಮಾಮ್ ಉಪಾಧ್ಯಕ್ಷ ಡಾ.ರೋನಾಲ್ಡ್ ಅನಿಲ್ ಫರ್ನಾಂಡಿಸ್ ಅವರನ್ನು ಗೌರವಿಸಲಾಯಿತು.
ಮಾಮ್ ಅಧ್ಯಕ್ಷೆ ಫ್ಲೋರಿನ್ ರೋಚ್ ಪ್ರಾಸ್ತಾವಿಕ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಕೃಷ್ಣಮೋಹನ ವಂದಿಸಿದರು.
ಸುಮಾರು 31 ಹಳೆ ವಿದ್ಯಾರ್ಥಿಗಳ ಮಾ ಸಂಗಮದಲ್ಲಿ ಪಾಲ್ಗೊಂಡಿದ್ದರು. ಎಂಸಿಜೆ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ.ಜಿ.ಪಿ.ಶಿವರಾಂ, ಪ್ರಸ್ತುತ ವರ್ಷದ ಎಂಸಿಜೆ ವಿದ್ಯಾರ್ಥಿಗಳು  ಹಾಜರಿದ್ದರು.



ಈ ವೆಬ್ ಸೈಟ್ ವಿನ್ಯಾಸಗೊಳಿಸಿದವರು: ವಸಂತ ಕೇದಿಗೆ
ಉಸ್ತುವಾರಿ: ಡಾ.ರೊನಾಲ್ಡ್ ಅನಿಲ್ ಫರ್ನಾಂಡಿಸ್ ಹಾಗೂ ವೇಣುವಿನೋದ್ ಕೆ.ಎಸ್.

ಈ ವೆಬ್ ಸೈಟ್ ಮೂಲಕ ಆನ್ ಲೈನಿನಲ್ಲೇ ಸದಸ್ಯತ್ವ ಹೊಂದಲು ಅಕಾಶವಿದೆ, ಹಳೆ ಬ್ಲಾಗ್ ಲಿಂಕ್ ಕಲ್ಪಿಲಾಗಿದೆ, ಮಾಮ್ ಚಟುವಟಿಕೆಗಳ ವಿವರ ಮೂಡಿಬರಲಿದೆ.










ಅಪರಾಹ್ನದ ಭೋಜನದ ಬಳಿಕ ಎಂಸಿಜೆ ವಿಭಾಗದ ಸೆಮಿನಾರ್ ಹಾಲ್ ನಲ್ಲಿ ಹಳೆ ವಿದ್ಯಾರ್ಥಿಗಳ ಅನೌಪಚಾರಿಕ ಸಭೆ ನಡೆಯಿತು. ಪ್ರಸ್ತುತ ವರ್ಷದ ವಿದ್ಯಾರ್ಥಿಗಳೊಂದಿಗೆ ಸಂವಾದ, ಮುಂದಿನ ಚಟುವಟಿಕೆಗಳ ಕುರಿತು ಸಮಾಲೋಚನೆ ನಡೆಯಿತು. ಮಾಮ್ ಅಧ್ಯಕ್ಷ ಫ್ಲೋರಿನ್ ರೋಚ್ ಅಧ್ಯಕ್ಷತೆ ವಹಿಸಿದ್ದರು.


ಎಂಸಿಜೆ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ.ಜೆ.ಪಿ.ಶಿವರಾಂ, ಉದಯವಾಣಿ ಸಂಪಾದಕ ಎ.ವಿ.ಬಾಲಕೃಷ್ಣ ಹೊಳ್ಳ, ಪ್ರಧಾನ ಕಾರ್ಯದರ್ಶಿ ಕೃಷ್ಣಮೋಹನ, ಕೋಶಾಧಿಕಾರಿ ಸ್ಮಿತಾ ಶೆಣೈ, ಬೆಂಗಳೂರು ಪ್ರತಿನಿಧಿ ಸೂರ್ಯನಾರಾಯಣ ವಜ್ರಾಂಗಿ, ಉಪಾಧ್ಯಕ್ಷ ಶರತ್ ಹೆಗ್ಡೆ ಕಡ್ತಲ ಮತ್ತಿತರರು ಮಾತನಾಡಿದರು.













 
ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು:
-ಮುಂದೆ ಕೈಗೊಳ್ಳುವ ಮಾಮ್ ಪ್ರವಾಸದಲ್ಲಿ ಪ್ರಸ್ತುತ ದ್ವಿತೀಯ ವರ್ಷದ ವಿದ್ಯಾರ್ಥಿಗಳೂ ಪಾಲ್ಗೊಳ್ಳುವುದು.
-ವ್ಯಾಸಂಗ ಮುಗಿಸಿ ಹೊರಹೋಗುವ ವಿದ್ಯಾರ್ಥಿಗಳು ಮಾಮ್ ಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರ್ಪಡೆಗೊಳಿಸುವುದು.
-ಬೆಂಗಳೂರಿನಲ್ಲಿ ಮಾಮ್ ಚಾಪ್ಟರ್ ನ್ನು ಬಲಪಡಿಸುವುದು.
-ಸದಸ್ಯತ್ವ ಅಭಿಯಾನವನ್ನು ವೇಗಗೊಳಿಸುವುದು.



ಹೊಸದಾಗಿ ಈ ಬಾರಿ ನಾಲ್ವರು ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು.
-ಪ್ರಶಾಂತ್ ಬಿಸ್ಲೇರಿ (ಆಜೀವ ಸದಸ್ಯ)
-ಸಂದೀಪ್
-ನಿತೀಶ್ ಬೈಂದೂರು
-ಶಂಶೀರ್ ಬುಡೋಳಿ (ವಾರ್ಷಿಕ ಸದಸ್ಯರು)


-------------------------
ಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಾಮ್ ಅಲ್ಯೂಮ್ನಿಗಳು (32 ಮಂದಿ):

ನಿತೀಶ್ ಪಿ., 

ರಾಜು ಖಾರ್ವಿ, 
ಚೈತ್ರೇಶ್ ಸಿ., 
ಸುರೇಶ್ ಡಿ.ಪಳ್ಳಿ, 
ಫ್ಲೋರಿನ್ ರೋಚ್, 
ಕೃಷ್ಣಕಿಶೋರ್ ವೈ., 
ಕೃಷ್ಣಮೋಹನ, 
ಸೂರ್ಯನಾರಾಯಣ, 
ಡಾ.ರೊನಾಲ್ಡ್ ಅನಿಲ್ ಫರ್ನಾಂಡಿಸ್, 
ಎ.ವಿ.ಬಾಲಕೃಷ್ಣ ಹೊಳ್ಳ,
 ಸಂದೀಪ್, 
ಸ್ಮಿತಾ ಶೆಣೈ, 
ಅಶ್ವನಿ ಕುಮಾರ್, 
ವಸಂತ್ ಎನ್.ಕೊಣಾಜೆ, 
ಹರೀಶ್ ಮೋಟುಕಾನ, 
ಖಾದರ್ ಶಾ ಬಿ.ಎ., 
ಡಾ.ಪರಶುರಾಮ ಕಾಮತ್, 
ಶರತ್ ಹೆಗ್ಡೆ ಕಡ್ತಲ, 
ಸುಚಿತ್ ಕಿದಿಯೂರು, 
ಪ್ರಶಾಂತ್ ಬಿಸ್ಲೇರಿ, 
ಸಾಯಿಭದ್ರಾ ರೈ, 
ಮೋಹನ್ ಗೇರುಕಟ್ಟೆ, 
ಸರಿತಾ ಎಸ್., 
ನಮ್ರತಾ
ಶಿವರಂಜಿನಿ, 
ವಿದ್ಯಾಕುಮಾರಿ ಎಂ., 
ಕಿರಣ್ ಯು.ಸಿರ್ಸೀಕರ್, 
ಅಕ್ಷತಾ ವಿ.,
 ಗುರುರಾಜ್ ಪಣಿಯಾಡಿ, 
ಶಂಶೀರ್ ಬುಡೋಳಿ, 
ಚಂದ್ರಶೇಖರ ಕುಳಮರ್ವ, 
ವೇಣು ಶರ್ಮ.

ಮಂಗಳೂರು ವಿ.ವಿ.ಹಳೆ ವಿದ್ಯಾರ್ಥಿಗಳ ಸಮಾವೇಶ ಸಂಗಮ ಸಂಪನ್ನ (IN MEDIA)


DECCAN HERALD

UDAYAVANI

VIJAYKARNATAKA

PRAJAVANI
VISHWAVAANI

HOSADIGANTHA
VIJAYVANI
Kannadaprabha
Bfirst.in
Bfirst.in

SAMYUKTHA KARNATAKA







 INAUGURATION


ಅಲ್ಲಿ ಆದೆಷ್ಟೋ ವರ್ಷಗಳ ನಂತರದ ಭೇಟಿಯ ಸಂಭ್ರಮವಿತ್ತು, ಸಹಪಾಠಿಗಳ ಜೊತೆ ಕಾಲೇಜು ದಿನಗಳಲ್ಲಿ ಬೆರೆತ ಆದೆಷ್ಟೋ ನೆನಪುಗಳನ್ನು ಮೆಲುಕು ಹಾಕುತ್ತಾ,    ನೆನಪಿನ ಜೊತೆಗೆ ಕಣ್ಣಂಚಿನಲ್ಲಿ ಅದೆಲ್ಲೋ ಅಲ್ಪ ಸಲ್ಪ ಕಣ್ಣೀರು, ಹಳೆಯ ಗೆಳತನದ ಜೊತೆಗೆ ಹೊಸ ನಗುವಿನೊಂದಿಗೆ ಎಲ್ಲೋ ಇದ್ದ ಸಹಪಾಠಿಗಳ ಪುನರ್ ಮಿಲನಕ್ಕೆ ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಮಂಗಳ ಸಭಾಂಗಣ ದಲ್ಲಿ ಭಾನುವಾರ ಜರಗಿದ ‘ಸಂಗಮಾ’  ಮಂಗಳೂರು ವಿ.ವಿಯ ಹಳೇ ವಿದ್ಯಾರ್ಥಿಗಳ ಮಂಗಳ ಅಲ್ಯುಮಿನಿ ಅಸೋಸಿಯೇಷನ್ ಆಯೋಜಿಸಿದ್ದ  ಕಾರ್ಯಕ್ರಮ ಸಾಕ್ಷಿಯಾಯಿತು.

ವಜ್ರೇಶ್ವರಿ ತಪ್ಪಿದಲ್ಲಿ ಜ್ಯೋತಿ ಬಸ್ಸಿನ ಮೂಲಕ ಪ್ರಯಾಣ. ಮಂಗಳೂರಿನಿಂದ ಕೊಣಾಜೆಯವರೆಗೆ ಪ್ರಯಾಣಿಸಿದವರು  ರಾಮಣ್ಣನ ಹೊಟೇಲಿನಲ್ಲಿ ಚಹಾ ಸವಿದು  ಪಾಠವನ್ನು ಆಲಿಸುತ್ತಿದ್ದೆವು.   ಇದೀಗ ಅದೆಲ್ಲಾ ನೆನಪು ಮಾತ್ರ. ಇಂತಹ ಸವಿನೆನಪುಗಳನ್ನು ಮೆಲುಕು ಹಾಕುತ್ತಲೇ  ಸಂಗಮ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.

ಕಾರ್ಯಕ್ರವನ್ನು ಉದ್ಘಾಟಿಸಿದ ಕಲ್ಲಿಕೋಟೆ ಹಾಗೂ ಕಣ್ಣೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಅಬ್ದುಲ್ ರೆಹೆಮಾನ್ ಬಹಳ ವರ್ಷಗಳ ಹಿಂದೆ ಸ್ಥಾಪನೆಗೊಂಡ ಮಂಗಳೂರು ವಿಶ್ವವಿದ್ಯಾನಿಲಯಕ್ಕೂ ಇಂದಿನ ವಿಶ್ವವಿದ್ಯಾನಿಯಕ್ಕೂ ಅಜಗಜಾಂತರ ವ್ಯತ್ಯಾಸವನ್ನು ಕಾಣಬಹುದಾಗಿದೆ. ಶೈಕ್ಷಣಿಕ, ಸಾಂಸ್ಕೃತಿಕ ಬದಲಾವಣೆಯ ಜತೆಗೆ ವಿನ್ಯಾಸದಲ್ಲೂ ಬದಲಾವಣೆಯಾಗಿದೆ. 35 ವರ್ಷಗಳ ಹಿಂದೆ ಕೊಣಾಜೆ ವಿಶ್ವವಿದ್ಯಾನಿಯದಲ್ಲಿ ಈಗ ಇರುವ ಹಾಗೆ ವಾಹನಗಳ ವ್ಯವಸ್ಥೆ ಇರಲಿಲ್ಲ. ಪ್ರಸ್ತುತ  ಇರುವ ವಿಜ್ಞಾನ ಕೇಂದ್ರ ಕಟ್ಟಡದ ಬಳಿ ಕೇವಲ ಒಂದೇ ಮರವಿದ್ದಿತ್ತು. ಅಂದು ತೊಕ್ಕೊಟು ಹಾಗೂ ಕುತ್ತಾರು ಪ್ರದೇಶಕ್ಕೆ ರಸ್ತೆಯೇ ಇರಲಿಲ್ಲ.  ಕೋಟೆಕಾರು ಬೀರಿ ಮೂಲಕ  ಕೊಣಾಜೆಗೆ ಇದ್ದಂತಹ  ಸಿಪಿಸಿ, ಭಾರತ್  ಹಾಗೂ ವಜ್ರೇಶ್ವರಿ  ಹೆಸರಿನ ಕೇವಲ ಮೂರೇ ಬಸ್ಸುಗಳು ಎಂದಿಗೂ ಸ್ಮರಣೀಯ. ಅದರಲ್ಲಿ ಪ್ರಯಾಣಿಸಿ ಕ್ಲಾಸುಗಳಲ್ಲಿ ಕುಳಿತು ಕೊಳ್ಳಲು ಕುರ್ಚಿ ಮೇಜುಗಳ ವ್ಯವಸ್ಥೆ ಇರಲಿಲ್ಲ. ಕೊಣಾಜೆ ತುಂಬಾ ದೂರ ಹಾಗೂ ವಾಹನಗಳ ವ್ಯವಸ್ಥೆ ಇಲ್ಲದೇ ಇದ್ದ ಕಾರಣ ಯಾವ ಉಪನ್ಯಾಸಕರು ಒಪ್ಪದ ಸ್ಥಿತಿಯಿತ್ತು. ಆದರೆ ಇಂದು ಮಂಗಳೂರು ವಿವಿ ದೇಶದ ಎಲ್ಲಾ ವಿವಿಗಳ ಸಾಲಿನಲ್ಲಿ ಮುಂದುವರೆದು ವಿದೇಶದಲ್ಲೂ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಅದರಲ್ಲೂ ಹಳೆ ವಿದ್ಯಾರ್ಥಿಗಳು ಜೊತೆಗೆ ಸೇರುವಂತಹ ಕಾಯಕ್ರಮ ಶ್ಲಾಘನೀಯ. ಅಲ್ಯುಮಿನಿ ಅಸೋಸಿಯೇಷನ್ ಅಭಿವೃದ್ಧಿ ಹೊಂದಿದ್ದಲ್ಲಿ , ಅದು ನ್ಯಾಕ್ ಮಾನ್ಯತೆಯನ್ನೂ ಪಡೆಯುವಲ್ಲಿ ಸಹಕಾರಿಯಾಗುವುದು.  ಹಲವು ವಿ.ವಿಗಳು ಕೇವಲ  ನ್ಯಾಕ್ ಮಾನ್ಯತೆಗೆ  ಹಳೇ ವಿದ್ಯಾರ್ಥಿಗಳ ಸಂಘವನ್ನು ಸ್ಥಾಪಿಸುತ್ತಿದೆ.  ಇಂತಹ ಸಂಘಗಳಲ್ಲಿ ಹಣದ ಕ್ರೋಢೀಕರಣದ ಜತೆಗೆ ಮೌಲ್ಯಯುತವಾದ ಕಾರ್ಯಕ್ರಮಗಳನ್ನು ನೀಡುವಲ್ಲಿ  ಯಶಸ್ವಿಯಾಗಬೇಕಿದೆ ಎಂದರು.

ಕರ್ಣಾಟಕ ಬ್ಯಾಂಕಿನ ಮಾಜಿ ಅಧ್ಯಕ್ಷ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಹಳೇ ವಿದ್ಯಾರ್ಥಿ ಸಂಘ ಮಾದ  ಗೌರವಾಧ್ಯಕ್ಷ ಅನಂತ ಕೃಷ್ಣ ಮಾತನಾಡಿ, ಮನುಷ್ಯ ಕಲಿತು ಎಷ್ಟು ದೊಡ್ಡ ಮಟ್ಟಕ್ಕೆ ಬೆಳೆದರೂ ಆತ ಕಲಿತ ಶಾಲೆ ಅಥವಾ ಕಾಲೇಜಿಗೆ ಬರುವಾಗ ಮತ್ತೆ ವಿದ್ಯಾರ್ಥಿಯ ಅನುಭವದ ಜೊತೆಗೆ ಭಾವನೆಗಳನ್ನು ಹೊರಹೊಮ್ಮಲು ಸಾಧ್ಯ. ಅದೇ ಭಾವನೆಯಿಂದ  ಹಳೆ ವಿದ್ಯಾರ್ಥಿ ಸಂಘ ಸ್ಥಾಪನೆಯಾಗಿದೆ. 1968 ರ ಮೈಸೂರು ವಿಶ್ವವಿದ್ಯಾನಿಲಯದ ಒಂದು ಅಧ್ಯಯನ ಸಂಸ್ಥೆಯಾಗಿ ಮಂಗಳಗಂಗೋತ್ರಿ ಅಧ್ಯಯನ ಕೇಂದ್ರ ಕೊಣಾಜೆಯಲ್ಲಿ ಸ್ಥಾಪನೆಗೊಂಡಿತ್ತು.  ಕ್ರಮೇಣ ಮಂಗಳೂರು ವಿಶ್ವವಿದ್ಯಾನಿಲಯ  ಸ್ಥಾಪನೆಯಾಯಿತು. ಕನ್ನಡ, ಗಣಿತಶಾಸ್ತ್ರ ಮತ್ತು ಭೌತ ಶಾಸ್ತ್ರದ ಸ್ನಾತಕೋತ್ತರ ವಿಭಾಗಗಳು ಮೊದಲಿಗೆ ಕಾರ‌್ಯಾಚರಿಸಲು ಆರಂಭಿಸಿತು.  ಕಟ್ಟಡಗಳು ಇಲ್ಲದಿದ್ದರೂ  ಮೌಲ್ಯಯುತ ಶಿಕ್ಷಣಕ್ಕೆ ಯಾವುದೇ ಕೊರತೆಯಿರಲಿಲ್ಲ.  ಅದೇ ಕಾರಣಕ್ಕೆ ಜಿಲ್ಲೆಯಿಂದ ಹೊರಗೆ ಹೋದಾಗ ಮಂಗಳೂರಿನ ವಿದ್ಯಾಭ್ಯಾಸ , ಬ್ಯಾಂಕಿಂಗ್ ವ್ಯವಸ್ಥೆ, ಅತಿಥಿ ಸತ್ಕಾರ, ಹೊಟೇಲುಗಳು ಶ್ಲಾಘನೆಗೆ ಪಾತ್ರವಾಗಿದೆ.  6 ವೈದ್ಯಕೀಯ ಕಾಲೇಜುಗಳು, 12 ಇಂಜಿನಿಯರಿಂಗ್ ಕಾಲೇಜುಗಳು 200 ಕ್ಕೂ ಅಧಿಕ ಕಲೆ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ಕಾಲೇಜುಗಳು ಇರುವ  ದಕ್ಷಿಣ ಕನ್ನಡ ಜಿಲ್ಲೆ ದೇಶಲ್ಲಿಯೇ ನಂಬರ್ ಒನ್ ಅನಿಸಿದೆ. ಇದರ ಕೀರ್ತಿ ಮಂಗಳೂರಿಗೆ ಸಲ್ಲುತ್ತದೆ. ಈ ನಿಟ್ಟಿನಲ್ಲಿ ದೇಶದ ಯಾವುದೇ ಭಾಗಕ್ಕೆ ಹೋಗಿ ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಎಂದು ಹೇಳಿಸಿಕೊಳ್ಳಲು ಹೆಮ್ಮೆಯಾಗುತ್ತದೆ. ಬ್ಯಾಂಕಿಂಗ್‌ನಲ್ಲಿ 1905  ರಿಂದ 1945ರ ವರಗೆ ಈ ಜಿಲ್ಲೆಯಲ್ಲಿ 22 ಬ್ಯಾಂಕ್ ಗಳಿದ್ದವು. ಆನಂತರ ಮಿಲನ ಹೊಂದಿ 5 ಬ್ಯಾಂಕ್ ಉಳಿಯಿತು. ಅವುಗಳಲ್ಲಿ 4 ರಾಷ್ಟ್ರೀಯ ಬ್ಯಾಂಕ್ ಗಳಾಗಿ ಪರಿವರ್ತನೆಹೊಂದಿತ್ತು. ಭಾರತದಂತಹ ದೇಶದಲ್ಲಿ ಒಂದೇ ಜಿಲ್ಲೆಯಿಂದ 4 ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ನೀಡಿದ ಕೀರ್ತಿ ಅದು ದಕ್ಷಿಣ ಕನ್ನಡ ಜಿಲ್ಲೆಗೆ ಸಲ್ಲುವ ಮೂಲಕ  ದೇಶದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆಯನ್ನು ಜಿಲ್ಲೆ  ನೀಡಿದೆ ಅನ್ನುವುದು ಹೆಮ್ಮೆಯ ವಿಚಾರವಾಗಿದೆ ಎಂದರು. 


ಟಯರ್ ಪಂಕ್ಚರ್ ಮಾಡಿದವರು ನೀವೇನಾ ?
ಮಂಗಳೂರು ಮಹಾನಗರ ಪಾಲಿಕೆ ಮಾಜಿ ಕಮೀಷನರ್, ಹಿರಿಯ ಅಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಅವರು  ಮಂಗಳೂರು ವಿ.ವಿ.ಯ ಹಳೇ ವಿದ್ಯಾರ್ಥಿ. ಸನ್ನಿವೇಶವೊಂದನ್ನು ವಿವರಿಸಿದ ಅವರು ‘ ಹಿಂದೆ  ಪ್ರೊಫೆಸರ್ ಓರ್ವರನ್ನು ಭೇಟಿ ಮಾಡಲು  ಹೊರಟಾಗ, ಅವರು  ಉತ್ತಮವಾಗಿಯೇ ಬರಮಾಡಿಕೊಂಡರು. ಎರಡು ರಾಷ್ಟ್ರಪ್ರಶಸ್ತಿಯನ್ನು ಪಡೆದುಕೊಂಡವರು ನೀವು, ಒಳ್ಳೆ ಕೆಲಸಗಳನ್ನು ಮಾಡುತ್ತಿದ್ದೀರೆಲ್ಲಾ ಅಂತೆಲ್ಲಾ  ಹೊಗಳಿದರು. ಕಡೆಯದಾಗಿ  ವಿಶ್ವವಿದ್ಯಾನಿಲಯದ ಹೆಸರು ಪ್ರಸ್ತಾಪಿಸಿದಾಗ ,  ಬ್ಯಾಚ್ ನ ವರ್ಷವನ್ನು ಪ್ರೊಫೆಸರ್ ಕೇಳಿದ್ದರು.  ವರ್ಷ ಹೇಳುತ್ತಿದ್ದಂತೆ   ಅಯ್ಯೋ ಆವತ್ತು ಟಯರ್ ಪಂಕ್ಚರ್ ಮಾಡಿದವರು ನೀವೇನಾ ಅಂತಹ ಪ್ರೊಫೆಸರ್  ಕೇಳುತ್ತಿದ್ದಂತೆ , ಅವರ ಕಚೇರಿಯಿಂದ ಕಾಲ್ಕಿತ್ತೆನು’  ಎಂದು   ವಿ.ವಿಯಲ್ಲಿ ಕಲಿಯುವ ವೇಳೆ ನಡೆಸಿದ ತುಂಟತನವನ್ನು ಹೇಳಿಕೊಂಡರು.

 ಮಂಗಳೂರು ವಿ.ವಿ ಕುಲಸಚಿವ ಡಾ.ಕೆ.ಎಂ.ಲೋಕೇಶ್, ಮಾಮ್‌ನ ಅಧ್ಯಕ್ಷ ದಿನೇಶ್ ಕುಮಾರ್ ಆಳ್ವ ಮುಖ್ಯ ಅತಿಥಿಗಳಾಗಿದ್ದರು.
ಸಂಗಮ ಕಾರ್ಯಕ್ರಮದ ಸಂಚಾಲಕ, ಮಾಮ್ ಗೌರವಾಧ್ಯಕ್ಷ  ವೇಣುಶರ್ಮ ‘ಮಾ’ ಚಟುವಟಿಕೆಗಳ  ಕುರಿತು ಮಾಹಿತಿ ನೀಡಿದರು. ಸಂಗಮ ಸಮಾವೇಶದ ಸಂಚಾಲಕ ಪ್ರೊ.ಪಿ.ಎಲ್.ಧರ್ಮ ಪ್ರಾಸ್ತಾವಿಕ ಮಾತನಾಡಿದರು. ಸಂಗಮದ ಸಂಘಟನಾ ಕಾರ್ಯದರ್ಶಿ ಚಂದ್ರಹಾಸ್ ವಂದಿಸಿದರು. ಮಾಮ್ ಕೋಶಾಧಿಕಾರಿ ಸ್ಮಿತಾ ಶೆಣೈ ನಿರೂಪಿಸಿದರು.


QUOTE:


ರಾಜಕಾರಣಕ್ಕೆ  ಏರಲು ಮಂಗಳೂರು ವಿ.ವಿಯಲ್ಲಿ ಕಲಿತ ಪಾಠವೂ ಕಾರಣವಾಯಿತು. ಇಲ್ಲಿನ ಆದರ್ಶಯುತ ಕಲಿಕೆ, ವಿದ್ಯಾರ್ಥಿಗಳ ಜತೆಗಿನ ಬೆರೆಯುವಿಕೆಯಿಂದ ಜನಪ್ರತಿನಿಧಿಯಾಗಲು ಸಾಧ್ಯವಾಯಿತು. ಅಂತಹ ದಿನಗಳನ್ನು ಮತ್ತೆ ಮೆಲುಕು ಹಾಕುವಂತಹ  ಕಾರ್ಯಕ್ರಮವನ್ನು ಒದಗಿಸಿಕೊಟ್ಟಂತಹ ಹಳೇ ವಿದ್ಯಾರ್ಥಿ ಸಂಘದ ಕಾರ‌್ಯ ಶ್ಲಾಘನಾರ್ಹ
-ನಿಂಗಯ್ಯ, ಮಾಜಿ ಸಚಿವ ಹಾಗೂ ಮೂಡಿಗೆರೆ ಶಾಸಕ
------------------------------

ಮಾಮ್ ವೆಬ್ ಸೈಟ್ ಅನಾವರಣ
ಈ ಸಂದರ್ಭ ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (ಮಾಮ್) ಇದರ ವೆಬ್ ಸೈಟ್ maammangalore.comನ್ನು ಉದ್ಘಾಟಿಸಲಾಯಿತು. ಮಾ ಅಧ್ಯಕ್ಷ ದಿನೇಶ್ ಕುಮಾರ್ ಆಳ್ವ ವೆಬ್ ಸೈಟಿಗೆ ಚಾಲನೆ ನೀಡಿದರು. ಮಾಮ್ ಅಧ್ಯಕ್ಷೆ ಫ್ಲೋರಿನ್ ರೋಚ್ ಪ್ರಾಸ್ತಾವಿಕ ಮಾತನಾಡಿದರು. ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಮಾಮ್ ಉಪಾಧ್ಯಕ್ಷ ಡಾ.ರೊನಾಲ್ಡ್ ಅನಿಲ್ ಫರ್ನಾಂಡಿಸ್ ಅವರನ್ನು ಗೌರವಿಸಲಾಯಿತು. ಹಿರಿಯ ವಿದ್ಯಾರ್ಥಿಗಳಾದ ಬಾಲಕೃಷ್ಣ ಹೊಳ್ಳ, ಯೋಗೀಶ್ ಹೊಳ್ಳ ಸಹಿತ ಸುಮಾರು 30ರಷ್ಟು ಮಂದಿ ಎಂಸಿಜೆ ಹಳೆ ವಿದ್ಯಾರ್ಥಿಗಳು ಪಾಲ್ಗೊಂಡರು.
..................

MAPS ಉದ್ಘಾಟನೆ
ಸಮಾರಂಭದಲ್ಲಿ ಮಂಗಳೂರು ವಿ.ವಿ.ರಾಜ್ಯಶಾಸ್ತ್ರ ಹಳೆ ವಿದ್ಯಾರ್ಥಿಗಳ ಸಂಘ ಮಾಪ್ಸ್ (ಮಂಗಳಾ ಅಲ್ಯೂಮ್ನಿ ಪೊಲಿಟಿಕಲ್ ಸೈನ್ಸ್) ಉದ್ಘಾಟನೆ ನಡೆಯಿತು. ಮಾಪ್ಸ್ ಅಧ್ಯಕ್ಷ ಕ್ಸೇವಿಯರ್ ಡಿಸೋಜ, ಸಹ ಕಾರ್ಯದರ್ಶಿ ನಯನಾ, ಕಾರ್ಯಕಾರಿಣಿ ಸಮಿತಿಯ ರಮೀಝಾ, ಸಂಘದ ಗೌರವಾಧ್ಯಕ್ಷ ಡಾ.ಪಿ.ಎಲ್.ಧರ್ಮ ಮತ್ತಿತರರು ಹಾಜರಿದ್ದರು.
..............
ಜೊತೆಗೆ ಯೋಗ ವಿಜ್ಞಾನ ಹಳೆ ವಿದ್ಯಾರ್ಥಿಗಳ ಸಂಘದ ಉದ್ಘಾಟನೆಯೂ ನಡೆಯಿತು. ವಿಭಾಗ ಅಧ್ಯಕ್ಷ ಡಾ.ಕೆ.ಕೃಷ್ಣ ಶರ್ಮ, ಡಾ.ತಿರುಮಲೇಶ್, ಡಾ.ಉದಯಕುಮಾರ್ ಮತ್ತಿತರರು ಹಾಜರಿದ್ದರು.


-ಸಮಾರಂಭದ ವರದಿ: ವಜ್ರ ಗುಜರನ್ ಮಾಡೂರು.

(ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳ ಕಟ್ಟಿಂಗ್ಸ್ ಲಗತ್ತಿಸಲಾಗಿದೆ)

ಗೂಡಿಗೆ ಮರಳಿದ ಹಳೆ ವಿದ್ಯಾರ್ಥಿಗಳ ಕಲರವ...!























ಕಳೆದ ಭಾನುವಾರ (ಫೆ.19,2017) ಮಂಗಳೂರು ವಿ.ವಿ.ಯ ಮಂಗಳಾ ಆಡಿಟೋರಿಯಂ ಎಂಬ ಭವ್ಯ ದೈತ್ಯ ಸಭಾಂಗಣ ಭಾವನೆಗಳ ಸಂಗಮಕ್ಕೆ ಸಾಕ್ಷಿಯಾಗಿತ್ತು. ಎಂದಿನಂತೆ ಆದಿತ್ಯವಾರದ ರಜಾದ ಮೂಡ್ ಅಲ್ಲಿರಲಿಲ್ಲ. ಅಸಹನೀಯ ಮೌನ ಕಾಲ್ಕಿತ್ತಿತ್ತು. ಶ್ವೇತ ಕಟ್ಟಡದ ಸುತ್ತಮುತ್ತ, ಒಳಗೆಲ್ಲಾ ಬಣ್ಣ ಬಣ್ಣದ ಉಡುಪು ತೊಟ್ಟು ಕುತೂಹಲ, ಮುಜುಗರ, ಹಳೆ ನೆನಪುಗಳು, ತುಸು ನಾಚಿಕೆಯಿಂದಲೇ ಬಂದ ಹಳೆ ವಿದ್ಯಾರ್ಥಿಗಳ ಭೇಟಿ, ಸಮಾವೇಶ, ಮಾತುಕತೆಗೆ ಸಾಕ್ಷಿಯಾಯಿತು ಮಂಗಳಾ ಸಭಾಂಗಣ. 


ಬರೋಬ್ಬರಿ 650ಕ್ಕೂ ಮಿಕ್ಕಿ ಮಂಗಳೂರ ವಿ.ವಿ.ಯ ವಿವಿಧ ಸ್ನಾತಕೋತ್ತರ ವಿಭಾಗಗಳ ಹಳೆ ವಿದ್ಯಾರ್ಥಿಗಳು ದೇಶದ ವಿವಿಧೆಡೆಗಳಿಂದ ಆಗಮಿಸಿದ್ದು ಮಾತ್ರವಲ್ಲದೆ ನೆನಪುಗಳನ್ನು ಬಿಚ್ಚಿಟ್ಟರು... ಮತ್ತೆ ಸೇರುವ ಮಾತನಾಡಿದರು... ಹಳೆ ಸಹಪಾಠಿಗಳ ಗುರುತಿಸಿ ಹರಟೆ ಹೊಡೆದು ರೋಮಾಂಚನಗೊಂಡರು. ಕಲಿತ ತರಗತಿಗೆ ಮತ್ತೆ ಭೇಟಿ ಕೊಟ್ಟು ಕ್ಲಾಸಿನಲ್ಲಿ ಕುಳಿತು ಮತ್ತೆ ವಿದ್ಯಾರ್ಥಿಯಾದೇನಾ ಎಂಬ ಕನವರಿಕೆ ಕಂಡು ಮತ್ತೆ ತಮ್ಮ ತಮ್ಮೂರಿಗೆ ಹೊರಟು ಹೋದರು... ಮತ್ತೊಮ್ಮೆ ಭೇಟಿಯಾಗಿ ಇನ್ನಷ್ಟು ಸಹಪಾಠಿಗಳೊಂದಿಗೆ ಮುಂದಿನ ವರ್ಷ ಬರುವ ಭರವಸೆಯೊಂದಿಗೆ...
ಅಂದ ಹಾಗೆ, ಸಂಗಮಾ ಹೆಸರಿನ ಈ ಹಳೆ ವಿದ್ಯಾರ್ಥಿಗಳ ಸಮಾವೇಶವನ್ನು ಆಯೋಜಿಸಿದ್ದು ಮಂಗಳೂರು ವಿ.ವಿ.ಸ್ನೋತಕೋತ್ತರ ಹಳೆ ವಿದ್ಯಾರ್ಥಿಗಳ ಸಂಘ (ಮಂಗಳಾ ಅಲ್ಯೂಮ್ನಿ ಅಸೋಸಿಯೇಶನ್) ಮಾ...
ಕಾರ್ಯಕ್ರಮದ ಪ್ರಚಾರ ಹಾಗೂ ಮಾಧ್ಯಮ ನಿರ್ವಹಣೆ ಹೊಣೆ ಹೊತ್ತಿದ್ದು ಪತ್ರಿಕೋದ್ಯಮ ವಿದ್ಯಾರ್ಥಿಗಳ ಹಳೆ ವಿದ್ಯಾರ್ಥಿಗಳ ಸಂಘ (ಮೀಡಿಯಾ ಅಲ್ಯೂಮ್ನಿ ಅಸೋಸಿಯೇಶ್ ಆಫ್ ಮಂಗಳಗಂಗೋತ್ರಿ) ಮಾಮ್.

ಸುಮಾರು 1500 ಹಳೆ ವಿದ್ಯಾರ್ಥಿಗಳ ನಿರೀಕ್ಷೆಯಿತ್ತಾದರೂ ಅದರ ಸರಿಸುಮಾರು ಅರ್ಧದಷ್ಟು ಮಂದಿ ಆಗಮಿಸಿ ಪಾಲ್ಗೊಂಡು, ಹೆಸರು ನೋಂದಣಿ ಮಾಡಿಕೊಂಡರಲ್ಲದೆ, ಮಾ ಸಂಘಟನೆಯ ಸದಸ್ಯರೂ ಆದರು. ಮಧ್ಯಾಹ್ನ ಊಟದ ಬಳಿಕ ಆಯಾ ವಿಭಾಗಗಳಲ್ಲಿ ಅನೌಪಚಾರಿಕ ಸಭೆಗಳನ್ನು ನಡೆಸಿ ಸಂಘಟನೆ ಬೆಳೆಸುವ ಸಂಕಲ್ಪ ಕೈಗೊಂಡರು.
ಇದೇ ಸಮಾರಂಭದಲ್ಲಿ ನೂತನವಾಗಿ ರಾಜ್ಯಶಾಸ್ತ್ರ ವಿಭಾಗ ಹಾಗೂ ಯೋಗ ವಿಜ್ಞಾನ ವಿಭಾಗದವರ ಹಳೆ ವಿದ್ಯಾರ್ಥಿಗಳ ಸಂಘಗಳ ಉದ್ಘಾಟನೆಯೂ ನಡೆಯಿತು. 2014ರಲ್ಲಿ ಉದ್ಘಾಟನೆಗೊಂಡಿರುವ ಪತ್ರಿಕೋದ್ಯಮ ವಿದ್ಯಾರ್ಥಿಗಳ ಹಳೆ ವಿದ್ಯಾರ್ಥಿಗಳ ಸಂಘ ಮಾಮ್ ಇದರ ನೂತನ ವೆಬ್ ಸೈಟ್ ಅನಾವರಣವೂ ನಡೆಯಿತು.

ಹಳೆ ವಿದ್ಯಾರ್ಥಿಗಳದ ಶಾಸಕ ನಿಂಗಯ್ಯ, ಹಿರಿಯ ಅಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್, ವಿಶೇಷ ಸಾಮರ್ಥ್ಯದ ವಿದ್ಯಾರ್ಥಿನಿ ಇಂಗ್ಲಿಷ್ ವಿಭಾಗದ ಹಳೆ ವಿದ್ಯಾರ್ಥಿನಿ, ಉಪನ್ಯಾಸಕಿ ರಮ್ಯಾ ಐತಾಳ್ ಮತ್ತಿತರ ಭಾವುಕ ನುಡಿಗಳಿಗೆ ಪ್ರೇಕ್ಷಕರ ಕಣ್ಣುಗಳು ಹನಿಗೂಡಿದ್ದು ಸುಳ್ಳಲ್ಲ.

ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳ ಮೂಲಕ ಕಾರ್ಯಕ್ರಮಕ್ಕೆ ಬರಲಾಗದ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ವಿವರ, ಚಿತ್ರ ಸರಣಿಗಳನ್ನು ಈ ಬ್ಲಾಗ್ ಮೂಲಕ ತಲುಪಿಸಲಿದ್ದು, ಮುಂದಿನ ಬಾರಿ ಇನ್ನಷ್ಟು ವಿದ್ಯಾರ್ಥಿಗಳು ಹಳೆ ವಿದ್ಯಾರ್ಥಿಗಳ ಸಂಘಟನೆ ಜೊತೆ ಕೈಜೋಡಿಸುವ ಭರವಸೆ ಸಂಘಟರಲ್ಲಿ ಖಂಡಿತಾ ಮೂಡಿದೆ.
-----------------------------------------------------
ವರದಿ: ಕೃಷ್ಣಮೋಹನ, ಸುರೇಶ್ ಪಳ್ಳಿ, 
ಫೋಟೋಸ್: ಕೃಷ್ಣಕಿಶೋರ್ ಏನಂಕೂಡ್ಲು
 
(ಸಮಾರಂಭದ ವರದಿ ಹಾಗೂ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಗಳ ಮಾಹಿತಿಗೆ ಈ ಕೆಳಗಿನ ಲಿಂಕ್ ಕ್ಲಿಕ್ಕಿಸಿ)

http://maammangalore.blogspot.in/2017/02/blog-post_19.html

-----------------------------------
PHOTO GALLERY







































































PHOTOS: KRISHNAKOSHORE Y.

(For original quality photos please mail us:
reachtomaam.com)
call: 9448424922